ಭೋಪಾಲ್: ಈ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಆರೋಪ ಎದುರಿಸುತ್ತಿದ್ದು, ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ “ಅಚ್ಚಾ ಹಿಸಾಬ್ ಲಿಯಾ ಜಾಯೇಗಾ” ಎಂದು ಪೊಲೀಸರನ್ನು ಉದ್ದೇಶಿಸಿ ಹೇಳಿದರು.
ಎಂಟು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಯಾರಿಗೂ ಭಯ ಬೇಡ ಎಂದು ಹೇಳಬಯಸುತ್ತೇನೆ. ಎಲ್ಲಾ ಪೊಲೀಸ್ ಅಧಿಕಾರಿಗಳು ಕಿವಿ ತೆರೆದು ಕೇಳಿ, ಮುಂಬರುವ ಚುನಾವಣೆಯಲ್ಲಿ ಎಲ್ಲರ ಖಾತೆಯನ್ನು ತೆಗೆಯಲಾಗುವುದು ಎಂದು ಕಮಲ್ ನಾಥ್ ಹೇಳಿದ್ದಾರೆ.
ಇದನ್ನೂ ಓದಿ:ಶ್ರದ್ಧಾ ವಾಲ್ಕರ್ ಪ್ರಕರಣ : 100ಕ್ಕೂ ಹೆಚ್ಚು ಸಾಕ್ಷ್ಯಗಳೊಂದಿಗೆ 3000 ಪುಟಗಳ ಆರೋಪಪಟ್ಟಿ!
ಕಮಲ್ ನಾಥ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಭಾರತೀಯ ಜನತಾ ಪಾರ್ಟಿ ವಕ್ತಾರ ಶೆಹಜಾದ್ ಪೂನವಾಲಾ ಅವರು ಟೀಕೆ ಮಾಡಿದ್ದು, ಕಮಲ್ ನಾಥ್ ತಮ್ಮ ಪ್ರಜಾಪ್ರಭುತ್ವ ವಿರೋಧಿ ತುರ್ತು ಮನಸ್ಥಿತಿಯನ್ನು ತೋರಿಸಿದ್ದಾರೆ ಎಂದು ಹೇಳಿದ್ದಾರೆ.
“ಕಮಲ್ ನಾಥ್ ಅವರು ಪೊಲೀಸ್ ಅಧಿಕಾರಿಗಳು ಮತ್ತು ಆಡಳಿತವನ್ನು ಬೆದರಿಸಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಆಗಸ್ಟ್ 2021 ರಲ್ಲಿ ಅವರು ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು. ‘ಆಗ್ ಲಗಾ ದೋ’ ಎಂದು ಹೇಳಿಕೆ ನೀಡಿದ್ದರು” ಎಂದು ಶೆಹಜಾದ್ ಪೂನವಾಲಾ ಹೇಳಿದರು.