ಕಮಲನಗರ: ಹೊಸ ತಾಲೂಕುಗಳ ರಚನೆಯಾಗಿ ಎರಡು ವರ್ಷಗಳೇ ಕಳೆಯುತ್ತಿದ್ದರೂ ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಕಚೇರಿಗಳನ್ನು ಇನ್ನೂ ಆರಂಭಿಸಿಲ್ಲ. ಶೀಘ್ರದಲ್ಲಿ ಕಚೇರಿಗಳನ್ನು ಆರಂಭಿಸಬೇಕು ಎಂದು ಘೋಷಿತ ಹೊಸ ತಾಲೂಕುಗಳ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಒತ್ತಾಯಿಸಿದ್ದಾರೆ.
ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಈ ಕುರಿತು ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ನೇತೃತ್ವದ ನಿಯೋಗದ ಮೂಲಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಹೊಸ ತಾಲೂಕು ಕೇಂದ್ರಗಳಿಗೆ ಅಗತ್ಯವಿರುವ ಕಚೇರಿಗಳನ್ನು ಸ್ಥಾಪಿಸಿ, ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಹೆಸರಿಗಷ್ಟೇ ಎನ್ನುವಂತೆ ಈಗ ತಹಶೀಲ್ದಾರ್ ಕಚೇರಿ ಆರಂಭಿಸಲಾಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಆಗಬೇಕಾದ ಕೆಲಸಗಳು ಇನ್ನೂ ಆಗುತ್ತಿಲ್ಲ. ಅದಲ್ಲದೇ ಬೇರೆ ಯಾವ ಇಲಾಖೆಯ ಕಚೇರಿಗಳೂ ಕಾರ್ಯ ನಿರ್ವಹಿಸುತ್ತಿಲ್ಲ. ನ್ಯಾಯಾಲಯ, ಖಜಾನೆ, ಸಣ್ಣ ನೀರಾವರಿ ಇಲಾಖೆ, ತಾಲೂಕು ಪಂಚಾಯಿತಿ, ಲೋಕೋಪಯೋಗಿ ಇಲಾಖೆ, ಸಬ್ ರಿಜಿಸ್ಟ್ರಾರ್, ಪಶು ಸಂಗೋಪನಾ ಇಲಾಖೆ, ಭೂ ಮಾಪನಾ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸೇರಿದಂತೆ ಇನ್ನೂ 48 ಕಚೇರಿಗಳು ಆರಂಭವಾಗಬೇಕಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮಿನಿ ವಿಧಾನಸೌಧ ಕಟ್ಟಡಕ್ಕೆ ನಿವೇಶನ ಗುರುತಿಸುವ ಕಾರ್ಯ ಕೂಡ ನಡೆದಿಲ್ಲ. ಹೆಸರಿಗೆ ಮಾತ್ರ ತಾಲೂಕು ಕೇಂದ್ರವಾಗಿದ್ದು, ಶೀಘ್ರದಲ್ಲಿ ಎಲ್ಲ ತಾಲೂಕು ಕಚೇರಿಗಳನ್ನು ಆರಂಭಿಸಿ ಅಗತ್ಯ ಅನುದಾನ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಬಸವರಾಜ ಪಾಟೀಲ ಎಚ್ಚರಿಕೆ ನೀಡಿದ್ದಾರೆ. ಮುಖಂಡರಾದ ಬಾಲಾಜಿ ತೇಲಂಗೆ, ನೀಲಕಂಠರಾವ್ ಕಾಂಬಳೆ, ಶ್ರೀರಂಗ ಪರಿಹಾರ, ಬಾ.ನಾ.ಸೊಲ್ಲಾಪೂರೆ, ಸಂತೋಷ ಸುಲಾಕೆ, ಶಿವಾನಂದ ವಡ್ಡೆ ಹಾಗೂ ಇದ್ದರು.