ಕಾಳಗಿ: ಕಲ್ಯಾಣ ಕರ್ನಾಟಕ ಭಾಗದ ಪುಣ್ಯ ಕ್ಷೇತ್ರಗಳಲ್ಲಿ ಪುರಾತನ ಇತಿಹಾಸವುಳ್ಳ ಹಾಗೂ ಪುರಾಣಗಳಲ್ಲಿ ಪ್ರಸಿದ್ಧಿ ಪಡೆದ, ದಕ್ಷಿಣ ಕಾಶಿಯೆಂದೇ ಪ್ರಖ್ಯಾತವಾದ ಇಲ್ಲಿನ ನೀಲಕಂಠ ಕಾಳೇಶ್ವರ ದೇವಸ್ಥಾನ ಭಕ್ತರ ಪಾಲಿಗೆ ಕಾಮಧೇನುವಾಗಿದೆ.
ಕ್ರಿ.ಶ ಎರಡನೇ ಶತಮಾನದಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ ಎಂದು ಪುರಾತನ ದಾಖಲೆಗಳಿಂದ ತಿಳಿಯುತ್ತದೆ. ಈ ಕಾಳೇಶ್ವರ ದೇವಾಲಯ ಶಾಸನೋಕ್ತ ಸಯಂಭು ಕಾಳೇಶ್ವರ ದೇಗುಲವಾಗಿದೆ. ಈ ಕುರಿತು 1103ರ ಶಾಸನದಲ್ಲಿ ಉಲ್ಲೇಖೀಸಲಾಗಿದೆ.
ಇದೊಂದು ದೇಗುಲದ ಸಂಕೀರ್ಣವಾಗಿದೆ. ಇಲ್ಲಿ ಪೂರ್ವಾಭಿಮುಖವಾಗಿ ನೀಲಕಂಠ ಕಾಳೇಶ್ವರ, ರೇವಣಸಿದ್ಧೇಶ್ವರ, ಈಶ್ವರ ಗುಡಿ, ಉತ್ತರಾಭಿಮುಖವಾಗಿ ಸೋಮೇಶ್ವರ, ವೀರಭದ್ರೇಶ್ವರ ದೇವಾಲಯಗಳಿವೆ. ಇವುಗಳಿಗೆಲ್ಲ ಸೇರಿದಂತೆ ವಿಶಾಲವಾದ ತೆರೆದ ಸಭಾಮಂಟಪವಿದೆ. ಈ ಗುಡಿಯ ಆವರಣದಲ್ಲಿ ಚತುರ್ಮುಖೀ ಗಣಪತಿ ಶಿಲ್ಪ, ಕಾರ್ತಿಕೇಯ, ಕಿರಣಸ್ಥಂಭ, ವೀರಗಲ್ಲುಗಳಿವೆ. ಸೋಮೇಶ್ವರ ದೇಗುಲದಲ್ಲಿ ಜಲಹರಿ ಲಿಂಗವಿದೆ. ಸೂರ್ಯನಾರಾಯಣ ದೇವಾಲಯದಲ್ಲಿ ಸುಂದರವಾಗಿ ಕೆತ್ತಲಾಗಿರುವ ಶಿಲಾಬಾಲಕಿಯರ ಶಿಲ್ಪಕಲೆಗಳು ನೋಡುಗರನ್ನು ಆಕರ್ಷಿಸುತ್ತವೆ.
ನೈಸರ್ಗಿಕ ನೀರಿನ ಬುಗ್ಗಿಗಳು
ಈ ದೇವಸ್ಥಾನದ ಮತ್ತೂಂದು ವೈಶಿಷ್ಠ್ಯವೇನೆಂದರೆ ದೇವಸ್ಥಾನದ ಎಡ ಭಾಗದಲ್ಲಿ ರೌದ್ರವತಿ ನದಿ ಹರಿಯುತ್ತಿದೆ. ಇದರ ಪಕ್ಕದಲ್ಲಿ ನಾಲ್ಕು ಪುಷ್ಕರಣಿಗಳಿವೆ. ಇವುಗಳಲ್ಲಿ ನಿರಂತರವಾಗಿ ಝರಿಗಳಿಂದ ನೀರು ಹೊರಚಿಮ್ಮತ್ತಿರುತ್ತದೆ. ಎಂತಹ ಬರಗಾಲದ ಸಂದರ್ಭದಲ್ಲಿಯೂ ಸುತ್ತಮುತ್ತಲಿನ ಗ್ರಾಮಗಳಿಗೆ ಹಗಲಿರುಳು ನೀರು ಪೂರೈಸಿದರೂ ಒಂದಿಂಚೂ ಕಡಿಮೆಯಾಗುವುದಿಲ್ಲ. ಭಕ್ತರು ಪ್ರತಿ ವರ್ಷಕ್ಕೊಮ್ಮೆ ಯುಗಾದಿ ಹಬ್ಬವಾದ ಹನ್ನೆರಡನೇ ದಿನಕ್ಕೆ ಉತ್ತರಕಾಶಿಯಿಂದ ದಕ್ಷಿಣಕಾಶಿ ಕಾಳೇಶ್ವರ ಪುಷ್ಕರಣಿಯಲ್ಲಿ ಹಾಲಿನ ಬಣ್ಣದ ನೀರು ಬರುತ್ತವೆ ಎಂದು ಪುರಾಣದಲ್ಲಿ ಉಲ್ಲೇಖವಿದೆ. ಅಂದು ಸಹಸ್ರಾರು ಭಕ್ತರು ಆಗಮಿಸಿ ಪುಷ್ಕರಣಿಯಲ್ಲಿ ಮಿಂದೆದ್ದು ದರ್ಶನ ಪಡೆದುಕೊಳ್ಳುತ್ತಾರೆ.
-ಭೀಮರಾಯ ಕುಡ್ಡಳ್ಳಿ ಕಾಳಗಿ