ಕನ್ನಡ ಚಿತ್ರರಂಗದಲ್ಲಿ “ಪ್ರೇಮಕವಿ’ ಎಂದೇ ಕರೆಸಿಕೊಳ್ಳುವ ಸಂಗೀತ ನಿರ್ದೇಶಕ, ಗೀತ ರಚನೆಕಾರ ಕೆ. ಕಲ್ಯಾಣ್ ಸದ್ಯ ಡಬಲ್ ಖುಷಿಯಲ್ಲಿದ್ದಾರೆ. ಅದಕ್ಕೆ ಮೊದಲ ಕಾರಣ ಕೆ. ಕಲ್ಯಾಣ್ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿ ಇಪ್ಪತ್ತೈದು ವರ್ಷಗಳನ್ನು ಪೂರೈಸಿರುವುದು. ಎರಡನೆಯದ್ದು, ಈ ಇಪ್ಪತ್ತೈದು ವರ್ಷಗಳಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಹೀಗೆ ಭಾರತದ ಬಹುತೇಕ ಭಾಷೆಗಳ ಬರೋಬ್ಬರಿ 106ಕ್ಕೂ ಹೆಚ್ಚು ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿರುವುದು.
ಚಿತ್ರರಂಗದ ದಾಖಲೆಗಳ ಪ್ರಕಾರ ಕನ್ನಡ ಚಿತ್ರರಂಗದಲ್ಲಿ ಚಿ. ಉದಯ ಶಂಕರ್ ಅವರ ನಂತರ ಅತಿಹೆಚ್ಚು (ಸುಮಾರು 3170ಕ್ಕೂ ಹೆಚ್ಚು) ಹಾಡುಗಳನ್ನು ಬರೆದ ಖ್ಯಾತಿ ಕೆ. ಕಲ್ಯಾಣ್ ಅವರದ್ದು ಅದಲ್ಲದೆ ದಕ್ಷಿಣ ಭಾರತದಲ್ಲೆ ಅತಿಹೆಚ್ಚು ಸಂಗೀತ ನಿರ್ದೇಶಕರಿಗೆ (106 ಸಂಗೀತ ನಿರ್ದೇಶಕರು) ಹಾಡುಗಳನ್ನು ಬರೆದ ಮೊದಲ ಗೀತರಚನೆಕಾರ ಎಂಬ ಖ್ಯಾತಿಯೂ ಈಗ ಕಲ್ಯಾಣ್ ಹೆಸರಿಗೆ ಸೇರಿಕೊಂಡಿದೆ.
ಇದರ ಜೊತೆಗೆ ಕನ್ನಡದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ರಾಜ್ಯ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ ಪಡೆದ ಸಂಗೀತ ನಿರ್ದೇಶಕ ಎಂಬ ಹೆಗ್ಗಳಿಕೆ, 310ಕ್ಕೂ ಹೆಚ್ಚು ಪ್ರಶಸ್ತಿಗಳು, 50ಕ್ಕೂ ಹೆಚ್ಚು ಬಿರುದುಗಳು ಕಲ್ಯಾಣ್ ಅವರನ್ನು ಹುಡುಕಿಕೊಂಡು ಬಂದಿವೆ. ಈ ಬಗ್ಗೆ ಮಾತನಾಡುವ ಕೆ. ಕಲ್ಯಾಣ್, “ನನಗೆ ಚಿತ್ರರಂಗದಲ್ಲಿ ಸಂಗೀತ – ಸಾಹಿತ್ಯ ಬಿಟ್ಟು ಬೇರೇನೂ ಗೊತ್ತಿಲ್ಲ. ಇಲ್ಲಿಗೆ ಬಂದಾಗಿನಿಂದಲೂ ನನಗೆ ಗೊತ್ತಿರುವ ಇದೇ ಕೆಲಸವನ್ನು ಮಾಡುತ್ತಿದ್ದೇನೆ.
ಯಾವುದನ್ನೂ ಲೆಕ್ಕವಿಟ್ಟಿರಲಿಲ್ಲ. ಆದ್ರೆ ಈಗ ಹಿಂದಿರುಗಿ ನೋಡಿದಾಗ ಒಂದಷ್ಟು ಅಂಕಿ-ಅಂಶಗಳು ಕಾಣುತ್ತವೆ. ಅದೆಲ್ಲವೂ ಚಿತ್ರರಂಗ ಕೊಟ್ಟಿದ್ದು, ಜನರ ಪ್ರೀತಿ-ಅಭಿಮಾನದಿಂದ ಸಿಕ್ಕಿದ್ದು. ಈಗಲೂ ಪ್ರತಿದಿನ ಸಂಗೀತದ ಕೆಲಸ ಮಾಡುತ್ತಿದ್ದೇನೆ. ಒಳ್ಳೆಯ ಅವಕಾಶ ಸಿಕ್ಕರೆ ಮತ್ತೂಂದು ಚಂದ್ರಮುಖಿ ಪ್ರಾಣಸಖಿ ಅಂತಹ ಸೂಪರ್ ಹಿಟ್ ಹಾಡುಗಳನ್ನು ಕನ್ನಡಿಗರಿಗೆ ಕೇಳಿಸುತ್ತೇನೆ’ ಎಂದು ವಿಶ್ವಾಸದ ಮಾತುಗಳನ್ನಾಡುತ್ತಾರೆ.