ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಡೆಮಾಕ್ರಟಿಕ್ ಪಕ್ಷದಿಂದ ಕಣಕ್ಕಿಳಿದಿರುವ ಕಮಲಾ ಹ್ಯಾರಿಸ್, ಭಾರತೀಯ ಮೂಲದ ಅಮೆರಿಕನ್ನರಾದ ಸಬ್ರಿನಾ ಸಿಂಗ್ ಅವರನ್ನು ತಮ್ಮ ಮಾಧ್ಯಮ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದಾರೆ. ಸಿಂಗ್ ಅವರು, ಈ ಹಿಂದೆ, ಡೆಮಾಕ್ರಟಿಕ್ ಪಕ್ಷದ ಇಬ್ಬರು ಅಧ್ಯಕ್ಷೀಯ ಅಭ್ಯರ್ಥಿಗಳಾದ ಕೋರಿ ಬೂಕರ್ ಹಾಗೂ ಮೈಕ್ ಬ್ಲೂಮ್‌ಬರ್ಗ್ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕೋರಿ ಬೂಕರ್ ಅವರು ಈಗ ನ್ಯೂಜೆರ್ಸಿಯ ಸಂಸದರಾಗಿದ್ದಾರೆ.
ಭಾರತದೊಂದಿಗೆ ಟ್ರಂಪ್ ಉತ್ತಮ ಬಾಂಧವ್ಯ: ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಅಮೆರಿಕದ ಹಾಲಿ ಅಧ್ಯಕ್ಷ ಟ್ರಂಪ್, ಕಾಶ್ಮೀರ ವಿಚಾರದಲ್ಲಿ ಭಾರತವನ್ನು ಬೆಂಬಲಿಸುತ್ತಲೇ ಬಂದಿದ್ದಾರಲ್ಲದೆ, ಗಡಿ ವಿಚಾರದಲ್ಲಿ ಭಾರತದೊಂದಿಗೆ ಇತ್ತೀಚೆಗೆ ತಗಾದೆ ತಗೆದಿದ್ದ ಚೀನ ವಿರುದ್ಧವೂ ಮಾತನಾಡಿದ್ದಾರೆ. ಹೀಗೆ, ಪ್ರತಿ ಹಂತದಲ್ಲೂ ಟ್ರಂಪ್ ಅವರು ಭಾರತಕ್ಕೆ ಬೆಂಬಲ ನೀಡುತ್ತಲೇ ಬಂದಿದ್ದಾರೆ ಎಂದು ಟ್ರಂಪ್ ಅವರ ಜಯಕ್ಕಾಗಿ ಶ್ರಮಿಸುತ್ತಿರುವ “ಟ್ರಂಪ್ ವಿಕ್ಟರಿ ಇಂಡಿಯನ್-ಅಮೆರಿಕನ್ ಫೈನಾನ್ಸ್ ಕಮಿಟಿ’ಯ ಸಹ ಮುಖ್ಯಸ್ಥ ಅಲ್ ಮೇಸನ್ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆಯನ್ನು ಉತ್ತುಂಗಕ್ಕೇರಿಸಲು ಟ್ರಂಪ್ ಸಹಾಯ ಮಾಡಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಚೆನ್ನೈನಲ್ಲಿ ಪೋಸ್ಟರ್: ಅಮೆರಿಕ ಉಪಾಧ್ಯಕ್ಷರ ಹುದ್ದೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಅವರಿಗೆ ಚೆನ್ನೈನಲ್ಲಿ ಕೆಲವರು ಪೋಸ್ಟರ್‌ಗಳಲ್ಲಿ ಅವರ ಜಯಕ್ಕಾಗಿ ಹಾರೈಸಿರುವ ವಿಚಾರ ಬೆಳಕಿಗೆ ಬಂದಿದೆ.
108 ತೆಂಗಿನ ಕಾಯಿ ಒಡೆಸಲು ಮನವಿ
ಅಮೆರಿಕ ಉಪಾಧ್ಯಕ್ಷ ಹುದ್ದೆಯ ರೇಸ್‌ನಲ್ಲಿರುವ ಕಮಲಾ ಹ್ಯಾರಿಸ್ ಅವರಿಗೆ ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಅಪಾ ರವಾದ ನಂಬಿಕೆಯಿದೆ. ಅಮೆರಿಕ ದಂಥ ಅತ್ಯಾಧುನಿಕ, ಐಶಾರಾಮಿ ವಾತಾವರ ಣದಲ್ಲಿ ಬೆಳೆದಿದ್ದರೂ ಅವರಲ್ಲಿ ಭಾರತೀಯ ಬೇರುಗಳು ಇನ್ನೂ ಗಟ್ಟಿಯಾಗಿವೆ. ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಲೇಖನ ವೊಂದು ಈ ಬಗ್ಗೆ ಬೆಳಕು ಚೆಲ್ಲಿದೆ.
ಅದು 2010ರಲ್ಲಿ ನಡೆದ ಘಟನೆ. ಆಗ, ಹ್ಯಾರಿಸ್ ಅವರು ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಹುದ್ದೆಯ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು. ಆ ಸಂದರ್ಭದಲ್ಲಿ, ಚೆನ್ನೈಯಲ್ಲಿರುವ ತಮ್ಮ ಸಂಬಂಧಿ ಸರಳ ಗೋಪಾಲನ್ ಅವರಿಗೆ ಫೋನ್ ಮಾಡಿದ್ದ ಅವರು, ದೇಗುಲ ದಲ್ಲಿ 108 ತೆಂಗಿನ ಕಾಯಿ ಒಡೆಸಬೇಕು. ಆ ಮೂಲಕ ತಮ್ಮ ಜಯಕ್ಕೆ ನೆರವು ಕೊಡಬೇಕೆಂದು ಮನವಿ ಮಾಡಿದ್ದರು. ಜಯ ಸಾಧಿಸಿದ ಬಳಿಕ ಅವರು ಈ ಹರಕೆಯನ್ನು ತೀರಿಸಿದ್ದರು. 2014ರಲ್ಲಿ ಖುದ್ದು ಹ್ಯಾರಿಸ್ ಅವರೇ ಇದನ್ನು ಹೇಳಿಕೊಂಡಿದ್ದರು ಎಂದು ಲೇಖನದಲ್ಲಿ ವಿವರಿಸಲಾಗಿದೆ.