ಬಾಗಲಕೋಟೆ: ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಸಾವಯವ ತರಕಾರಿ-ಹಣ್ಣು ಮಾರಾಟ ಮಳಿಗೆಯನ್ನು ಜೂ. 12ರಂದು ನವನಗರ ಹಾಗೂ ಬಾಗಲಕೋಟೆಯಲ್ಲಿ ಏಳು ಕೇಂದ್ರಗಳಿಗೆ ಚಾಲನೆ ನೀಡಲಾಗುವುದು ಎಂದು ಕಾಮಧೇನು ಹಣ್ಣು-ತರಕಾರಿ ಮಾರಾಟ ಕೇಂದ್ರದ ನಿರ್ದೇಶಕ ಅಶೋಕ ಮುತ್ತಿನಮಠ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಕೋವಿಡ್ ಮಹಾಮಾರಿ ಸಮಯದಲ್ಲಿ ಲಾಕ್‌ಡೌನ್ ಹೇರಿಕೆ ಇದ್ದಾಗ ನಗರದಲ್ಲಿ ಮನೆ ಮನೆಗೆ ಹಣ್ಣು, ತರಕಾರಿ ತಲುಪಿಸುವ ಕಾರ್ಯವನ್ನು ನಾವು ಮಾಡಿದ್ದೇವೆ. ಕಂಟೇನ್ಮೆಂಟ್ ಝೋನ್ ಪ್ರದೇಶದಲ್ಲಿ ಮನೆ ಮನೆಗೆ ತರಕಾರಿ ತಲುಪಿಸಿ, ಕೋವಿಡ್ ವಾರಿಯರ್ಸ್ ಆಗಿ ಕೆಲಸ ಮಾಡಿದ ಆತ್ಮತೃಪ್ತಿ ಇದೆ. ಆ ವೇಳೆ ಮಾಡುವ ಮಾಡಿದ ಕಾರ್ಯಕ್ಕೆ ರೈತರು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಅದೇ ಮಾದರಿಯಲ್ಲಿ ನಗರದಲ್ಲಿ ಮಾರಾಟ ಮಳಿಗೆ ಮೂಲಕ ರೈತರಿಂದ ನೇರವಾಗಿ ಖರೀದಿಸಿ, ಗ್ರಾಹಕರಿಗೆ ತಲುಪಿಸಲು ನಿರ್ಧರಿಸಲಾಗಿದೆ ಎಂದರು.
ನವನಗರದ ಸೆಕ್ಟರ್ ನಂ.30ರಲ್ಲಿ ರೇವಣಕರ ಕಾಂಪ್ಲೆಕ್ಸ್, ಸೆಕ್ಟರ್ ನಂ.52ರಲ್ಲಿ ವೀರಭದ್ರೇಶ್ವರ ದೇವಸ್ಥಾನದ ಎದುರು, ಸೆಕ್ಟರ್ ನಂ.56ರಲ್ಲಿ ಬಿಷ್ಟಪ್ಪ ಗದ್ದನಕೇರಿ ಕಾಂಪ್ಲೆಕ್ಸ್, ವಿದ್ಯಾಗಿರಿಯ 15ನೇ ರಸ್ತೆಯ ನಗರಸಭೆ ವಾಣಿಜ್ಯ ಮಳಿಗೆ, ಬಾಗಲಕೋಟೆ ನಗರದ ಸ್ಟೇಶನ್ ರಸ್ತೆಯ ಕುಮಟಗಿ ಶೋ ರೂಂ ಪಕ್ಕದಲ್ಲಿ, ವಿನಾಯಕ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪಕ್ಕದಲ್ಲಿ ಹಾಗೂ ಮುಚಖಂಡಿ ಕ್ರಾಸ್‌ನ ಗೋಡಿ ಅವರ ಕಟ್ಟಡದ ಪಕ್ಕದಲ್ಲಿ ಒಟ್ಟು ಏಳು ಸ್ಥಳಗಳಲ್ಲಿ ಕಾಮಧೇನು ಹಣ್ಣು-ತರಕಾರಿ ಮಾರಾಟ ಮಳಿಗೆ ಆರಂಭಗೊಳ್ಳಲಿವೆ ಎಂದು ತಿಳಿಸಿದರು.
ರೈತರಿಂದ ನೇರವಾಗಿ ಖರೀದಿಸಿ, ಅವರಿಗೆ ಉತ್ತಮ ದರ ನೀಡುವ ಜತೆಗೆ ಗ್ರಾಹಕರಿಗೆ ತಲುಪಿಸಲಾಗುವುದು. ಅಲ್ಲದೇ ಏಳೂ ಮಳಿಗೆಯನ್ನು ಆರು ಜನ ನಿರ್ದೇಶಕರು ಕೂಡಿ ಸ್ವತಃ ನಿರ್ಮಿಸಿ, ನಿರುದ್ಯೋಗಿ ಯುವಕರಿಗೆ ನೀಡಿದ್ದು, ಅವರಿಗೆ ಉದ್ಯೋಗವೂ ದೊರೆಯಲಿದೆ. ರಾಸಾಯನಿಕವಿಲ್ಲದ ಹಣ್ಣ-ತರಕಾರಿ ಗ್ರಾಹಕರಿಗೆ ನೀಡಲು ಮುಖ್ಯ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಇನ್ನೋರ್ವ ನಿರ್ದೇಶಕ ರವಿ ಕುಮಟಗಿ ಮಾತನಾಡಿ, ಲಾಕ್‌ಡೌನ್ ವೇಳೆ ನಾವು ಮನೆ ಮನೆಗೆ ತರಕಾರಿ, ಹಣ್ಣು ನೀಡುವ ವ್ಯವಸ್ಥೆ ಮಾಡಿದ್ದರಿಂದ ರೈತರಿಗೆ ಸುಮಾರು 25 ಲಕ್ಷ ವರೆಗಿನ ತರಕಾರಿ-ಹಣ್ಣು ಖರೀದಿಸಿದ್ದೇವು. 3 ಟಂಟಂ, 10 ಜನ ಯುವಕರಿಗೆ ಉದ್ಯೋಗವೂ ದೊರೆತಿತ್ತು. ಸಧ್ಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ರೈತರು, ಗ್ರಾಹಕರಿಗೆ ದಿನ ಬಳಕೆಯ ತರಕಾರಿ, ಹಣ್ಣು ನೀಡಲು ಫಾರ್ಮರ್ಸ್ ಪ್ರೋಸೇಸಿಂಗ್ ಕಂಪನಿ ಮಾಡಲು ಉದ್ದೇಶಿಸಿದ್ದೇವೆ. ಸದ್ಯ ನಗರದಲ್ಲಿ ಮಾತ್ರ ಈ ವ್ಯವಸ್ಥೆ ಜಾರಿಗೊಳಿಸಿ, ಮುಂದೆ ಜಿಲ್ಲೆಯಾದ್ಯಂತ ವಿಸ್ತರಿಸುವ ಗುರಿ ಇದೆ. ಇದೊಂದು ವ್ಯಾಪಾರಿ ಉದ್ದೇಶದಿಂದ ಮಾಡದೇ, ರೈತರು, ಗ್ರಾಹಕರಿಗೆ ಸಂಪರ್ಕ ಸೇತುವೆಯಾಗಿ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಕಾಮಧೇನು ಹಣ್ಣು-ತರಕಾರಿ ಮಾರಾಟ ಕೇಂದ್ರದ ನಿರ್ದೇಶಕ ಕೇಶವ ಭಜಂತ್ರಿ ಮಾತನಾಡಿ, ಲಾಕಡೌನ್ ವೇಳೆ ನಾವು ಮಾಡಿದ ಪ್ರಯತ್ನ ಉತ್ತಮವಾಗಿದೆ. ರೈತರಿಂದ ಖರೀದಿಸಿ, ಜನರಿಗೆ ಉತ್ತಮ ತರಕಾರಿ ನೀಡುವುದು ನಮ್ಮ ಉದ್ದೇಶ. ಈ ಪ್ರಯತ್ನ ಈಗ ನಗರದ ಏಳು ಕಡೆ ಚಾಲನೆ ದೊರೆಯಲಿದೆ. ನಿರುದ್ಯೋಗಿ, ಅತ್ಯಂತ ಬಡ ಯುವಕರು ತರಕಾರಿ ವ್ಯಾಪಾರಕ್ಕೆ ಮುಂದೆ ಬಂದರೆ ಅವರಿಗೆ 50 ತಳ್ಳು
ಗಾಡಿಗಳನ್ನು ದಾನಿಗಳ ಮೂಲಕ ಉಚಿತವಾಗಿ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಕಾಮಧೇನು ಹಣ್ಣು-ತರಕಾರಿ ಮಾರಾಟ ಕೇಂದ್ರದ ನಿರ್ದೇಶಕ ಶಿವಕುಮಾರ ಮೇಲ್ನಾಡ, ಕಿರಣ ಪವಾಡಶೆಟ್ಟರ ಉಪಸ್ಥಿತರಿದ್ದರು.