Advertisement

ಪುಸ್ತಕೋದ್ಯಮದಲ್ಲಿ ಕಲ್ಯಾಣ ಕರ್ನಾಟಕ ಹಿಂದುಳಿದಿಲ್ಲ: ಡಾ|ಸತೀಶಕುಮಾರ

07:20 PM Mar 15, 2021 | Team Udayavani |

ಕಲಬುರಗಿ: ಅಮೀನಪುರ ಸಂತೆ ಕಥೆಗಳು ಕನ್ನಡ ಸಾಹಿತ್ಯದ ಸಣ್ಣ ಕಥೆಗಳ ಲೋಕಕ್ಕೆ ನೀಡಿದ ಅಪಾರ ಕೊಡುಗೆಯಾಗಿದೆ. ಬಂಡಾಯದ ಜನಪದರತೆ ಮತ್ತು ನವ್ಯದ ಆಕೃತಿ ಸೂಕ್ಷ್ಮಗಳನ್ನು ಲೇಖಕರು ಸಮರ್ಥ ವಾಗಿ ಬಳಸಿಕೊಂಡಿದ್ದಾರೆ ಎಂದು ಹಿರಿಯ ಸಾಹಿತಿ ಸುಬ್ಬರಾವ್‌ ಕುಲಕರ್ಣಿ ಹೇಳಿದರು.

Advertisement

ನಗರದ ಸಿದ್ದಲಿಂಗೇಶ್ವರ ಬುಕ್‌ ಮಾಲ್‌ ದಲ್ಲಿ ನಡೆದ “ಅಟ್ಟದ ಮೇಲೆ ಬೆಟ್ಟದಂತ ವಿಚಾರ’ ಪಾಕ್ಷಿಕ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹಿರೇಮಠ ರಚಿಸಿದ “ಅಮೀನಪುರದ ಸಂತೆ’ ಕೃತಿ ಕುರಿತು ಅವರು ಮಾತನಾಡಿದರು.

ತಮ್ಮ ವಿಶಿಷ್ಟ ಸಂವೇದನಶೀಲ ಬರಹದಿಂದ ಕಥೆಗಳನ್ನು ಅವರ ಬದುಕಿನಲ್ಲಿ ಒಂದಾಗಿಸುವ ಮೂಲಕ  ಆಧುನಿಕ ಕಥನ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅಮೀನಪುರದ ಸಂತೆ ಸಂಕಲನದ ಮೂಲಕ ಸಣ್ಣಕಥೆಗಳು ಹಿಡಿಯುತ್ತಿರುವ ಹೊಸ ಹಾದಿಯನ್ನು ಪರಿಚಯಿಸಿದ್ದಾರೆ ಎಂದರು. ಲೇಖಕರ ಬಹುತೇಕ ಕಥೆಗಳು ಶೋಷಿತರನ್ನು ಗಮನದಲ್ಲಿ ಇರಿಸಿಕೊಂಡು ಸೃಷ್ಟಿಯಾಗಿವೆ. ಕಥೆಗಳಲ್ಲಿ ಶೋಷಿತರ ಬದುಕಿನೊಳಗೆ ತಣ್ಣಗೆ ಹುದುಗಿರುವ ಉದಾತ್ತ ಮೌಲ್ಯಗಳನ್ನು ಬಯಲಿಗೆಳೆಯಲಾಗಿದೆ. ಒಟ್ಟಾರೆ ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯಗಳೆಂಬ ಘಟ್ಟಗಳ ಮೂಲಕ ಹಾಯ್ದು ಬಂದ ಕನ್ನಡ ಸಾಹಿತ್ಯ ಶತಮಾನದ ಅಂಚಿನಲ್ಲಿ ಮತ್ತೆ ಹೊಸತನಕ್ಕಾಗಿ ಹಾತೊರೆಯುತ್ತಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಡಾ| ಸತೀಶ ಕುಮಾರ ಹೊಸಮನಿ ಮಾತನಾಡಿ, ಪುಸ್ತಕೋದ್ಯಮ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಹಿಂದುಳಿಲ್ಲ, ಯಾವುದೇ ಪ್ರದೇಶಕ್ಕೂ ಕಡಿಮೆಯಿಲ್ಲದಂತೆ ಬೆಳೆದಿದೆ  ಎಂದರು. ವ್ಯಾಪಾರಿಯಾಗಿದ್ದ ಬಸವರಾಜ ಕೊನೆಕ್‌ ಅವರ ಸತತ ಪ್ರಯತ್ನ ಹಾಗೂ 44 ವರ್ಷಗಳ ಕಠಿಣ ಪರಿಶ್ರಮ, ಹೋರಾಟದ ಫಲವಾಗಿ ಈ ಪ್ರದೇಶ ಪುಸ್ತಕೋದ್ಯಮದಲ್ಲಿ ಹಿಂದುಳಿದಿದೆ ಎನ್ನುವ ಕಳಂಕ ದೂರವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಸವರಾಜ ಕೊನೆಕ್‌ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಲೇಖಕರ ಪುಸ್ತಕಗಳನ್ನು ವಿಮರ್ಶೆಗೆ ಒಳಪಡಿಸಿ ಪುಸ್ತಕ ರೂಪದಲ್ಲಿ ಹೊರತರುವ ಮೂಲಕ ವಿಮರ್ಶಕರನ್ನು ಹುಟ್ಟುಹಾಕುವ ಕೆಲಸ ಪ್ರಕಾಶನ ಮಾಡುತ್ತಿದೆ ಎಂದು ನುಡಿದರು.

Advertisement

ಡಾ| ಚಿ.ಸಿ. ನಿಂಗಣ್ಣ, ಸಂಚಾಲಕ ಶಿವರಾಜ ಪಾಟೀಲ, ಡಾ| ಶ್ರೀನಿವಾಸ ಶಿರನೂರಕರ್‌, ಡಾ| ಕಲ್ಯಾಣರಾವ್‌ ಪಾಟೀಲ, ಸುರೇಶ ಬಡಿಗೇರ, ಕಾವ್ಯಶ್ರೀ ಮಹಾಗಾಂಕರ್‌, ಡಾ| ಶ್ರೀಶೈಲ ನಾಗರಾಳ, ಪ್ರೊ| ಎಸ್‌.ಎಲ್‌. ಪಾಟೀಲ, ರೋಲೇಕರ್‌ ನಾರಾಯಣ, ಶಿವರಂಜನ್‌ ಸತ್ಯಂಪೇಟೆ, ಡಾ| ಅಜಯ, ನಾಗಪ್ಪ ಟಿ. ಗೋಗಿ, ಬಿ.ಎಚ್‌. ನಿರಗುಡಿ, ಸುರೇಶ್‌ ಜಾಧವ, ಪ. ಮನು ಸಗರ್‌, ಸಂಗಪ್ಪ ತವಡೆ ಮತ್ತಿತರರು ಇದ್ದರು. ಡಾ| ಶರಣಬಸಪ್ಪ ವಡ್ಡನಕೇರಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next