Advertisement

ಅದೃಷ್ಟದ ಚೆಕ್‌ ಪೋಸ್ಟ್‌; ನಾಲ್ಕು ಗೆಟಪ್ ನಲ್ಲಿ ಉತ್ಪಲ್

03:49 PM May 30, 2019 | Nagendra Trasi |

ಕನ್ನಡದಲ್ಲೀಗ ಯುವ ನಟರು ಮೆಲ್ಲನೆ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ಯುವ ನಟರು ಹಲವು ಚಿತ್ರಗಳ ಮೂಲಕ ಹೊಸ ಪ್ರಯೋಗದ ಜೊತೆಗೆ ಗುರುತಿಸಿಕೊಂಡಿರುವುದಲ್ಲದೆ, ಗಾಂಧಿನಗರದಲ್ಲಿ ಒಂದಷ್ಟು ಜಾಗ ಮಾಡಿಕೊಳ್ಳುತ್ತಿದ್ದಾರೆ. ಈಗ ಯುವ ನಟ ಉತ್ಪಲ್‌ ಕೂಡ ಅದೇ ಹಾದಿಯಲ್ಲಿದ್ದಾರೆ. ಅದಕ್ಕೆ ಕಾರಣ, ಈಗ ಬಿಡುಗಡೆಗೆ ಸಜ್ಜಾಗಿರುವ “ಕಮರೊಟ್ಟು ಚೆಕ್ ಪೋಸ್ಟ್’ ಚಿತ್ರ. ಹೌದು, ಈಗಾಗಲೇ ಒಂದಷ್ಟು ನಿರೀಕ್ಷೆ ಹುಟ್ಟಿಸಿರುವ “ಕಮರೊಟ್ಟು ಚೆಕ್ ಪೋಸ್ಟ್’ ಚಿತ್ರದಲ್ಲಿ ಉತ್ಪಲ್‌ ಹೀರೋ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ಅನೇಕ ವಿಶೇಷತೆಗಳಿವೆ. ನಟ ಉತ್ಪಲ್‌ ಅವರ ಪಾತ್ರದಲ್ಲೂ ಅಷ್ಟೇ ವಿಶೇಷವಿದೆ.

Advertisement

ಆ ಬಗ್ಗೆ ಉತ್ಪಲ್‌ ಹೇಳುವುದಿಷ್ಟು. “ಈ ಚಿತ್ರದ ಪಾತ್ರ ಸಾಕಷ್ಟು ಚಾಲೆಂಜ್‌ ಆಗಿತ್ತು. ಅದಕ್ಕಾಗಿ ಮೊದಲೇ ರಿಹರ್ಸಲ್‌ ಕೂಡ ನಡೆಸಲಾಗಿತ್ತು. ಚಿತ್ರದ ಕ್ಲೈಮ್ಯಾಕ್ಸ್‌ ಮುನ್ನ ಬರುವ ದೃಶ್ಯ ಇಡೀ ಚಿತ್ರದ ಜೀವಾಳ. ಆ ದೃಶ್ಯದಲ್ಲಿನ ನಟನೆ ನನಗಷ್ಟೇ ಅಲ್ಲ, ಚಿತ್ರ ನೋಡುವ ಪ್ರತಿಯೊಬ್ಬರ ಮನದಲ್ಲೂ ಉಳಿಯುತ್ತೆ. ಅದಕ್ಕೆ ಕಾರಣ, ನಿರ್ದೇಶಕರು ಸೃಷ್ಟಿಸಿರುವ ಮೂರ್‍ನಾಲ್ಕು ವಿಭಿನ್ನ ಗೆಟಪ್‌.

ಒಂದೇ ಪಾತ್ರದಲ್ಲಿ ನಾಲ್ಕು ಬದಲಾವಣೆಗಳಿವೆ. ಅದು ನಿಜಕ್ಕೂ ಕಷ್ಟದ ಕೆಲಸ. ಕ್ಲೈಮ್ಯಾಕ್ಸ್‌ ಮುನ್ನ ಕಾಣುವ ಆ ದೃಶ್ಯ ಗಮನಿಸಿದವರಿಗೆ ಪಾತ್ರಗಳ ವಿಭಿನ್ನತೆ, ಏರಿಳಿತಗಳು ಎಷ್ಟಿವೆ ಅನ್ನೋದು ಸ್ಪಷ್ಟವಾಗುತ್ತೆ. ನಾನು ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದರಿಂದ, ನಟನೆ ಅಷ್ಟೇನು ಕಷ್ಟ
ಎನಿಸಲಿಲ್ಲ. ಆದರೆ, ಕೊನೆಯ ಇಪ್ಪತ್ತು ನಿಮಿಷದಲ್ಲಿ ಬರುವ ದೃಶ್ಯಗಳು ಒಂದಕ್ಕಿಂತ ಒಂದು ವಿಭಿನ್ನ ಮತ್ತು ಕುತೂಹಲ.

ಆ ಪಾತ್ರ ಸಾಕಷ್ಟು ಚೇಂಜ್‌ ಓವರ್‌ ಬಯಸಿದ್ದರಿಂದ ರಿಹರ್ಸಲ್‌ ಮೂಲಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ನಂಬಿಕೆ ನನಗಿದೆ. ಇನ್ನು, ಮೇಕಪ್‌ ಇಲ್ಲದೆ, ಯಾವುದೇ ಒಂದೇ ಕಾಸ್ಟೂಮ್ಸ್‌ನಲ್ಲಿ, ಕಥೆಗೆ ತಕ್ಕಂತೆ, ನೈಜವಾಗಿಯೇ ಅಭಿನಯಿಸಬೇಕಾದ ಜವಾಬ್ದಾರಿ ಇದ್ದುದರಿಂದ ಇಡೀ ಚಿತ್ರತಂಡ, ನಿರ್ದೇಶಕರು ಕೊಟ್ಟ ಪ್ರೋತ್ಸಾಹ, ಸಹಕಾರ ಆ ಪಾತ್ರದಲ್ಲಿ ಚೆನ್ನಾಗಿ ನಿರ್ವಹಿಸಲು ಸಾಧ್ಯವಾಯ್ತು’ ಎನ್ನುತ್ತಾರೆ ಉತ್ಪಲ್‌.

ಈ ಚಿತ್ರಕ್ಕೂ ಮುನ್ನ “ಸೋಡಾಬುಡ್ಡಿ’ ಚಿತ್ರದಲ್ಲಿ ನಟಿಸಿದ್ದ ಉತ್ಪಲ್‌ಗೆ, ಸಾಕಷ್ಟು ಕಥೆಗಳು ಹುಡುಕಿ ಬಂದಿದ್ದರೂ, ಯಾವೊಂದು ಕಥೆಯೂ ಇಷ್ಟವಾಗಿರಲಿಲ್ಲವಂತೆ. ಕೊನೆಗೆ ನಿರ್ದೇಶಕ ಪರಮೇಶ್‌ ಅವರು, “ಕಮರೊಟ್ಟು ಚೆಕ್‌ಪೊಸ್ಟ್‌’ ಚಿತ್ರದ ಕಥೆಯ ಎಳೆ ಮತ್ತು ಪಾತ್ರ ವಿವರಿಸಿದಾಗ, ಇದರಲ್ಲೇನೋ ವಿಶೇಷತೆ ಇದೆ ಅಂದುಕೊಂಡು ಒಪ್ಪಿದ್ದಾರೆ.

Advertisement

ನಿರ್ದೇಶಕರಿಗೆ ಕೂಡ ಕ್ಲೈಮ್ಯಾಕ್ಸ್‌ಗೆ ಮುಂಚೆ ಬರುವ ದೃಶ್ಯವನ್ನು ಅದ್ಭುತವಾಗಿ ಸೆರೆಹಿಡಿಯಬೇಕು ಎಂಬ ಆಸೆ ಈಡೇರಿದ ತೃಪ್ತ ಭಾವವಿದೆಯಂತೆ. ನಿರ್ದೇಶಕರು ಕೂಡ ಉತ್ಪಲ್‌ ಸೆಟ್‌ನಲ್ಲೇ ಸ್ಪಾಟ್‌ ರಿಹರ್ಸಲ್‌ ಮಾಡಿ, ಮೂರ್‍ನಾಲ್ಕು ರೀತಿಯಲ್ಲಿ ಅಭಿನಯ ಮಾಡಿ ತೋರಿಸುತ್ತಿ ದ್ದೆಲ್ಲವನ್ನೂ ಸೆರೆಹಿಡಿದು, ದಿ ಬೆಸ್ಟ್‌ ಯಾವುದೋ ಅದನ್ನು ಸೆಲೆಕ್ಟ್ ಮಾಡುತ್ತಿದ್ದರು ಎಂಬುದು ಉತ್ಪಲ್‌ ಮಾತು.

“ಕಮರೊಟ್ಟು ಚೆಕ್ ಪೋಸ್ಟ್ ‘ ಚಿತ್ರ ನನ್ನ ಪಾಲಿನ ಅದೃಷ್ಟ ಎನ್ನುವ ಉತ್ಪಲ್‌, ಇಲ್ಲಿ ಎಲ್ಲವನ್ನೂ ಕಲಿಯಲು, ತಾಂತ್ರಿಕತೆ ಅರಿತುಕೊಳ್ಳಲು ಸಹಾಯವಾಯ್ತು. ಮುಖ್ಯವಾಗಿ, ಒಳ್ಳೆಯ ತಂಡವಿದ್ದರೆ, ಒಳ್ಳೆಯ ಸಿನಿಮಾ ಹೇಗೆ ತಯಾರಾಗುತ್ತೆ ಎಂಬುದನೂ ಅರಿತುಕೊಂಡೆ. ಮೇ.31 ರಂದು ಚಿತ್ರ ರಿಲೀಸ್‌ ಆಗುತ್ತಿದ್ದು, ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾಯುತ್ತಿದ್ದೇನೆ’ ಎನ್ನುತ್ತಾರೆ ಉತ್ಪಲ್‌.

Advertisement

Udayavani is now on Telegram. Click here to join our channel and stay updated with the latest news.

Next