Advertisement

ಕಮರೊಟ್ಟು ಚೆಕ್‌ಪೋಸ್ಟ್‌ ಚಿತ್ರದಲ್ಲಿ ತುಳು ಹಾಡು

10:56 AM Mar 04, 2019 | Sharanya Alva |

ಫ‌ಸ್ಟ್‌ ಲುಕ್‌ ಮೂಲಕ ಈಗಾಗಲೇ ಒಂದಷ್ಟು ಕುತೂಹಲ ಮೂಡಿಸಿರುವ “ಕಮರೊಟ್ಟು ಚೆಕ್‌ಪೋಸ್ಟ್‌’ ಚಿತ್ರ ಇದೀಗ ಮತ್ತೂಂದು ಹೊಸ ಸುದ್ದಿಗೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಸಂಪೂರ್ಣ ತುಳು ಭಾಷೆಯ ಹಾಡೊಂದನ್ನು ಬಳಸಿಕೊಂಡಿರುವುದೇ ಆ ಹೊಸ ಸುದ್ದಿಗೆ ಕಾರಣ.

Advertisement

ಚಿತ್ರದ ಕಥೆಗೆ ಪೂರಕವಾಗಿರುವಂತೆಯೇ ಆ ಹಾಡಿಗೆ ರಾಗ ಸಂಯೋಜನೆ ಮಾಡಿ, ಅದಕ್ಕೆ ತುಳು ಸಾಹಿತ್ಯವನ್ನೂ ಬರೆಸಿ, ಹಾಡಿಸಿರುವುದು ಚಿತ್ರದ ವಿಶೇಷ. ಅಷ್ಟೇ ಅಲ್ಲ, ತುಳು ನಾಡಿನ ಸುಪ್ರಸಿದ್ಧ ಭೂತಾರಾಧನೆ ಚಿತ್ರಣವನ್ನೂ ಆ ಹಾಡಲ್ಲಿ ಕಾಣಬಹುದಾಗಿದೆ. ಅದರಲ್ಲೂ ಭೂತಾರಾಧನೆಯ ಆಚಾರ, ವಿಚಾರಗಳ ನೈಜತೆಯನ್ನೇ ಚಿತ್ರೀಕರಿಸಿರುವುದು ವಿಶೇಷತೆಗಳಲ್ಲೊಂದು. ಆಡಿಯೋ ಎಂಜಿನಿಯರ್‌ ಆಗಿರುವ ನವೀನ್‌ ತುಳು ಹಾಡಿಗೆ ಸಾಹಿತ್ಯ ಬರೆದರೆ, ನಟ ನವೀನ್‌ಕೃಷ್ಣ ಅವರು ಇದೇ ಮೊದಲ ಸಲ ತುಳು ಹಾಡನ್ನು ಹಾಡಿದ್ದಾರೆ.

ಈ ಹಾಡಿನ ಇನ್ನೊಂದು ವಿಶೇಷವೆಂದರೆ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ತುಳು ಭಾಷೆಯ ಆ ಹಾಡನ್ನು ಬಿಡುಗಡೆ ಮಾಡಿ, ವೀಕ್ಷಿಸಿ, ತುಳು ನಾಡಿನ ಭೂತಾರಾಧನೆಯ ಚಿತ್ರಣ ಹಾಗೂ ಆ ತುಳು ಹಾಡನ್ನು ಮೆಚ್ಚಿಕೊಂಡು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಅಂದಹಾಗೆ, ಆ ಹಾಡು ಮಾ.3 (ಇಂದು) ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಆಗಲಿದೆ ಎಂಬುದು ಚಿತ್ರತಂಡದ ಮಾತು.

ಎ.ಪಿ.ಪ್ರೊಡಕ್ಷನ್ಸ್‌ ಮತ್ತು ಸ್ವಪ್ನ ಸಿನಿಕ್ರಿಯೇಷನ್ಸ್‌ ಬ್ಯಾನರ್‌ನಡಿ ಚೇತನ್‌ರಾಜ್‌ ಈ ಚಿತ್ರವನ್ನು ನಿರ್ಮಿಸಿದ್ದು, ಎ.ಪರಮೇಶ್‌ ಅವರು ನಿರ್ದೇಶನ ಮಾಡಿದ್ದಾರೆ.  ಇನ್ನು, ಸಂಗೀತ ನಿರ್ದೇಶಕ ಎ.ಟಿ.ರವೀಶ್‌ ಅವರ 25 ನೇ ಚಿತ್ರವಿದು ಎಂಬುದು ವಿಶೇಷ. ದೀಪಕ್‌ ಮತ್ತು ಪರಮೇಶ್‌ ಛಾಯಾಗ್ರಹಣವಿದೆ. ಚಿತ್ರದಲ್ಲಿ ನಾಯಕರಾಗಿ ಉತ್ಪಲ್‌, ಸನತ್‌ ನಟಿಸಿದರೆ, ಅವರಿಗೆ ನಾಯಕಿಯರಾಗಿ ಸ್ವಾತಿಕೊಂಡೆ, ಅಹಲ್ಯಾ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next