ರೈತರು ನಮ್ಮ ರಾಷ್ಟ್ರದ ಆತ್ಮ. ದೇಶದ ಬೆನ್ನೆಲುಬು. ಭಾರತ ಪ್ರಾಚೀನ ಕಾಲದಿಂದಲೂ ಕೃಷಿ ಪ್ರಧಾನ ದೇಶ. ಆದ್ದರಿಂದಲೇ ಭಾರತದ ಒಟ್ಟಾರೆ ಆರ್ಥಿಕತೆಯು ರೈತನ ಮೇಲೆ ಅವಲಂಬಿತವಾಗಿದೆ. ಭಾರತದ ರೈತನನ್ನು ವಿಶ್ವದ ಅತ್ಯಂತ ಶ್ರಮಜೀವಿ ಎಂದು ಪರಿಗಣಿಸಲಾಗಿದೆ. ಭಾರತೀಯ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಆದಾಯದ ಮೂಲವಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.
ರೈತನ ಬೆವರಿನ ಪ್ರತಿಫಲವಾಗಿ ನಾವು ದಿನನಿತ್ಯ ಹೊಟ್ಟೆ ತುಂಬಿಸಿಕೊಳ್ಳುತೇವೆ. ಕಷ್ಟನೋ ಸುಖವೋ ಯಾರನ್ನು ಕೇಳದೆ ಒಬ್ಬನೇ ನೇಗಿಲಿನ ಭಾರವನ್ನು ಹೊರುತ್ತಾನೆ. ಕಾಯಕವೇ ಕೈಲಾಸ ಎಂದು ದುಡಿಯುತ್ತಾನೆ. ತಮ್ಮ ಮೂಲ ವೃತ್ತಿಯನ್ನು ಮಾಡಿ ನಾಡಿನ ಸಮಸ್ತ ಜನರಿಗೆ ಹೊಟ್ಟೆ ತುಂಬಿಸುತ್ತಾರೆ. ಅವರ ಇಡೀ ಜೀವನವನ್ನು ಹೊಲ, ಗದ್ದೆ, ಬೇಸಾಯದಲ್ಲೇ ತೊಡಗಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಬೆಳೆದ ಬೆಳೆ ಸರಿಯಾಗಿ ಪ್ರತಿಫಲ ನೀಡದೆ ಇರಬಹುದು ಆದರೂ ತಾಳ್ಮೆಯಿಂದ ಕಾದು ಬೆಳೆಯನ್ನು ಬೆಳೆದು ಆರೈಕೆ ಮಾಡಿ ದೇಶದ ಜನರ ಹಸಿವನ್ನು ನೀಗಿಸುವುದು ನಮ್ಮ ರೈತರು.
ಹವಾಮಾನ ವೈಪರೀತ್ಯಗಳು, ಮಾರುಕಟ್ಟೆಯಲ್ಲಿನ ಏರಿಳಿತಗಳು, ಸೂಕ್ತ ಸಮಯದಲ್ಲಿ ಸಿಗದ ಬಿತ್ತನೆ ಬೀಜ, ಗೊಬ್ಬರ, ರಾಸಾಯನಿಕಗಳ ಅವೈಜ್ಞಾನಿಕ ಬಳಕೆಯಿಂದಾಗುವ ದುಷ್ಪರಿಣಾಮಗಳು, ಖಾಸಗಿಯವರಲ್ಲಿ ಸಾಲ ತೆಗೆದು ವಿಪರೀತ ಬಡ್ಡಿ ತೆರುತ್ತಿರುವದು ಇಂತಹ ಅನೇಕ ಸಂಗತಿಗಳನ್ನು ಹೇಳುತ್ತಾ ಹೋದರೆ ಮುಗಿಯದ ಕತೆ, ವ್ಯಥೆ. ಅಕ್ಕಿ ಬೆಂದಿದೆಯೇ ಎಂದು ತಿಳಿಯಲು ಮುಟ್ಟಿ ನೋಡಿದರೆ ಹೇಗೆ ಗೊತ್ತಾಗುತ್ತೋ ಅದೇ ರೀತಿ ದೇಶ ಎಷ್ಟು ಮುಂದುವರಿದಿದೆ ಎಂದು ತಿಳಿಯಲು ಆ ದೇಶದ ರೈತನನ್ನು ನೋಡಿ ತಿಳಿದುಕೊಳ್ಳಬಹುದು..
ಕಲಿಯುಗದ ಕಾಮಧೇನುವಾದ ರೈತರು ಇತ್ತೀಚಿನ ದಿನಗಳಲ್ಲಿ ವಲಸೆ ಹೋಗುತ್ತಿದ್ದಾರೆ. ಅದಕ್ಕಿಂತ ಹೆಚ್ಚಿನದಾಗಿ ರೈತನು ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ ಎಂಬ ಸುದ್ದಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದನ್ನು ನಿಲ್ಲಿಸಬೇಕಾದುದು ಮುಖ್ಯವಾದ ಸಂಗತಿಯಾಗಿದೆ. ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ? ಅವರ ಸಮಸ್ಯೆ ಸವಾಲುಗಳೇನು? ಅವರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳು ಹೇಗಿದೆ? ಉಳುವ ಯೋಗಿಯ ಸಮಸ್ಯೆಗಳನ್ನು ಬಗೆಹರಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಹೊಟ್ಟೆಗೆ ಗತಿ ಏನು? ಎಂಬುದನ್ನು ಭಾರತದ ಜನತೆ ಯೋಚಿಸಬೇಕಾಗಿದೆ.
-ಕೆ.ಎಂ. ಪವಿತ್ರ,
ಎಂಜಿ.ಎಂ. ಕಾಲೇಜು, ಉಡುಪಿ