ಮಂಗಳೂರು: ಕಂಬಳ ಕರೆಗೆ ಪ್ರಸ್ತುತ ಋತುವಿನಲ್ಲಿ ಸುಮಾರು 100 ಜೋಡಿ ಮರಿಕೋಣಗಳು ಪ್ರವೇಶಿಸಿದ್ದು, ತುಳುನಾಡಿನ ಈ ಜಾನಪದ ಕ್ರೀಡೆಯ ಭವಿಷ್ಯದ ದೃಷ್ಟಿಯಿಂದ ಇದು ಮಹತ್ವದ ಬೆಳವಣಿಗೆಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಹಲವು ಸವಾಲುಗಳು ಎದುರಾದರೂ ಸಮರ್ಥವಾಗಿ ನಿಭಾಯಿಸಿ ಮುನ್ನಡೆಯುವಲ್ಲಿ ಕಂಬಳ ಯಶಸ್ವಿಯಾಗಿದೆ. ಇದರ ಜನಪ್ರಿಯತೆ ದಿನದಿಂದ ದಿನಕ್ಕೆ ದೇಶ-ವಿದೇಶಗಳಲ್ಲಿ ವ್ಯಾಪಿಸುತ್ತಿದೆ. ಕಂಬಳ ಕ್ರೀಡೆಯನ್ನು ಮುಂದಿನ ಪೀಳಿಗೆ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವ ದೃಷ್ಟಿಯಿಂದ ಮರಿಕೋಣಗಳನ್ನು ಪಳಗಿಸಲಾಗುತ್ತಿದೆ.
ಕಾರ್ಕಳದ ಮಿಯ್ಯಾರಿನಲ್ಲಿ ಇತ್ತೀಚೆಗೆ ಆಯೋಜನೆಗೊಂಡಿದ್ದ ಎರಡು ಸ್ನೇಹ ಕಂಬಳಗಳಲ್ಲಿ ಸುಮಾರು 100 ಜೊತೆ ಸಬ್ ಜೂನಿಯರ್ ಕೋಣಗಳು ಭಾಗವಹಿಸಿದ್ದವು. ಮೂರು ವರ್ಷಕ್ಕಿಂತ ಕೆಳಗಿನ, ಹಲ್ಲು ಬಂದಿರದ (ತುಳುವಿನಲ್ಲಿ ಪರು ಪಾಡಂದಿನ) ಮರಿಕೋಣಗಳನ್ನು ಕಂಬಳದ ಪರಿಭಾಷೆಯಲ್ಲಿ ಸಬ್ ಜೂನಿಯರ್ ಕೋಣಗಳೆಂದು ಕರೆಯಲಾಗುತ್ತದೆ. ಇತ್ತೀಚಿನ ಮೂಡೂರು- ಪಡೂರು ಕಂಬಳದಲ್ಲೂ 45 ಜೊತೆ ಮರಿ ಕೋಣಗಳು ಭಾಗವಹಿಸಿದ್ದವು.
ಪ್ರಸ್ತುತ ವರ್ಷಂಪ್ರತಿ ನಡೆಯುತ್ತಿರುವ ಕಂಬಳಗಳ ಜತೆಗೆ ಹೊಸದಾಗಿ ಕಂಬಳಗಳು ಆಯೋಜನೆ ಗೊಳ್ಳುತ್ತಿವೆ. ನಗರ ಪ್ರದೇಶಗಳಲ್ಲೂ ಹೆಚ್ಚು ಆಕರ್ಷಣೆ ಪಡೆಯುತ್ತಿದ್ದು, ಮಂಗಳೂರಿನ ಹೃದ¿ ಭಾಗದಲ್ಲಿ ನಡೆಯುತ್ತಿರುವ ಬಂಗ್ರಕೂಳೂರು ಕಂಬಳಕ್ಕೆ ಸೇರುತ್ತಿರುವ ಜನಸಮೂಹ ಇದಕ್ಕೆ ನಿದರ್ಶನ ವಾಗಿದೆ. ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಮೂಡೂರು-ಪಡೂರು ಕಂಬಳ ಮತ್ತೆ ಆರಂಭಗೊಂಡಿದೆ. ಮುಂದಿನ ವರ್ಷ ಹೊಸದಾಗಿ ಮೂಡುಬಿದಿರೆಯ ಪಣಪಿಲು, ಬಂಟ್ವಾಳ ತಾಲೂಕಿನ ಬೋಳಿಯಾರಿನಲ್ಲೂ ಕಂಬಳ ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ. ಪ್ರತೀ ಕಂಬಳದಲ್ಲಿ 150ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸುತ್ತಿರುವುದು ಕಂಬಳ ಕ್ರೀಡೆಯ ಜನಪ್ರಿಯತೆಗೆ ಸಾಕ್ಷಿ.
140ಕ್ಕೂ ಅಧಿಕ ಮರಿಕೋಣಗಳು ತರಬೇತಿ ಪಡೆಯುತ್ತಿವೆ ಎಂದು ತೀರ್ಪುಗಾರ ವಿಜಯ ಕುಮಾರ್ ಕಂಗಿತ್ತಿಲು ತಿಳಿಸಿದ್ದಾರೆ.
ಕಂಬಳಕ್ಕೆ ಸಬ್‌ಜೂನಿಯರ್ ಕೋಣಗಳ ಪ್ರವೇಶ ಉತ್ತಮ ಬೆಳವಣಿಗೆ. ಕಂಬಳದ ಆಕರ್ಷಣೆ ವ್ಯಾಪಕವಾಗುತ್ತಿದ್ದು, ಕಂಬಳದ ಕೋಣಗಳನ್ನು ಸಾಕುವ ಒಲವು ಕೂಡ ಹೆಚ್ಚುತ್ತಿದೆ. ಮರಿ ಕೋಣಗಳು ತರಬೇತಾಗಿ ಮುಂದೆ ಜೂನಿಯರ್ ವಿಭಾಗದ ಸ್ಪರ್ಧೆಗಳಲ್ಲಿ ಪಾಲ್ಗೊಳುತ್ತವೆ. ಜಿಲ್ಲಾ ಕಂಬಳ ಸಮಿತಿ ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ.
– ಎರ್ಮಾಳು ರೋಹಿತ್ ಹೆಗ್ಡೆ ,
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು