Advertisement

ತಡವಾದ್ರೂ ಬಂತು ಮುಂಗಾರು

10:39 AM Aug 07, 2019 | Naveen |

ವೈಜನಾಥ ವಡ್ಡೆ
ಕಮಲನಗರ:
ಜೂನ್‌ ಹಾಗೂ ಜುಲೈ ತಿಂಗಳಿನಲ್ಲಿ ಸಾಂಪ್ರದಾಯಿಕವಾಗಿ ಬೀಳಬೇಕಿದ್ದ ಮಳೆ ಸಕಾಲದಲ್ಲಿ ಬಾರದಿರುವುದರಿಂದ ಕಮಲನಗರ ತಾಲೂಕಿನ ರೈತರು ಕಂಗಾಲಾಗಿದ್ದರು. ಆದರೆ ತಡವಾಗಿಯಾದರೂ ಈಗ ಮಳೆ ಸುರಿಯುತ್ತಿರುವುದರಿಂದ ಕಮಲನಗರ, ದಾಬಕಾ ವಲಯದ ರೈತರ ಮುಖದಲ್ಲಿ ಸಂತೃಪ್ತಿಯ ಭಾವ ಮೂಡಿದೆ.

Advertisement

ಮಳೆ ಬಾರದೆ ರೈತರಲ್ಲಿ ಆತಂಕ ಉಂಟಾಗಿತ್ತು. ಮಳೆಗಾಗಿ ಸಿಕ್ಕ ಸಿಕ್ಕ ದೇವರ ಮೊರೆ ಹೋಗುವ ಪರಿಸ್ಥಿತಿ ಇತ್ತು. ಈಗ ಕಮಲನಗರ ಗ್ರಾಮದಲ್ಲಿ ಎರಡು-ಮೂರು ದಿನಗಳಿಂದ ಜಿಟಿ ಜಿಟಿ ಮಳೆ ಸುರಿದಿದ್ದು, ಆಗಾಗ ರಭಸವಾಗಿಯೂ ಬರುತ್ತಿದೆ. ಆದರೆ ಕೇವಲ 10-12 ಕಿ.ಮೀ. ಅಂತರದಲ್ಲಿರುವ ಸೋನಾಳ, ಹಕ್ಯಾಳ, ಖತಗಾಂವ್‌, ಮುರ್ಕಿ, ದಾಬಕಾ ಭಾಗದಲ್ಲಿ ಸರಿಯಾಗಿ ಮಳೆಯಾಗಿಲ್ಲ. ಹಾಗಾಗಿ ಕೆಲವೆಡೆ ರೈತರು ಇನ್ನೂ ಬಿತ್ತನೆ ಮಾಡಿಲ್ಲ.

ಕಬ್ಬು ಬೆಳೆಗೆ ನೀರುಣಿಸುವುದು ಇರಲಿ, ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿ ತಲೆದೋರಿತ್ತು. ಇದೀಗ ಮಳೆ ಬಿದ್ದಿರುವುದರಿಂದ ಸಾರ್ವಜನಿಕರ ನಿತ್ಯದ ಕಾರ್ಯಗಳಿಗೆ ಅನುಕೂಲವಾಗಿದ್ದು, ಬಾವಿ, ಕೊಳವೆ ಬಾವಿಗಳಿ ನೀರು ದೊರೆತಂತಾಗಿದೆ. ಆದರೆ, ಕೆರೆಗಳಲ್ಲಿ ಮಾತ್ರ ಇನ್ನೂ ನೀರು ಸಂಗ್ರವಾಗದೇ ಬರಿದಾಗಿವೆ.

ಜೂನ್‌ ಕೊನೆ ವಾರ ಮತ್ತು ಜುಲೈ ಮೊದಲ ವಾರದಲ್ಲಿ ಅಲ್ಲಲ್ಲಿ ಸುರಿದ ಮಳೆಯಿಂದಾಗಿ ಬಿತ್ತನೆ ಮಾಡಿದ ಭೂಮಿಯಲ್ಲಿ ಬೆಳೆ ಬೆಳೆದಿವೆ. ಈದೀಗ ಸುರಿದ ಅಲ್ಪ ಮಳೆಯಿಂದ, ಒಣಗುವ ಸ್ಥಿತಿಯಲ್ಲಿದ್ದ ಬೆಳೆಗಳು ಚಿಗುರಲು ಅನುಕೂಲವಾಗಿದೆ. ಅಲ್ಲದೆ, ಎರಡು ದಿನಗಳಿಂದ ಮಳೆ ಆಗುತ್ತಿರುವುದರಿಂದ ಹೊಲಗಳಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ.

ಈ ಬಾರಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹೆಸರು, ಉದ್ದು ಹಾಗೂ ಸೋಯಾ ಇಳುವರಿ ಕುಂಠಿತಗೊಂಡಿವೆ. ಕಬ್ಬು ಬೆಳೆ ಕಳೆದುಕೊಳ್ಳುವ ಸ್ಥಿತಿ ಉಂಟಾಗಿತ್ತು. ಇದೀಗ ಮಳೆಯಾಗಿರುವುದು ಎಲ್ಲರಲ್ಲಿ ಸಂತಸ ಉಂಟುಮಾಡಿದೆ ಎಂದು ಸಂದೀಪ ಪಾಟೀಲ ಸಂತಸ ವ್ಯಕ್ತಪಡಿಸಿದರು.

Advertisement

ಈ ತಿಂಗಳಲ್ಲಿ ಸರಾಸರಿ 9.99 ಮಿ.ಮೀ. ಮಳೆ ದಾಖಲೆಯಾಗಿದೆ. ಮುಧೋಳ, ಠಾಣಾಕುಶನೂರು, ಸಂಗಮ, ಸೋನಾಳ, ಕಮಲನಗರ, ಮುರ್ಕಿ, ಡೋಣಗಾಂವ್‌, ಬೆಳಕುಣಿ ಗ್ರಾಮಗಳಲ್ಲಿ ಸಾಧಾರಣ ಮಳೆ ಬಿದ್ದಿದ್ದು, ಕೃಷಿ ಚಟುವಟಿಕೆಗೆ ಉತ್ತಮ ವಾತಾವರಣ ಕಲ್ಪಿಸಿದಂತೆ ಆಗಿದೆ.

ಮುರ್ಕಿ-ಹಕ್ಯಾಳ ಗ್ರಾಮದಲ್ಲಿ 2-3 ದಿನದಿಂದ ಸುರಿದ ಮಳೆಯಿಂದಾಗಿ ಬಿತ್ತನೆಗೆ ಅನುಕೂಲವಾಗಿದೆ. ಇದೀಗ ಕೃಷಿ ಚಟುವಟಿಕೆ ಭರದಿಂದ ಸಾಗಿದೆ. ಕೂಲಿಕಾರ್ಮಿಕರ ಕೊರತೆ ಹೆಚ್ಚಾಗಿದೆ.
ವೈಜನಾಥ ಬಿರಾದಾರ,
ಹಕ್ಯಾಳ ರೈತ

ಬೆಳೆ ಕೈಗೆ ಬಾರದೇ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಅವರ ನೆರವಿಗೆ ಬರುತ್ತಿಲ್ಲ. ಪ್ರತಿಯೊಂದು ವಿಷಯದಲ್ಲೂ ಸರ್ಕಾರ ತಾರತಮ್ಯ ಮಾಡುತ್ತಿದೆ. ಬೆಳೆ ವಿಮೆ ಹಣವನ್ನು ತಕ್ಷಣವೇ ರೈತರ ಖಾತೆಗೆ ಜಮಾ ಮಾಡಬೇಕಾಗಿದೆ.
ಪ್ರವೀಣ ಕುಲಕರ್ಣಿ,
 ಕಮಲನಗರ ರೈತ ಸಂಘ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next