Advertisement
ಈ ಓವರ್‌ಪಾಸ್ ಬಹುತೇಕ ಕಿನ್ನಿಮೂಲ್ಕಿ ಓವರ್‌ಪಾಸ್ ಮಾದರಿಯಲ್ಲಿ ನಿರ್ಮಾಣಗೊಳ್ಳಲಿದೆ ಎಂದು ರಾ. ಹೆ. ಎಂಜಿನಿಯರ್ ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿ ಮೂಲದ ಟ್ರಿನಿಟಿ ಕನ್‌ಸ್ಟ್ರಕ್ಷನ್ ಸಂಸ್ಥೆಯು ಓವರ್‌ಪಾಸ್ ನಿರ್ಮಾಣ ಗುತ್ತಿಗೆ ಪಡೆದಿದೆ. ಆಶೀರ್ವಾದ್ ಸಮೀಪ ಜೆಸಿಬಿ, ಬೃಹತ್ ಯಂತ್ರೋಪಕರಣ ಮೂಲಕ ಅಗೆಯುವ ಕೆಲಸ ಆರಂಭವಾಗಿದೆ. ಒಂದು ವರ್ಷದ ಒಳಗೆ ಕಾಮಗಾರಿ ಮುಗಿಸುವಂತೆ ಗುರಿ ನೀಡಲಾಗಿದೆ. ಸೋಮವಾರದಿಂದ ಜಂಕ್ಷನ್‌ನಲ್ಲಿ ವಾಹನಗಳು ಸಂಚರಿಸದಂತೆ ಬದಲಿ ಮಾರ್ಗದ ವ್ಯವಸ್ಥೆಯನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ರಾ. ಹೆ. ಪ್ರಾಧಿಕಾರ ಪ್ರಾಯೋಗಿಕವಾಗಿ ಮಾಡಿದೆ.
ಕಾಮಗಾರಿ ಹಿನ್ನೆಲೆಯಲ್ಲಿ ಟ್ರಾಫಿಕ್ ದಟ್ಟಣೆಯಾಗದಂತೆ ಸುಗಮ ಸಂಚಾರಕ್ಕೆ ವ್ಯವಸ್ಥೆ ರೂಪಿಸಲಾಗಿದೆ. ಕುಂದಾಪುರದಿಂದ ಉಡುಪಿ ಕಡೆಗೆ ಬರುವ ಬಸ್ ಸಹಿತ ಎಲ್ಲ ವಾಹನಗಳು ಸಂತೆಕಟ್ಟೆಯಿಂದ ಸರ್ವಿಸ್ ರಸ್ತೆಯಲ್ಲಿ ಉಡುಪಿಗೆ ಹೋಗಲು ವ್ಯವಸ್ಥೆ ಮಾಡಲಾಗುತ್ತಿದೆ. ಸ್ಥಳೀಯರಿಗೆ ಮತ್ತು ಕಲ್ಯಾಣಪುರ, ಮಲ್ಪೆ, ಕೊಡವೂರು, ಲಕ್ಷ್ಮೀನಗರ, ಬೇಂಗ್ರೆ, ಹೂಡೆ, ಕೆಮ್ಮಣ್ಣು, ನೇಜಾರ್ ಭಾಗಕ್ಕೆ ಹೋಗುವವರಿಗೆ ಅನುಕೂಲ ಆಗುವಂತೆ ಸಂತೆಕಟ್ಟೆ ಸೇತುವೆಯಿಂದ ಸ್ವಲ್ಪ ಮುಂದಕ್ಕೆ(ಕುಂದಾಪುರದಿಂದ ಉಡುಪಿಗೆ ಬರುವಾಗ) ಡಿವೈಡರ್ ಒಡೆದು ತಾತ್ಕಾಲಿಕ ಯು-ಟರ್ನ್ ವ್ಯವಸ್ಥೆ ಕಲ್ಪಿಸಿ, ಸೂಚನ ಫಲಕ ಅಳವಡಿಸಲಾಗಿದೆ. ಹಾಗೆಯೇ ಸರ್ವಿಸ್ ರಸ್ತೆ ವಿಸ್ತರಣೆಯೂ ನಡೆಯುತ್ತಿದೆ. ಸ್ಥಳೀಯರಿಗೆ ಅನುಕೂಲವಾಗುವಂತೆ ಪೂರ್ಣ ಪ್ರಮಾಣದಲ್ಲಿ ಸರ್ವಿಸ್ ರಸ್ತೆ ಬಳಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಉಡುಪಿಯಿಂದ ಕುಂದಾಪುರದ ಕಡೆಗೆ ಹೋಗುವ ಎಲ್ಲ ವಾಹನಗಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸಲಿದೆ. ಕುಂದಾಪುರದಿಂದ ಉಡುಪಿಗೆ ಬರುವವರು ಸದ್ಯಕ್ಕೆ ಕೊಳಲಗಿರಿ, ಶೀಂಬ್ರಾ, ಮಣಿಪಾಲ ಸುತ್ತುವರಿದು ಬರಬೇಕಾಗಿಲ್ಲ.