Advertisement

ಕಮಲನಗರ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ-ಪರದಾಟ

01:38 PM May 05, 2019 | Naveen |

ಕಮಲನಗರ: ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿಂದಾಗಿ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.

Advertisement

ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆ ವ್ಯವಸ್ಥೆ ಇದೆ. ಐವರು ವೈದ್ಯರು ಸೇವೆ ಸಲ್ಲಿಸಬೇಕಾಗಿತ್ತು. ಆದರೆ ಇಲ್ಲಿ ಕೇವಲ ಇಬ್ಬರು ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯರ ಕೊರತೆಯಿಂದಾಗಿ ತಾಲೂಕಿನ ವಿವಿಧ ಗ್ರಾಮದ ರೋಗಿಗಳು ಆಸ್ಪತ್ರೆಗೆ ಬಂದು ಚಿಕಿತ್ಸೆ ಸಿಗದೆ ಪರದಾಡಿ ಖಾಸಗಿ ಆಸ್ಪತ್ರೆ ಮೊರೆ ಹೋಗುವ ಅನಿವಾರ್ಯ ಉಂಟಾಗಿದೆ.

ಆಸ್ಪತ್ರೆಗೆ ದಿನನಿತ್ಯ 700ಕ್ಕೂ ಹೆಚ್ಚು ಹೊರರೋಗಿಗಳು ಬರುತ್ತಾರೆ. ಆದರೆ ಇಲ್ಲಿ ಬಿಎಎಂಎಸ್‌ ವೈದ್ಯರು ಮಾತ್ರ ಸಮರ್ಪಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ತಜ್ಞ ನಿವೃತ್ತ ವೈದ್ಯ ಅಶೋಕ ಮಳಗೆ ರಾತ್ರಿ ಸಮಯದಲ್ಲಿ ಮತ್ತು ಆಸ್ಪತ್ರೆಯಲ್ಲಿ ವೈದ್ಯರಿಲ್ಲದಾಗ ಹಗಲಿನಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯರ ಕೊರತೆ ನಿಗಿಸಲು ಸುತ್ತ-ಮುತ್ತಲಿನ ಆರೋಗ್ಯ ಕೇಂದ್ರದ ವೈದ್ಯರಿಗೆ ಬದಲಿ ವ್ಯವಸ್ಥೆಗಾಗಿ ಮೇಲಾಧಿಕಾರಿಗಳು ಕೇವಲ ಆದೇಶ ನೀಡಲು ಸೀಮಿತರಾಗಿದ್ದಾರೆ. ಆದರೆ ಅವರ ಆದೇಶ ಪಾಲನೆ ಮಾಡದವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಇದರಿಂದ ವೈದ್ಯರ ಕೊರತೆ ಉಂಟಾಗಿದೆ. ಮೊದಲಿನ ಆಡಳಿತ ವೈದ್ಯಾಧಿಕಾರಿ ಕೆಲಸದ ಸಮಯದಲ್ಲಿ ಆಸ್ಪತ್ರೆಗೆ ಸಮಯಕ್ಕೆ ಬರುತ್ತಿರಲಿಲ್ಲ. ಸಿಬ್ಬಂದಿ ಮೇಲೆ ಹಿಡಿತ ಸಾಧಿಸುತ್ತಿರಲಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ರೋಗಿಗಳು ಸ್ಥಳದಲ್ಲಿಯೇ ನಿಂತು ಸಾಕಷ್ಟು ಸಲ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಇಲ್ಲಿರುವ ಸಮಸ್ಯೆ ತೋಡಿಕೊಂಡಾಗ ಜಿಲ್ಲಾ ಆರೋಗ್ಯ ಅಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆ ಸರಿಪಡಿಸುವಂತೆ ಹೇಳಿ ಹೋಗಿದ್ದರು. ಆದರೆ ವ್ಯವಸ್ತೆ ಚುರುಕಾಗಲೇ ಇಲ್ಲ ಎಂದು ದೂರಿದ್ದಾರೆ. ಶಾಸಕರು ಸಹ ಇತ್ತ ಗಮನಹರಿಸುತ್ತಿಲ್ಲ ಎಂಬ ವ್ಯಾಪಕ ಆರೋಪಗಳು ಕೇಳಿ ಬರುತ್ತಿವೆ.

ಜಿಲ್ಲಾ ಆರೋಗ್ಯ ಅಧಿಕಾರಿ ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ ಆಡಳಿತ ವೈದ್ಯರ ಪ್ರಭಾರವನ್ನು ಹೋಳಸಮುದ್ರ ಗ್ರಾಮದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅನೀಲ ರಾಯಪಳ್ಳೆ ಅವರಿಗೆ ವಹಿಸಿ ಹೋಗಿದ್ದಾರೆ. ಆದರೆ ವ್ಯವಸ್ಥೆ ಸುಧಾರಿಸಲು ಅವರಿಂದಲೂ ಕೂಡ ಸಾಧ್ಯವಾಗುತ್ತಿಲ್ಲ. ಅವರಿಗೆ ದಾಬಕಾ ಆರೋಗ್ಯ ಕೇಂದ್ರದ ಪ್ರಭಾರ, ಕಮಲನಗರ ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರ ಕೊಟ್ಟಿದ್ದಾರೆ. ಇದರಿಂದ ಇನ್ನಷ್ಟು ಸಮಸ್ಯೆ ಉದ್ಭವವಾಗುತ್ತದೆ ಎಂದು ಸಮಾಜ ಸೇವಕ ವೈಜಿನಾಥ ವಡ್ಡೆ ಆರೋಪಿಸಿದ್ದಾರೆ.

Advertisement

ಜಿಲ್ಲಾ ವೈದ್ಯಾಧಿಕಾರಿ, ತಾಲೂಕು ವೈದ್ಯಾಧಿಕಾರಿ ವ್ಯವಸ್ಥೆ ಚುರುಕುಗೊಳಿಸಲು ಆಡಳಿತ ವೈದ್ಯಾಧಿಕಾರಿಗಳಿಗೆ ಆಸ್ಪತ್ರೆ ಆವರಣದಲ್ಲಿರುವ ವಸತಿ ನಿಲಯದಲ್ಲೇ ವಾಸ ಮಾಡುವಂತೆ ಆದೇಶ ನೀಡಿ ರೋಗಿಗಳಿಗೆ ಸಮರ್ಪಕ ಸೇವೆ ನೀಡಲು ಮುಂದಾಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next