Advertisement

ಕಂಬಳ ಕರೆಗೆ ಶಾಶ್ವತ ವಿದಾಯ ಹೇಳಿದ ಅಲೆವೂರು- ತಡಂಬೈಲ್ ಕುಟ್ಟಿ.. ಅಭಿಮಾನಿಗಳ ಕಂಬನಿ

09:51 AM Mar 08, 2021 | ಕೀರ್ತನ್ ಶೆಟ್ಟಿ ಬೋಳ |

ಮಣಿಪಾಲ: ಅವನು ಸಾಮಾನ್ಯದವನಲ್ಲ, ಕಂಬಳದ ಕರೆಯಲ್ಲಿ ಚಿಗರೆಯಂತೆ ಓಡಿದವ.. ತನ್ನ ಜೊತೆಯಾದ ಚಾಂಪಿಯನ್ ಕೋಣಗಳಿಗೆ ಸರಿಯಾಟಿಯಾದವ. ಏದೋಟ್ಟುವಿನಿಂದ ತಂಡಬೈಲ್ ವರೆಗೆ ಸಲಹಿದ ಯಜಮಾನರಿಗೆ ಗೌರವ ತಂದಾತ.. ಅದೆಷ್ಟೋ ಕಂಬಳ ಕರೆಯಲ್ಲಿ ಪದಕಗಳಿಗೆ ಕೊರಳೊಡ್ಡಿದ ಕುಟ್ಟಿ ಇದೀಗ ಶಾಶ್ವತ ನಿದ್ದೆಗೆ ಜಾರಿದ್ದಾನೆ.

Advertisement

ಕಂಬಳ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಮೆರೆದಾಡಿದ್ದ ಕುಟ್ಟಿ ಎಂಬ ಕೋಣ ರವಿವಾರ ಮೃತಪಟ್ಟಿದೆ. ಕೆಸರು ಗದ್ದೆಯಲ್ಲಿ ಕ್ಷಣ ಮಾತ್ರದಲ್ಲಿ ಗುರಿ ಮುಟ್ಟುತ್ತಿದ್ದ ಕುಟ್ಟಿ ಅಲ್ಪ ಕಾಲದ ಅಸೌಖ್ಯದಿಂದ ಸಾವನ್ನಪ್ಪಿದೆ.

ಏದೋಟ್ಟು ರಾಜು ಶೆಟ್ಟಿಯವರ ಬಳಿಯಿದ್ದ ಇನ್ನೂ ಸಣ್ಣ ಪ್ರಾಯದ ಕುಟ್ಟಿ 2008-09ರ ಸೀಸನ್ ನಲ್ಲಿ ಮೀಯ್ಯಾರಿನಲ್ಲಿ ನಡೆದ ಅಭ್ಯಾಸದಲ್ಲಿ (ಕುದಿ) ಪಾಲ್ಗೊಂಡಿದ್ದ. ಚಿಗರೆಯಂತೆ ಓಡುತ್ತಿದ್ದ ಕುಟ್ಟಿ ಅದಾಗಲೇ ಹಲವರ ಹುಬ್ಬು ಮೇಲೇರುವಂತೆ ಮಾಡಿದ್ದ. ಮುಂದೆ ಮಣಿಪಾಲದಲ್ಲಿ ನಡೆದ ಅನಂತ – ಮಾಧವ ಕಂಬಳದಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ ಓಡಿದ ಕುಟ್ಟಿ ದ್ವಿತೀಯ ಬಹುಮಾನ ಪಡೆದಿದ್ದ.

ಇದನ್ನೂ ಓದಿ:Women’s Day Special: ಮನೆ ಮನೆಗೆ ಪತ್ರಿಕೆ ವಿತರಿಸುವ 4 ಛಲಗಾತಿ ಮಹಿಳೆಯರ ಬದುಕಿನ ಚಿತ್ರಣ

ಈ ಓಟವನ್ನು ಗಮನಿಸಿದ ಅಲೆವೂರು ರಾಘು ಶೆಟ್ಟಿಯವರು ಆತನನ್ನು ತಮ್ಮ ಬಳಗಕ್ಕೆ ಸೇರಿಸಿದ್ದರು. ಅಲ್ಲಿಗೆ ಆತ ಅಲೆವೂರು ಕುಟ್ಟಿ ಎಂದು ಹೆಸರಾದ. ಬಾರಾಡಿ ಸೂರ್ಯ- ಚಂದ್ರ ಕಂಬಳದಲ್ಲಿ ಮೊದಲ ಬಾರಿಗೆ ನೇಗಿಲು ಕಿರಿಯ ವಿಭಾಗದಲ್ಲಿ ಪದಾರ್ಪಣೆ ಮಾಡಿದ ಕುಟ್ಟಿ ಅಂದೇ ಪ್ರಶಸ್ತಿ ಮುಡಿಗೇರಿಸಿದ್ದ. ಮುಂದೆ 2009-10ರ ಸೀಸನ್ ನಲ್ಲಿ ಅಲೆವೂರು ಕುಟ್ಟಿ ಹಲವಾರು ಕಡೆ ಪ್ರಶಸ್ತಿ ಪಡೆದಿದ್ದ.

Advertisement

2010-11ರ ಸೀಸನ್ ನಲ್ಲಿ ಸೀನಿಯರ್ ವಿಭಾಗಕ್ಕೆ ಎಂಟ್ರಿ ಕೊಟ್ಟ ಕುಟ್ಟಿ ಆ ಸೀಸನ್ ನಲ್ಲಿ 14 ಕಂಬಳದಲ್ಲಿ ಮೊದಲ ಪ್ರಶಸ್ತಿ ಗೆದ್ದುಕೊಂಡಿದ್ದ. ಮುಂದಿನ ವರ್ಷ 12 ಪ್ರಥಮ, ಎರಡು ದ್ವಿತೀಯ ಪ್ರಶಸ್ತಿ ಅಲೆವೂರು ತಂಡಕ್ಕೆ. ಅದು ನೇಗಿಲು ವಿಭಾಗದಲ್ಲಿ ಅಲೆವೂರು ತೆಂಕುಮನೆ ರಾಘು ಶೆಟ್ರು ಎಂದರೆ ದೊಡ್ಡ ಹೆಸರು. ಅದಕ್ಕೆ ಪ್ರಮುಖ ಕಾರಣ ಈ ಕುಟ್ಟಿ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: ತುಳು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವ: ಲಿಂಬಾವಳಿ

ಮುಂದೆ ಹಗ್ಗ ಹಿರಿಯ ವಿಭಾಗದಲ್ಲಿ ಸ್ಪರ್ಧಿಸಿದ ಕುಟ್ಟಿ, ಅಲ್ಲೂ ಕರಿಂಜೆ, ಕೊಳಚೂರು ಕೊಂಡೊಟ್ಟು, ಕೊಳಕೆ ಇರ್ವತ್ತೂರು ಮನೆತನದ ಕೋಣಗಳ ಜೊತೆಯಾಗಿ ವಿಜೃಂಭಿಸಿದ್ದ. ನಂತರದ ದಿನಗಳ ತಂಡಬೈಲ್ ನಾಗೇಶ್ ದೇವಾಡಿಗರು ಕುಟ್ಟಿಯನ್ನು ತಮ್ಮ ಬಳಗಕ್ಕೆ ಸೇರಿಸಿಕೊಂಡರು. ಅಲೆವೂರು ಕುಟ್ಟಿ ಅಲ್ಲಿಂದ ತಡಂಬೈಲ್ ಕುಟ್ಟಿಯಾದ.

ಕಾರ್ಕಳ ಜೀವನ್ ದಾಸ್ ಅಡ್ಯಂತಾಯ ಮತ್ತು ತಂಡಬೈಲ್ ನಾಗೇಶ್ ದೇವಾಡಿಗರ ಜಂಟಿ ತಂಡದಲ್ಲಿ ಮಿಂಚಿದ್ದು ಚಾಂಪಿಯನ್ ಕೋಣ ಮುಕೇಶ ಮತ್ತು ಕುಟ್ಟಿ. ನಾಲ್ಕೈದು ವರ್ಷಗಳ ಹಿಂದೆ ಮೂಡುಬಿದಿರೆ ಕಂಬಳದಲ್ಲಿ 144.5 ಮೀಟರ್ ದೂರವನ್ನು ಕೇವಲ 14.01 ಸೆಕೆಂಡ್ ನಲ್ಲಿ ಓಡಿ ಗುರಿ ತಲುಪಿದ್ದ ಕುಟ್ಟಿ ಮುಕೇಶ ಆ ಕಾಲದ ದಾಖಲೆ ನಿರ್ಮಿಸಿದ್ದರು.

ಕಂಬಳದಲ್ಲಿ ಮುಕೇಶ ಮತ್ತು ಕುಟ್ಟಿ ಓಡುವುದನ್ನು ಕಂಡರೆ ಪಾಪ ಪರಿಹಾರವಾಗುವುದು, ಅಷ್ಟು ಚಂದದ ಓಟ ಅವುಗಳದ್ದು ಎನ್ನುವುದು ಅಭಿಮಾನಿಗಳ ಮಾತು. ಹಲವಾರು ಪ್ರಶಸ್ತಿ, ದಾಖಲೆಗಳು, ಅಭಿಮಾನಿಗಳನ್ನು ಸಂಪಾದಿಸಿದ್ದ ‘ಚಾಂಪಿಯನ್ ಕುಟ್ಟಿ’ ಇನ್ನು ನೆನಪು ಮಾತ್ರ.

ಮಾಹಿತಿ: ಸೀತಾರಾಮ್ ಶೆಟ್ಟಿ, ಬಂಟ್ವಾಳ ಮತ್ತು ವಿಜಯ್ ಕುಮಾರ್ ಕಂಗಿನಮನೆ

Advertisement

Udayavani is now on Telegram. Click here to join our channel and stay updated with the latest news.

Next