Advertisement

Kambala: ಆರು ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರು ಕಂಬಳ

03:20 AM Nov 25, 2024 | Team Udayavani |

ಕೋಟ: ತುಳುನಾಡ ರಾಜಧಾನಿ, ದೇಗುಲಗಳ ನಾಡು ಖ್ಯಾತಿಯ ಬಾರ್ಕೂರಿನಲ್ಲಿ ಆರು ಶತಮಾನಗಳ ಹಿಂದೆಯೇ ಕಂಬಳ ಅಸ್ಥಿತ್ವದಲ್ಲಿದ್ದ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ. ಇಲ್ಲಿನ ಪ್ರತಿಷ್ಠಿತ ನಡುಮನೆ ಕುಟುಂಬಸ್ಥರು ಕಂಬಳದ ಯಜಮಾನಿಕೆಯನ್ನು ವಹಿಸಿಕೊಂಡು, ಊರಿನವರ ಸಹಕಾರ ದೊಂದಿಗೆ ಧಾರ್ಮಿಕ, ಸಾಂಪ್ರದಾಯಿಕ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ಈ ಬಾರಿ ನ. 25ರಂದು ನಡೆಯಲಿದೆ.

Advertisement

ಬಾರ್ಕೂರು ಕಂಬಳ ಮುಖ್ಯವಾಗಿ ರಾತ್ರಿ ಹನಿ ಕಾಯುವುದರಿಂದ ಆರಂಭವಾಗಿ ಬೆಳಗ್ಗೆ ಕುಟುಂಬದ ಚಿಕ್ಕು, ಸ್ವಾಮಿ ದೈವಕ್ಕೆ ಪೂಜೆ, ಅನಂತರ ಅಪರಾಹ್ನ ಮೆರವಣಿಗೆ ಮೂಲಕ ಕಂಬಳಗದ್ದೆಗೆ ಬಂದು ಕೋಣಗಳನ್ನು ಸ್ವಾಗತಿಸುವುದು. ಅನಂತರ ಮನೆಯ ಕೋಣಗಳನ್ನು ಗದ್ದೆಗಿಳಿಸಿ, ಕೊನೆಯಲ್ಲೂ ಮನೆಯ ಕೋಣ ಗದ್ದೆಗಿಳಿಸುವುದು. ರಾತ್ರಿ ಸೋಮನಾಥೇಶ್ವರ ದೇವರಿಗೆ ರಂಗಪೂಜೆ ಸಲ್ಲಿಸುವ ಮೂಲಕ ಕಂಬಳ ಸಮಾಪ್ತಿಗೊಳ್ಳುತ್ತದೆ.

6 ಶತಮಾನದ ಇತಿಹಾಸ?
ಕರಾವಳಿಯ ಕಂಬಳಕ್ಕೆ ಏಳೆಂಟು ಶತಮಾನಗಳ ಇತಿಹಾಸವಿದೆ ಎಂದು ಇತಿಹಾಸಕಾರರು ಶಾಸನಗಳ ಆಧಾರ ದಲ್ಲಿ ಉಲ್ಲೇಖ ಮಾಡುತ್ತಾರೆ. ಬಾರ್ಕೂರಿನಲ್ಲಿ ದೊರೆತ 1421ರ ಶಾಸನವೊಂದರಲ್ಲಿ ದೇವರ ಸಾವಂತನ ಕಂಬಳ ಗದ್ದೆಯ ಮೇಲೆ ಎನ್ನುವ ಬರಹ ಕಂಡು ಬರುತ್ತದೆಯಂತೆ. ಹೀಗಾಗಿ ಬಾರ್ಕೂರಿನಲ್ಲಿ 6 ಶತಮಾನಗಳ ಹಿಂದೆಯೇ ಕಂಬಳಗದ್ದೆ ಇತ್ತು ಎನ್ನಲಾಗುತ್ತದೆ.

ಸ್ಥಗಿತಗೊಂಡಿದ್ದ ಕಂಬಳ ಪುನಃ ಆರಂಭ:
ಹಿಂದೆ ರಾಜ ವೈಭವದಿಂದ ನಡೆಯುತ್ತಿದ್ದ ಬಾರ್ಕೂರು ಕಂಬಳ ಒಂದು ಹಂತದಲ್ಲಿ ಸ್ಥಗಿತಗೊಂಡಿತ್ತು. ಅನಂತರ 1991ರಲ್ಲಿ ಇಲ್ಲಿನ ಬಾರ್ಕೂರು ನಡುಮನೆಯವರು, ಕಂಬಳ ಕ್ಷೇತ್ರದ ಸಾಧಕ ಶಾಂತಾರಾಮ ಶೆಟ್ಟಿ ಮತ್ತು ಊರಿನವರ ಸಹಕಾರದಲ್ಲಿ ಕಂಬಳವನ್ನು ಪುನಃ ಆರಂಭಿಸಿದ್ದರು. ಅಂದಿನಿಂದ ಅದ್ದೂರಿಯಾಗಿ ನಡೆಯುತ್ತಿದೆ.

ಸಂಪ್ರದಾಯ ಜತೆಗೆ ಸ್ಪರ್ಧೆ
ಪ್ರಸ್ತುತ ಸಂಪ್ರದಾಯಿಕ ಹರಿಕೆ ಕಂಬಳಗಳು ಸಂದಿಗ್ಧ ಕಾಲಘಟ್ಟದಲ್ಲಿವೆ. ಕೇವಲ ಹರಕೆ ಕಂಬಳ ಗಳನ್ನು ನಡೆಸಿದರೆ ಕೋಣಗಳು ಬರು ವುದು ತೀರಾ ಕಡಿಮೆ. ಹೀಗಾಗಿ ಸಂಪ್ರದಾಯದ ಜತೆಗೆ ಸ್ಪರ್ಧಾ ರೀತಿಯಲ್ಲಿ ನಡೆಯುತ್ತಿದೆ. ಬಾರ್ಕೂರು ಕಂಬಳ ಕೂಡ ಇದೇ ರೀತಿ ಎರಡು ದಶಕದಿಂದ ಸ್ಪರ್ಧೆಯೊಂದಿಗೆ ಅದ್ದೂರಿ ಯಾಗಿ ನಡೆಯುತ್ತಿದ್ದು, ನೂರಾರು ಕೋಣಗಳು ಆಗಮಿಸುತ್ತವೆ.

Advertisement

ಸಂಪ್ರದಾಯದ ಉಳಿವು
ಇಲ್ಲಿನ ಕಂಬಳಕ್ಕೆ ಶತಮಾನದ ಇತಿಹಾಸವಿದ್ದು, ನಡುಮನೆಯವರ ಯಜಮಾನಿಕೆಯಲ್ಲಿ ನಡೆದು ಬಂದಿದೆ. ಪ್ರಸ್ತುತ ಊರಿನವರು, ಕಂಬಳಾಭಿಮಾನಿಗಳ ಸಹಕಾರದಿಂದ ಉತ್ತಮ ರೀತಿಯಲ್ಲಿ ಆಯೋಜನೆಗೊಳ್ಳುತ್ತಿದೆ. – ಪ್ರವೀಣ್‌ ಶೆಟ್ಟಿ, ಉಪನ್ಯಾಸಕರು, ಬಾರ್ಕೂರು-ನಡುಮನೆ

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next