ಬೆಂಗಳೂರು:ಖ್ಯಾತ ನಟ, ರಾಜಕಾರಣಿ ಕಮಲ್ ಹಾಸನ್ ಅವರು ಸೋಮವಾರ ಬೆಂಗಳೂರಿಗೆ ಆಗಮಿಸಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಕಮಲ್ ಹಾಸನ್ ಹಾಗೂ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಿದ ಬಳಿಕ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಸಿನಿಮಾಗಿಂತ ಕಾವೇರಿಯೇ ಮುಖ್ಯ: ಕಮಲ್ ಹಾಸನ್
ನಾವು ಎರಡೂ ರಾಜ್ಯಗಳವರು ಸಹೋದರತ್ವದಿಂದ ಬಾಳಬೇಕಾಗಿದೆ. ನಾನು ಸರ್ಕಾರದ ಪ್ರತಿನಿಧಿಯಾಗಿ ಕರ್ನಾಟಕಕ್ಕೆ ಬಂದಿಲ್ಲ, ಜನರ ಪ್ರತಿನಿಧಿಯಾಗಿ ಬಂದಿದ್ದೇನೆ. ಅಷ್ಟೇ ಅಲ್ಲ ಕುರುವೈ ಬೆಳೆಗೆ ನೀರು ಕೇಳಲು ಬಂದಿದ್ದೇನೆ. ನನಗೆ ಈ ಸಂದರ್ಭದಲ್ಲಿ ಸಿನಿಮಾಗಿಂತ ಕಾವೇರಿ ವಿಷಯನೇ ತುಂಬಾ ಮುಖ್ಯ ಎಂದರು.
ಕಾವೇರಿ ನಾವು ಹುಟ್ಟುವ ಮೊದಲೇ ಇತ್ತು. ಆದರೆ ನಾವೀಗ ಕಚ್ಚಾಡಿಕೊಳ್ಳುತ್ತಿದ್ದೇವೆ. ಈ ವಿಚಾರವನ್ನು ಎರಡೂ ರಾಜ್ಯಗಳ ರೈತರೇ ಬಗೆಹರಿಸಿಕೊಳ್ಳಬೇಕು. ನಮ್ಮ ಕೊನೆಯ ಆಯ್ಕೆ ಕೋರ್ಟ್ ಆಗಿರಬೇಕಿತ್ತು. ಆದರೆ ಈಗಾಗಲೇ ಪ್ರಕರಣ ಕೋರ್ಟ್ ನಲ್ಲಿದೆ. ಆದರೂ ನಾವು ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಸೌಹಾರ್ದತೆ ಇರಬೇಕು; ಎಚ್ ಡಿಕೆ
ಕರ್ನಾಟಕ ತಮಿಳುನಾಡು ನಡುವೆ ಸೌಹಾರ್ದತೆ ಇರಬೇಕು. ಎರಡೂ ರಾಜ್ಯಗಳು ಸಹೋದರ ಭಾವನೆಯಲ್ಲಿರಬೇಕು. ಈ ನಿಟ್ಟಿನಲ್ಲಿಯೇ ನಮ್ಮಿಬ್ಬರ ಚರ್ಚೆ ನಡೆದಿದೆ. ನಮ್ಮ ರೈತರು ಬದುಕಬೇಕು, ತಮಿಳುನಾಡಿನ ರೈತರು ಬದುಕಬೇಕು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. ಸೌಹಾರ್ಹಯುತವಾಗಿ ಈ ಸಮಸ್ಯೆ ಬಗೆಹರಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.