Advertisement

ವನ್ಯಜೀವಿಗಳಿಂದ ಬೆಳೆ ಹಾನಿ: ರೈತರಿಗೆ ಸಂಕಷ್ಟ

10:19 AM Aug 25, 2019 | Naveen |

ವೈಜನಾಥ ವಡ್ಡೆ
ಕಮಲನಗರ:
ಪಟ್ಟಣ ಸೇರಿದಂತೆ ದಾಬಕಾ, ಠಾಣಾಕುಶನೂರು ಹಾಗೂ ಕಮಲನಗರ ಹೋಬಳಿಯಲ್ಲಿ ಜಿಂಕೆ, ಕಾಡುಹಂದಿ, ಮಂಗಗಳ ಮತ್ತು ನವಿಲುಗಳ ಹಾವಳಿ ಹೆಚ್ಚಿದೆ. ಕಷ್ಟ ಪಟ್ಟು ಬೆಳೆದ ಬೆಳೆ ವನ್ಯ ಜೀವಿಗಳ ಪಾಲಾಗುತ್ತಿದೆ ಎಂದು ಈ ಭಾಗದ ರೈತರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Advertisement

ಮಳೆ ಆಶ್ರಯದಲ್ಲಿ ಬೆಳೆದ ತೊಗರಿ, ಸೋಯಾ, ಉದ್ದು ಮತ್ತು ಹೆಸರು ಕಾಳು ಬೆಳೆ, ತೋಟಗಾರಿಕೆ ಬೆಳೆಗಳಾದ ಟೊಮ್ಯಾಟೊ, ಬದನೆಕಾಯಿ ಹಾಗೂ ಕಬ್ಬು ಇತ್ಯಾದಿ ಬೆಳೆಗಳನ್ನು ಜಿಂಕೆ ಮತ್ತು ಕಬ್ಬು ಬೆಳೆಯನ್ನು ಕಾಡುಹಂದಿಗಳ ಹಿಂಡು ನೆಲಸಮ ಮಾಡುತ್ತಿವೆ. ಫಸಲಿಗೆ ಬರುವ ಮುನ್ನವೇ ಗಿಡಗಳನ್ನು ತಿನ್ನುತ್ತಿವೆ. ಸಾಲ ಸೋಲ ಮಾಡಿ ಬೆಳೆದ ಬೆಳೆ ಕಣ್ಣೆದುರೇ ಹಾಳಾಗುತ್ತಿರುವುದರಿಂದ ನಷ್ಟವಾಗುತ್ತಿದೆ ಎಂಬುದು ಶಿವರಾಜ, ದೇವೇಂದ್ರ, ಉಮಾಕಾಂತ, ಸಂಜೀವಕುಮಾರ, ದಿಲೀಪಕುಮಾರ ಹೊರಂಡಿ ಹಾಗೂ ಬಹುತೇಕ ರೈತರ ಅಳಲು.

ಹೊರಂಡಿ, ಸೋನಾಳವಾಡಿ, ಚ್ಯಾಂಡೇಶ್ವರ, ಡಿಗ್ಗಿ, ಹೊಳಸಮುದ್ರ, ಕೊಟಗ್ಯಾಳ, ಡೋಣಗಾಂವ್‌, ರಂಡ್ಯಾಳ, ಮುರ್ಕಿ ಮತ್ತು ಖತಗಾಂವ್‌ ಹಾಗೂ ಕಮಲನಗರ ಹೋಬಳಿ ಜಮೀನುಗಳನ್ನು ನೆಲಸಮ ಮಾಡಿರುವುದೇ ಮತ್ತು ಅವುಗಳಿಗೆ ಸಕಾಲದಲ್ಲಿ ಕುಡಿಯಲು ಸಿಗುವ ನೀರಿನ ವ್ಯವಸ್ಥೆ ಅಲ್ಲಿಯೇ ಇರುವುದರಿಂದ ವನ್ಯ ಜೀವಿಗಳ ಸಮಸ್ಯೆ ಹೆಚ್ಚಲು ಕಾರಣ.

ಡೋಣಗಾಂವ್‌ ಭಕ್ತಮುಡಿ, ಕಮಲನಗರ- ಸೋನಾಳ ರಸ್ತೆ, ಸಂಗಮೇಶ್ವರ ದೇವಾಲಯ ಗುಡ್ಡ ಇತ್ಯಾದಿ ಗ್ರಾಮಗಳ ಬೆಟ್ಟ, ಗುಡ್ಡ , ಹಳ್ಳ, ಕೊಳ್ಳ, ಪೊದೆಗಳನ್ನು ಜಿಂಕೆ, ಕಾಡುಹಂದಿ ಮತ್ತು ನವಿಲು ಹಾಗೂ ಮಂಗಗಳು ವಾಸ ಸ್ಥಾನವನ್ನಾಗಿಸಿಕೊಂಡಿದ್ದವು. ಸಾವಿರಾರು ಎಕರೆ ಪ್ರದೇಶವನ್ನು ಸಮ ತಟ್ಟುಗೊಳಿಸಿ, ಉಳುಮೆ ಮಾಡಿದ್ದರಿಂದ ಅಥವಾ ರಸ್ತೆ ಅಭಿವೃದ್ಧಿ ಕೆಲಸ ಮಾಡಿ ಜನರ ಒಡಾಟ ಹೆಚ್ಚಾಗಿದ್ದರಿಂದ ಪ್ರಾಣಿಗಳು ಜಮೀನುಗಳತ್ತ ನುಗ್ಗುತ್ತಿವೆ ಎಂದು ರೈತರು ಸಮಸ್ಯೆಯ ಮೂಲವನ್ನು ವಿವರಿಸಿದರು.

ಜಿಂಕೆ, ನವಿಲುಗಳಿಗೆ ಹೊಡೆಯುವ ಹಾಗಿಲ್ಲ. ರಾಮಾಯಣದಲ್ಲಿ ಶ್ರೀರಾಮನು ಜಿಂಕೆಯನ್ನು ಹೊಡೆಯಲು ಹೋಗಿ ಪಟ್ಟ ಕಷ್ಟ ಜನಸಾಮನ್ಯರಿಗೆ ಎಲ್ಲರಿಗೂ ಗೊತ್ತಿದ್ದ ವಿಷಯ. ಬೆಳೆದ ಅಲ್ಪ ಬೆಳೆ ಹಾಳು ಮಾಡುತ್ತಿದೆ ಎಂದು ರಾತ್ರಿ ಹೊಲದ ಸುತ್ತಲೂ ವಿದ್ಯುತ್‌ ಬೇಲಿ ಹಾಕೋಣವೆಂದಲ್ಲಿ ಕಾಡುಹಂದಿ ಜೊತೆ ಜಿಂಕೆಗಳು ಸಾಯಬಹುದು ಎಂದು ಕ್ರಮ ಕೈಬಿಡಲಾಗಿದೆ. ಈದೀಗ ರಾತ್ರಿ ಹೊತ್ತು ರೈತರು ತಮ್ಮ ಜಮೀನುಗಳಿಗೆ ತೆರಳಿ ಪಟಾಕಿ ಸಿಡಿಸಿ ವನ್ಯ ಜೀವಿಗಳನ್ನು ಓಡಿಸುವುದಕ್ಕಾಗಿ ಜಾಗರಣೆ ಮಾಡುವಂತಾಗಿದೆ.

Advertisement

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ತಿಳಿಸಿದರೂ, ಕಾಟಾಚಾರಕ್ಕೆ ಭೇಟಿ ನೀಡಿ ಹೋಗುತ್ತಾರೆ. ವನ್ಯ ಜೀವಿಗಳನ್ನು ನಿಯಂತ್ರಿಸುವ ಆಸಕ್ತಿ ತೋರುತ್ತಿಲ್ಲ ಎಂಬುದು ರೈತ ಆರೋಪ.

ಮಳೆ ಅಭಾವದಲ್ಲಿಯೂ ಸೋಯಾ, ಜೋಳ, ತೊಗರಿ ಉದ್ದು ಬಿತ್ತನೆ ಮಾಡಲಾಗಿದೆ. ಬಿತ್ತನೆ, ಉಳುಮೆಗಾಗಿ ಸಾವಿರಾರು ರೂಪಾಯಿ ಸಾಲ ಮಾಡಲಾಗಿದೆ. ಸೋಯಾ ಇದೀಗ ಹೂವು ಬಿಡುವ ಮುನ್ನವೇ ಜಿಂಕೆಗಳಿಗೆ ಬಲಿಯಾಗತೊಡಗಿದೆ. ಇದರಿಂದ ರೈತರಿಗೆ ದಿಕ್ಕು ತೋಚದಾಗಿದೆ ಎಂದು ರಾಂಪೂರದ ಸಂಜೀವಕುಮಾರ, ಡೋಣಗಾಂವ್‌ದ ಉತ್ತಮರಾವ್‌ ಹಾಗೂ ಡಿಗ್ಗಿಯ ದೇವೇಂದ್ರ ಪಾಟೀಲ ಅಳಲು ತೋಡಿಕೊಂಡರು.

ದೇವನದಿ ನಾಲಾದಿಂದ ಬೆಳಗಿನ ಜಾವ, ಸಂಜೆ ವೇಳೆ ಕಾಡುಹಂದಿಗಳು ಜಮೀನಿಗೆ ಲಗ್ಗೆ ಇಡುತ್ತವೆ. ಮಳೆ ಅಭಾವದ ಜೊತೆಗೆ ವನ್ಯ ಜೀವಿಗಳ ಹಾವಳಿ ರೈತರನ್ನು ಕಂಗೆಡುವಂತೆ ಮಾಡಿದೆ.
ರವೀಂದ್ರ ಬೆಂಬುಳಗೆ
ಚ್ಯಾಂಡೇಶ್ವರ ಶಿವಾರ ರೈತ
ಎರಡು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದೆ. ಬುಡ ಸಮೇತ ಕಬ್ಬು ನೆಲಕ್ಕುರುಳಿಸಿ ಕಾಡುಹಂದಿಗಳು ತಿನ್ನುತ್ತಿವೆ. ಅಧಿಕಾರಿಗಳು ಶಾಶ್ವತ ಪರಿಹಾರದ ಬಗ್ಗೆ ಚಿಂತಿಸುವ ಅಗತ್ಯವಿದೆ.
•ದೇವೇಂದ್ರ ಪಾಟೀಲ,
 ರೈತ, ಡಿಗ್ಗಿ
ನೂರಾರು ಎಕರೆಯಲ್ಲಿ ಸೋಯಾ, ತೊಗರಿ ಬಿತ್ತನೆ ಮಾಡಿದ್ದೇವೆ. ಸಂಜೆ ಹೊತ್ತಿನಲ್ಲಿ 100ರಿಂದ 120 ಜಿಂಕೆಗಳ ಹಿಂಡು ಎಳೆಯ ತೊಗರಿ ಕಡ್ಡಿಗಳನ್ನು ತಿನ್ನುತ್ತಿದೆ. ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ.
ಸತೀಶ್‌ ನೀಲಕಂಠರಾವ್‌
 ಡಿಗ್ಗಿ ಗ್ರಾಮ ರೈತ
Advertisement

Udayavani is now on Telegram. Click here to join our channel and stay updated with the latest news.

Next