Advertisement

ಆತ್ಮ ಶುದ್ಧಿಯಲ್ಲಿದೆ ನಿಜವಾದ ಸೌಂದರ್ಯ: ಸ್ವಾಮೀಜಿ

05:24 PM Feb 29, 2020 | Naveen |

ಕಮಲನಗರ: ಬಾಹ್ಯ ರೂಪವೇ ಸುಂದರವಲ್ಲ. ನಿಜವಾದ ಸೌಂದರ್ಯ ಆತ್ಮ ಶುದ್ಧಿಯಲ್ಲಿದೆ. ಇದನ್ನು ಪಡೆಯಬೇಕಾದರೆ ಸತ್ಕಾರ್ಯಗಳಿಗೆ ತಮ್ಮ ಶಕ್ತಿ ಅನುಸಾರ ದಾನ ಮಾಡಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ತಮಲೂರು ಮಠದ ಪೀಠಾಧಿಪತಿ ಡಾ| ಶಿವಾನಂದ ಶಿವಾಚಾರ್ಯರು ಹೇಳಿದರು.

Advertisement

ಪಟ್ಟಣದ ಮಹಾತ್ಮಾ ಗಾಂಧಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ 84ನೇ ಮಹಾಶಿವಾರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ 12 ಜ್ಯೋತಿರ್ಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸ್ವಾಮೀಜಿ ಮಾತನಾಡಿದರು.

ಮನುಷ್ಯ ತನ್ನ ಬದುಕಿನಲ್ಲಿ ಪಾಪ, ಕರ್ಮದಿಂದ ಮುಕ್ತರಾಗಬೇಕಾದರೆ ಸತ್ಸಂಗದಲ್ಲಿ ಭಾಗವಹಿಸಿ ಸನ್ಮಾರ್ಗದಲ್ಲಿ ನಡೆದರೆ ಬದುಕು ಪಾವನವಾಗುತ್ತದೆ ಎಂದು ಹೇಳಿದರು. ಮಾನವ ಸತ್ಸಂಗದಲ್ಲಿ ಉಳಿದು ತನ್ನನ್ನು ತಾನು ಅರಿತು ನಡೆದರೆ ದೇವಮಾನವನಾಗುತ್ತಾನೆ. ಶಿವನ ತೇಜ ಅರಿಯಲು ಆತ್ಮ, ಪರಮಾತ್ಮನ ಮಿಲನ ಕಾರ್ಯದಲ್ಲಿ ನಾವು ಭಕ್ತಿ, ಭಾವದಿಂದ ಧ್ಯಾನ ಮಾಡಿದಾಗ ಮಾತ್ರ ಸಾಧ್ಯ ಎಂದು ಹೇಳಿದರು.

ಬೀದರ ಈಶ್ವರೀಯ ಮಹಾವಿದ್ಯಾಲಯ ಸಂಚಾಲಕಿ ಬಿಕೆ ಸುನಂದಾ ಮಾತನಾಡಿ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿ ಬಳಸುತ್ತಿದ್ದಾನೆ. ಪ್ರಕೃತಿ ಕಾಪಾಡಲು ಮುಂದಾಗದೆ ಇರುವುದು ಬೇಸರದ ಸಂಗತಿ. ಪ್ರಕೃತಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಸಂತರು, ಶರಣರ ತತ್ವಾದರ್ಶವನ್ನು ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಯಾರು ಪ್ರವೇಶ ಪಡೆದುಕೊಂಡು ಭಕ್ತಿ ಮಾರ್ಗದಲ್ಲಿ ನಡೆಯುವರೋ ಅವರು ಜೀವನದಲ್ಲಿ ದೇವಮಾನವನಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.

Advertisement

ಹಲಬರ್ಗಾ, ಶಿವಣಿ ಮಠದ ಪೀಠಾಧಿಪತಿ ಹಾವಗೀಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ದಿನನಿತ್ಯ ಷಡಕ್ಷರಿ ಮಂತ್ರದೊಂದಿಗೆ ಶಿವನ ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗಿ ಸುಖಮಯ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮಾನವನ ಬದುಕು ಚಿಕ್ಕಂದಿನಲ್ಲಿ, ಯವ್ವನದಲ್ಲಿ, ಮುಪ್ಪಿನಲ್ಲಿ ಯಾವ ರೀತಿ ಬದುಕು ಸಾಗಿಸುವನೋ, ಅವನ ಸ್ಥಿತಿ ಹೇಗೆ ಇರುವುದರ ಕುರಿತು ಮಾರ್ಮಿಕವಾಗಿ ಜನರ ಮನದಟ್ಟವಾಗುವಂತೆ ಕೆಲಕಾಲ ಸಭಿಕರನ್ನು ಹಾಸ್ಯದಲ್ಲಿ ಮುಳುಗಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೇರಳದ ಡಾ| ಬಿಕೆ ಸ್ವಾಮಿನಾಥನ್‌ ಮಾತನಾಡಿ, ನಕಾರಾತ್ಮಕ ವಿಚಾರಗಳಿಂದ ಜೀವನದಲ್ಲಿ ದುಃಖ, ಕಷ್ಟದೊಂದಿಗೆ ನೆಮ್ಮದಿ ಹಾಳಾಗುತ್ತದೆ. ಅದಕ್ಕೆ ಪರಮಾತ್ಮನ ಧ್ಯಾನ ಮಾಡಿ ಸಕಾರಾತ್ಮಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಬೀದರನ ಸುಮಂಗಲಾ ಬಹನಜೀ, ಕಮಲನಗರ ಈಶ್ವರೀಯ ಮಹಾವಿದ್ಯಾಲಯ ಸಂಚಾಲಕಿ ಜಯಶ್ರೀ ಬಹನಜೀ, ಜಿಪಂ ಮಾಜಿ ಅಧ್ಯಕ್ಷೆ ನೀಲಮ್ಮ ಶಿವಾನಂದ ವಡ್ಡೆ, ಮುಖಂಡ ಶಿವಾನಂದ ವಡ್ಡೆ, ನಾಗೇಶ ಪತ್ರೆ, ಲಿಂಗಾನಂದ ಮಹಾಜನ, ನೀಲಕಂಠರಾವ ಕಾಂಬಳೆ, ಶಿವರಾಜ ಪಾಟೀಲ, ಪ್ರಕಾಶ ಮಾನಕರಿ, ಶಂಕರರಾವ ಬಿರಾದಾರ, ಸವಿತಾ ಸಂತೋಷ ಕಾರಬಾರಿ, ದೇವೆಂದ್ರ, ಮಡಿವಾಳಪ್ಪ ಮುರ್ಕೆ, ಬಾಬುರಾವ ಹರಪಳ್ಳೆ, ಪತ್ರಕರ್ತ ಮನೋಜಕುಮಾರ ಹಿರೇಮಠ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next