ರಾಯಚೂರು: ಕಾಫಿಗೆ ಕೊಡಗು, ಚಿಕ್ಕಮಗಳೂರು ಹೇಗೆ ಹೆಸರುವಾಸಿಯೋ ಹಾಗೆ ಸಿರಿಧಾನ್ಯಗಳಿಗೆ ಕಲ್ಯಾಣ ಕರ್ನಾಟಕ ಭಾಗವೇ ಬ್ರ್ಯಾಂಡ್ ಆಗಬೇಕು. ಅದಕ್ಕಾಗಿ ರಾಯಚೂರು ವಿಶ್ವವಿದ್ಯಾನಿಲಯಕ್ಕೆ ನಬಾರ್ಡ್‌ನ ಗ್ರಾಮೀಣಾಭಿವೃದ್ಧಿ ನಿಧಿಯಡಿ 25 ಕೋಟಿ ರೂ. ನೀಡುತ್ತಿದ್ದು, ಸಿರಿಧಾನ್ಯಗಳ ಉತ್ತೇಜನಕ್ಕೆ ಶ್ರಮಿಸಲಿ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ನಗರದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಸಿರಿಧಾನ್ಯ ಸಮಾವೇಶ-2022′ ಉದ್ಘಾಟಿಸಿ ಅವರು ಮಾತನಾಡಿದರು.
ಸಿರಿಧಾನ್ಯ ಬೆಳೆಯುವುದು, ಸಂಸ್ಕರಿಸುವುದು, ಮಾರುಕಟ್ಟೆ ಮಾಡುವ ಮೂಲಕ ಇಲ್ಲಿನ ಬ್ರ್ಯಾಂಡ್ ರೂಪದಲ್ಲಿ ಹೊರಹೊಮ್ಮಲಿ. ವಿಶ್ವವಿದ್ಯಾನಿಲಯಕ್ಕೆ ನೀಡುವ ಅನುದಾನದಲ್ಲಿ ಸಿರಿಧಾನ್ಯಗಳಿಗೆ ಸಂಬಂಧಿ ಸಿದ ಸಂಶೋಧನೆ, ಉತ್ಪಾದನೆ, ಮಾರುಕಟ್ಟೆ ಸಹಿತ ಇನ್ನಿತರ ಕಾರ್ಯಕ್ರಮಗಳನ್ನು ಜಾರಿಗೊಳಿಸಲಿ ಎಂದರು.
ಭಾರತವು 2018ರಲ್ಲಿ “ಸಿರಿಧಾನ್ಯ ವರ್ಷ’ ಆಚರಿಸಿತ್ತು. ಪ್ರಧಾನಿ ವಿಶ್ವಸಂಸ್ಥೆಗೆ ಇದೇ ಪ್ರಸ್ತಾವನೆ ಸಲ್ಲಿಸಿದ್ದರು. ಕರ್ನಾಟಕ ಅತಿ ಹೆಚ್ಚು ಸಿರಿಧಾನ್ಯ ಬೆಳೆಯುತ್ತಿದ್ದು, ಸಿರಿಧಾನ್ಯ ರಫ್ತಿನಲ್ಲಿ ಭಾರತವೇ ಮುಂಚೂಣಿಯಲ್ಲಿದೆ. ದೇಶದಲ್ಲಿ ಪೌಷ್ಟಿಕ ಸುರಕ್ಷೆ ಸಾಧಿಸಬೇಕಿದ್ದು, ಸಿರಿಧಾನ್ಯ ಬಹಳ ಮಹತ್ವದ ಪಾತ್ರ ವಹಿಸಲಿದೆ ಎಂದರು.
ನೀತಿ ಆಯೋಗದಿಂದ ಬಹುಮಾನ
ಪ್ರಧಾನಿ ನರೇಂದ್ರ ಮೋದಿಯವರು ಹಿಂದೆ ಯೋಗ ದಿನಾಚರಣೆ ಪ್ರಸ್ತಾವನೆ ಮುಂದಿಟ್ಟಾಗ ವಿಶ್ವಸಂಸ್ಥೆ ಸಮ್ಮತಿ ಸೂಚಿಸಿತ್ತು. ಅದರಂತೆ ಈಗ ಸಿರಿಧಾನ್ಯಗಳ ವರ್ಷಾಚರಣೆಗೆ ಯುಎನ್‌ಒಗೆ ಪ್ರಧಾನಿ ಪತ್ರ ಬರೆದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ 2023 ಅನ್ನು ಸಿರಿಧಾನ್ಯಗಳ ವರ್ಷವಾಗಿ ಘೋಷಿಸಿದೆ. ಈ ನಿಟ್ಟಿನಲ್ಲಿ ನೀತಿ ಆಯೋಗ ವಿಶೇಷ ಸ್ಟಾರ್ಟ್‌ಅಪ್ ಚಾಲೆಂಜ್ ಆಯೋಜಿಸಿದ್ದು, ಸಿರಿಧಾನ್ಯಗಳ ವಿಚಾರದಲ್ಲಿ ಅತ್ಯುತ್ತಮ ವಿಚಾರ ಪ್ರಸ್ತುತಪಡಿಸುವ ಮೂವರಿಗೆ 1 ಕೋಟಿ ರೂ. , ದ್ವಿತೀಯ ಸ್ಥಾನ ಪಡೆದ 15 ವ್ಯಕ್ತಿಗಳಿಗೆ 20 ಲಕ್ಷ ರೂ., ತೃತೀಯ ಸ್ಥಾನ ಪಡೆದವರಿಗೆ 10 ಲಕ್ಷ ರೂ. ಬಹುಮಾನ ನೀಡಲಾಗುವುದು.ಡಿಸೆಂಬರ್ ಅಂತ್ಯದೊಳಗೆ ತಮ್ಮ ವಿಚಾರಗಳನ್ನು ತಿಳಿಸಬೇಕು ಎಂದರು.