Advertisement

ಗಜೇಂದ್ರಗಡ ಬೆಟ್ಟದಲ್ಲಿ ʼಕಾಮನ ಬಿಲ್ಲು ಜೇಡ’ಪತ್ತೆ

02:43 PM Sep 05, 2022 | Team Udayavani |

ಗಜೇಂದ್ರಗಡ: ದಕ್ಷಿಣ ಭಾರತ, ಶ್ರೀಲಂಕಾ ದೇಶದಲ್ಲಿ ಕಂಡುಬರುವ ಸಾಲ್ಟಿಸಿಡೇ ಕುಟುಂಬಕ್ಕೆ ಸೇರಿದ ಸ್ಟೆನಾಲೂರಿಲಸ್‌ ಲೆಸರ್ಟಿ ಹೆಸರಿನ ಕಾಮನಬಿಲ್ಲು ಜೇಡ ಗಜೇಂದ್ರಗಡ ಬೆಟ್ಟದಲ್ಲಿ ಪತ್ತೆಯಾಗಿದೆ.

Advertisement

ಸದಾ ಒಂದಿಲ್ಲೊಂದು ಕೌತುಕಕ್ಕೆ ಸಾಕ್ಷಿಯಾಗಿರುವ ಗಜೇಂದ್ರಗಡ ಬೆಟ್ಟದಲ್ಲಿ ಇದೀಗ ಮತ್ತೂಂದು ವಿಭಿನ್ನ ಜಾತಿಯ ಕೀಟ ಪತ್ತೆಯಾಗಿದೆ. ಪರಿಸರ ಸಂರಕ್ಷಕರಾದ ಮಂಜುನಾಥ ನಾಯಕ, ಸಂಗಮೇಶ ಕಡಗದ ಹಾಗೂ ಶರಣು ಗೌಡರ ನೇತೃತ್ವದ ತಂಡ ಪಟ್ಟಣದ ಬೆಟ್ಟ-ಗುಡ್ಡಗಳಲ್ಲಿ ಸಂಶೋಧನೆ ನಡೆಸಿ ಈ ಕೀಟ ಪತ್ತೆ ಹಚ್ಚಿದ್ದಾರೆ.

ವಿಶೇಷತೆಯೇನು?: ಎಲ್ಲ ಜೇಡಗಳು ಬಲೆ ಹೆಣೆಯುವುದಿಲ್ಲ. ಈ ಜೇಡಗಳೂ ಬಲೆ ಹೆಣೆಯುವದಿಲ್ಲ. ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ನೆಗೆಯುತ್ತವೆ. ಆದ್ದರಿಂದ, ಇವುಗಳನ್ನು “ನೆಗೆ ಜೇಡ’ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. 5 ಎಂಎಂ ಗಾತ್ರ ಹೊಂದಿರುತ್ತವೆ. ಹೆಣ್ಣು ಜೇಡ ಗಂಡು ಜೇಡಕ್ಕಿಂತ ಸ್ವಲ್ಪ ದೊಡ್ಡದಿರುತ್ತದೆ.

ಎಲ್ಲೆಲ್ಲಿ ಹಂಚಿಕೆ?: ಈ ಜೇಡ ದಕ್ಷಿಣ ಭಾರತ ಮತ್ತು ಶ್ರೀಲಂಕಾ ದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಜೀವ ವೈವಿಧ್ಯ ಸಂಶೋಧಕ ಮಂಜುನಾಥ ನಾಯಕ್‌ ನೇತೃತ್ವದ ತಂಡ ಈ ಜೇಡದ ಇರುವಿಕೆಯನ್ನು ಪ್ರಥಮ ಬಾರಿಗೆ ಗದಗ ಜಿಲ್ಲೆಯಲ್ಲಿ ಗುರುತಿಸಿದ್ದಾರೆ. ಇದರ ದೇಹದ ಬಣ್ಣ ಆಕರ್ಷಕವಾಗಿದ್ದು, ಗಂಡು ಜೇಡಗಳ ಮುಖದ ಮುಂಭಾಗದಲ್ಲಿ ಆಕರ್ಷಕ ಕೆಂಪು ಮತ್ತು ನೀಲಿ ಸಮತಲ ಪಟ್ಟಿಗಳಿರುತ್ತವೆ. ಕಾಮನಬಿಲ್ಲಿನ ವರ್ಣ ಸಂಯೋಜನೆಯಂತಿದ್ದು, ಕಾಮನಬಿಲ್ಲಿನ ಜೇಡ ಎಂದೂ ಕರೆಲಾಗುತ್ತದೆ. ಇನ್ನು ಹೆಣ್ಣು ಜೇಡಗಳಲ್ಲಿ ಈ ಪಟ್ಟಿಗಳು ಮಂದ ವರ್ಣದಿಂದ ಕೂಡಿದೆ.

Advertisement

ಪರಿಸರ ಸಮತೋಲನಕ್ಕೆ ಜೇಡಗಳ ಪಾತ್ರ: ಜೇಡಗಳು ರೈತರಿಗೆ ಪೀಡಕವಾದ ಕೀಟಗಳನ್ನು ಭಕ್ಷಿಸುವುದರ ಮೂಲಕ ಜೈವಿಕ ಕೀಟ ನಿಯಂತ್ರಕಗಳಾಗಿವೆ. ಬೇಟೆ ಮತ್ತು ಭಕ್ಷಕದ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೆಲವು ಪ್ರಭೇದದ ಜೇಡಗಳಲ್ಲಿರುವ ವಿಷಯವನ್ನು ವೈದ್ಯಕೀಯ ಕ್ಷೇತ್ರಗಳಲ್ಲಿ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಅಧ್ಯಯನದ ಪ್ರಕಾರ ಪ್ರತಿದಿನ ಒಂದು ಜೇಡ ತನ್ನ ದೇಹದ ತೂಕಕ್ಕಿಂತ ನಾಲ್ಕು ಪಟ್ಟು ಆಹಾರ ಸೇವಿಸುತ್ತವೆ. ಅಂದರೆ ಒಂದು ಎಕರೆ ನೈಸರ್ಗಿಕ ಆವಾಸದಲ್ಲಿ ಸುಮಾರು 1 ಲಕ್ಷ ವಿವಿಧ ಜೇಡಗಳು ವಾಸಿಸುತ್ತವೆ. ಇವುಗಳು ಪ್ರತಿನಿತ್ಯ 4-5 ಕೀಟಗಳನ್ನು ತಿನ್ನುತ್ತವೆ. ಹೀಗೆ ವಾರ್ಷಿಕವಾಗಿ ಸರಾಸರಿ 800 ಮಿಲಿಯನ್‌ ಕೀಟಗಳನ್ನು ಭಕ್ಷಿಸುವುದರ ಮೂಲಕ ರೈತನ ಮಿತ್ರನಾಗಿವೆ. ವಿಭಿನ್ನ ಜೇಡಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಚಿಟ್ಟೆಗಿಂತಲೂ ಸುಂದರ ವರ್ಣಗಳನ್ನು ಕಾಣಬಹುದು. ಪ್ರತಿ ಜೀವಿ ಪ್ರಕೃತಿಯ ಭಾಗ. ನಾವೂ ಸಹ ಪ್ರಕೃತಿಯ ಭಾಗ. ಪರಿಸರದ ಪ್ರತಿ ಜೀವಿಗಳ ಸಂಖ್ಯೆ ನಿರ್ದಿಷ್ಟ ಅನುಪಾತದಲ್ಲಿದ್ದಾಗ ಆರೋಗ್ಯಕರ ಪರಿಸರ ಉಳಿಯುತ್ತದೆ. ಗದಗ ಜಿಲ್ಲೆಯ ಅರಣ್ಯ ಇಲಾಖೆ ಸಹಕಾರದೊಂದಿಗೆ ಈ ತಂಡ ಗಜೇಂದ್ರಗಡ ಭಾಗದ ಜೀವ ವೈವಿಧ್ಯತೆಯನ್ನು ಕಳೆದ 5 ವರ್ಷದಿಂದ ದಾಖಲೀಕರಿಸುತ್ತಿದೆ.

ಗಜೇಂದ್ರಗಡ ಬೆಟ್ಟಗಳು ಸಮೃದ್ಧ ಜೀವ ವೈವಿಧ್ಯ ತಾಣಗಳಾಗಿದ್ದು, ಪ್ರತಿ ಜೀವಿ ಆಹಾರ ಸರಪಳಿಯಲ್ಲಿ ಮಹತ್ವದ ಪಾತ್ರ ವಹಿಸಿ ಪರಿಸರ ಸಮತೋಲನ ಕಾಪಾಡುತ್ತವೆ. ಸಾರ್ವಜನಿಕರಲ್ಲಿ ಈ ಕುರಿತು ಮಹತ್ವದ ಅರಿವು ಮೂಡಿಸಲಾಗುತ್ತಿದೆ.  -ಪರಿಮಳ ವಿ.ಎಚ್‌., ಉಪಸಂರಕ್ಷಣಾಧಿಕಾರಿ

ಗದಗ ಜಿಲ್ಲೆಯ ಅರಣ್ಯ ಇಲಾಖೆ ಸಹಕಾರದೊಂದಿಗೆ ಗಜೇಂದ್ರಗಡ ಭಾಗದ ಜೀವ ವೈವಿಧ್ಯತೆಯನ್ನು ಕಳೆದ 5 ವರ್ಷದಿಂದ ದಾಖಲೀಕರಿಸಲಾಗುತ್ತಿದೆ. ಈ ಭಾಗದ ಪ್ರಕೃತಿ ಸಂಪತ್ತು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. -ಮಂಜುನಾಥ ನಾಯಕ, ಜೀವ ವೈವಿಧ್ಯ ಸಂಶೋಧಕರು

-ಡಿ.ಜಿ.ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next