Advertisement

ಭೂ ಪರಿಹಾರಕ್ಕಾಗಿ ರೈತರಿಂದ ರಸ್ತೆ ಕಾಮಗಾರಿ ತಡೆ

04:22 PM Feb 17, 2020 | Naveen |

ಕಮಲನಗರ: ನಾಲ್ಕು ದಶಕಗಳ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ವಶಪಡಿಸಿಕೊಂಡ ಭೂಮಿಯ ಪರಿಹಾರ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಮುಧೋಳ (ಬಿ) ಗ್ರಾಮದ ರೈತರು ರಸ್ತೆ ಅಗಲೀಕರಣ ಕಾಮಗಾರಿಗೆ ತಡೆಯೊಡ್ಡಿದ ಘಟನೆ ನಡೆದಿದೆ.

Advertisement

ಈ ರಸ್ತೆ ಕಮಲನಗರ-ತೋರಣಾ, ಮುಧೋಳ (ಬಿ) ಮಾರ್ಗವಾಗಿ ಔರಾದ (ಬಾ) ತಾಲೂಕಿಗೆ ಹೋಗುತ್ತದೆ. ಈ ರಸ್ತೆ ನಿರ್ಮಿಸುವಾಗ ಕಳೆದುಕೊಂಡ ಭೂಮಿಗೆ ಪರಿಹಾರ ನೀಡುವವರೆಗೆ ರಸ್ತೆ ಅಗಲೀಕರಣ, ಡಾಂಬರೀಕರಣ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದು ಭೂಮಿ ಕಳೆದುಕೊಂಡ ಮುಧೋಳ (ಬಿ) ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರೈತ ಶಿವಕುಮಾರ ಕತ್ತೆ, ಸರ್ವೇ ನಂ. 113ರಲ್ಲಿ 16 ಎಕರೆ 12 ಗುಂಟೆ ಭೂಮಿ ಇದೆ. ಸರ್ಕಾರ ರಸ್ತೆ ನಿರ್ಮಿಸಲು ಎಷ್ಟು ಭೂಮಿ ಪಡೆದಿದೆ ಎನ್ನುವುದನ್ನು ರೈತರಿಗೆ ತಿಳಿಸಿಲ್ಲ. ರಸ್ತೆ ಅಗಲೀಕರಣಕ್ಕಾಗಿ ಭೂಮಿ ವಶಪಡಿಸಿಕೊಳ್ಳುವ ರೈತರಿಗೆ ನೋಟಿಸ್‌ ನೀಡಿಲ್ಲ. ಈ ಕುರಿತು ಸಂಬಂಧಪಟ್ಟವರು ಲಿಖೀತ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ರಸ್ತೆ ಅಗಲೀಕರಣಕ್ಕಾಗಿ ಹೊಲದಲ್ಲಿ ಟಿಪ್ಪರ್‌, ರೂಲರ್‌ ನಿಲ್ಲಿಸಲಾಗಿದ್ದು, ಕಂಕರ್‌, ಮೊರಂ ಹಾಕಲಾಗಿದೆ. ಈ ಕುರಿತು ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಇದು ಸರ್ಕಾರದ ಭೂಮಿ ಎನ್ನುವ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಅಲ್ಲದೇ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಪಾದಿಸಿದರು. ಹೊಲದಲ್ಲಿ ರಸ್ತೆ ನಿರ್ಮಿಸಿದ ಕುರಿತು 2019 ಡಿ.16ರಂದು ಠಾಣಾಕುಶನೂರ ಪೊಲೀಸ್‌
ಠಾಣೆಯಲ್ಲಿ ದೂರು ಸಲ್ಲಿಸಿದ್ದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಪೊಲೀಸ್‌ ಠಾಣೆಯಿಂದ ತಮಗೆ ಬೆದರಿಕೆ ಬಂದಿತ್ತು ಎಂದು ದೂರಿದರು.

ಆನಂತರ 2020 ಫೆ.14ರಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಮುಧೋಳ (ಬಿ), ಔರಾದ (ಬಾ) ರೈತ ಸಂಘದ ತಾಲೂಕು ಅಧ್ಯಕ್ಷ, ಕಮಲನಗರ ರೈತ ಸಂಘದ ತಾಲೂಕು ಅಧ್ಯಕ್ಷರು ನಮ್ಮ ಬೇಡಿಕೆಗೆ ಸ್ಪಂದಿಸಿ ಪ್ರತಿಭಟನೆಗೆ ಬೆಂಬಲಿಸಿ, ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.

Advertisement

ಕಾಮಗಾರಿ ಸ್ಥಗಿತ: ಠಾಣಾಕುಶನೂರ ಪೊಲೀಸ್‌ ಠಾಣೆ ಸಹಾಯಕ ಅಧಿಕಾರಿ ಬಸವರಾಜ ಕೋಟೆ ಸ್ಥಳಕ್ಕಾಗಮಿಸಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಮೇಲಾಧಿಕಾರಿ ತಿಳಿಸುವವರೆಗೆ ಕಾಮಗಾರಿ ಕೈಗೊಳ್ಳಬೇಡಿ ಎಂದು ಸೂಚಿಸಿದ ನಂತರ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

ಔರಾದ ( ಬಾ) ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾವಗೆ, ಕಮಲನಗರ ತಾಲೂಕು ಸಂಘಟನಾ ಕಾರ್ಯದರ್ಶಿ ವೈಜಿನಾಥ ವಡ್ಡೆ, ರತಿಕಾಂತ ಗುಡ್ಡಾ, ಶಿವಕಂತ ಗುಡ್ಡಾ, ದಯಾನಂದ ಕತ್ತೆ, ಉದಯ ಸೊಲ್ಲಾಪುರೆ, ಗಂಗಾಧರ ಬೀಜಲಗಾವೆ, ಶಿವಪ್ಪ ಮೈಲಾರೆ, ಸಂಗಮ್ಮಾ ಕತ್ತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next