ಬೆಂಗಳೂರು: ಕರಾವಳಿ ಭಾಗದ ಜನರ ಸಾಂಪ್ರದಾಯಿಕ ಕ್ರೀಡೆ ಕಂಬಳದಲ್ಲಿ “ಪನಿಕುಲ್ಲುನೆ’ ಎಂಬ ಅನಿಷ್ಠ ಪದ್ದತಿ ಜಾರಿಯಲ್ಲಿದ್ದು, ಅದನ್ನು ತಡೆಯಬೇಕು ಎಂದು ಸಾಹಿತಿ ದೇವನೂರು ಮಹಾದೇವ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಂಬಳ ಕ್ರೀಡೆಯ ಜೊತೆಗೆ ಕೊರಗ ಸಮುದಾಯದವರನ್ನು ಬಳಸಿಕೊಂಡು ಪನಿಕುಲ್ಲುನೆ ಎಂಬ ಅನಿಷ್ಠ ಪದ್ದತಿ ಆಚರಣೆಯಲ್ಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪನಿಕುಲ್ಲುನೆ ಅಂದರೆ ಏನು?: ಕಂಬಳ ನಡೆಯುವ ಹಿಂದಿನ ದಿನದ ಇಡೀ ರಾತ್ರಿ ಕೊರಗ ಸಮುದಾಯದ ವರು ಡೋಲು ಬಾರಿಸುತ್ತ ಕುಣಿಯುವ ಈ ಆಚರಣೆ ಯು ಲೈಂಗಿಕ ಚೇಷ್ಟೆಗಳನ್ನು ಒಳಗೊಂಡಿದ್ದು, ಬೆಳಗಾಗುವಾಗ ಕೊರಗ ಸಮುದಾಯದವರು ತಾವೇ ಕೋಣಗಳು ಎಂದು ಆವಾಹಿಸಿ ಕೊಂಡು ಕಂಬಳದ ಕೆಸರು ಗದ್ದೆಯಲ್ಲಿ ಓಡುತ್ತಾರೆ.
ಈ ಮನುಷ್ಯರ ಕೆಸರುಗದ್ದೆ ಓಟ, ಕೋಣಗಳ ಓಟಕ್ಕೆ ಪೂರ್ವಭಾವಿಯಾಗಿ, ಕೊರಗರು ಕೋಣಗಳಾಗಿ ಗದ್ದೆಯಲ್ಲಿ ಓಡುವುದರ ಮೂಲಕ ಗದ್ದೆಯನ್ನು ಕೆಟ್ಟಕಣ್ಣಿನಿಂದ ಮುಕ್ತಗೊಳಿಸುತ್ತಾರೆ. ಗದ್ದೆಯನ್ನು ಹೀಗೆ ಮುಕ್ತಗೊಳಿಸಿದ ಆನಂತರವೇ ಭೂಮಾಲೀಕರ ಕೋಣಗಳು ಕಂಬಳದ ಗದ್ದೆಗೆ ಇಳಿಯುತ್ತವೆ. (ಕರಾವಳಿ ಜಾನಪದ. ಪುರುಷೋತ್ತಮ ಬಿಳಿಮಲೆ.ಪುಟ 46). ಅಂದರೆ, ಇದು ಅನಿಷ್ಠ, ಕೆಡಕನ್ನು ಕೊರಗರ ಮೇಲೆ ಆವಾಹಿಸುವ ಅಜಲು ಪದ್ಧತಿಯ ಎಂಜಲು ಆಚರಣೆಯಾಗಿದೆ.
ರಾಜಧಾನಿ ಕಂಬಳ ಸಮಿತಿ ಅಸ್ತಿತ್ವಕ್ಕೆ
ಬೆಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಹೇರಿರುವ ನಿಷೇಧ ತೆರವು ಆಗ್ರಹಿಸಿ ಮತ್ತು ಕಂಬಳಕ್ಕೆ ಬೆಂಬಲ ಸೂಚಿಸುವ ಸಲುವಾಗಿ “ರಾಜಧಾನಿ ಕಂಬಳ ಕ್ರಿಯಾ ಸಮಿತಿ’ ಅಸ್ತಿತ್ವಕ್ಕೆ ಬಂದಿದ್ದು, ಜ. 29ರಂದು ನಗರದಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ. ಹೋರಾಟದ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚಿಸಲು ಗುರುವಾರ ನಗರದಲ್ಲಿ ಸಮಿತಿಯ ಸಭೆ ನಡೆಸಲಾಗಿದ್ದು, 50ಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ಜ. 29ರಂದು ನಗರದ ವಿವಿಧ ಭಾಗಗಳಿಂದ ಕಂಬಳ ಪ್ರೇಮಿಗಳು ತಂಡೋಪತಂಡವಾಗಿ ಆಗಮಿಸಿ ಮೈಸೂರು ವೃತ್ತದಲ್ಲಿ ಸೇರಲು ಮತ್ತು ಅಲ್ಲಿಂದ ಸ್ವಾತಂತ್ರ ಉದ್ಯಾನಕ್ಕೆ ಮೆರವಣಿಗೆ ಮೂಲಕ ತೆರಳಲು ತೀರ್ಮಾನಿಸಲಾಯಿತು. ಅಲ್ಲಿ ಕಂಬಳಕ್ಕೆ ಹೇರಿರುವ ನಿಷೇಧ ತೆರವು ಆಗ್ರಹಿಸಿ ಮತ್ತು ಕಂಬಳಕ್ಕೆ ಬೆಂಬಲ ಸೂಚಿಸಿ ವಿವಿಧ ಕ್ಷೇತ್ರಗಳ ಗಣ್ಯರು ಮಾತನಾಡಲಿದ್ದಾರೆ ಎಂದು ಸಮಿತಿಯ ಮುಖಂಡರು ಹೇಳಿದ್ದಾರೆ.
ಇಂದು ಮಾನವ ಸರಪಳಿ: ಕಂಬಳ ಉಳಿವಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಕುಮಾರ್ ಶೆಟ್ಟಿ ಬಣ) ಶುಕ್ರವಾರ ಬೆಳಗ್ಗೆ 11.30ಕ್ಕೆ ಹೆಬ್ಟಾಳ ಪೊಲೀಸ್ ಠಾಣೆಯಿಂದ ವಿಧಾನಸೌಧದವರೆಗೆ ಮಾನವ ಸರಪಳಿ ರಚಿಸಿ ಹೋರಾಟ ಕೈಗೊಳ್ಳಲು ತೀರ್ಮಾನಿಸಿದೆ.