Advertisement

ಅರ್ಧಕ್ಕೆ ನಿಂತ ಕಲ್ಯಾ-ಮಲ್ಲಾಯಬೆಟ್ಟು ರಸ್ತೆ ಕಾಮಗಾರಿ

10:07 PM May 18, 2019 | sudhir |

ಬೆಳ್ಮಣ್‌: ಅರಣ್ಯ ಇಲಾಖೆಯ ತಡೆಯಿಂದಾಗಿ ಕಲ್ಯಾ-ಮಲ್ಲಾಯಬೆಟ್ಟು ರಸ್ತೆಯ ಕಾಮಗಾರಿ ನಿರ್ಮಾಣ ಹಂತದಲ್ಲೇ ಅರ್ಧಕ್ಕೆ ನಿಂತು 9 ವರ್ಷಗಳೇ ಕಳೆದರೂ ಪೂರ್ಣಗೊಂಡಿಲ್ಲ. ಈ ಬಗ್ಗೆ ತೀವ್ರ ಜನಾಕ್ರೋಶ ವ್ಯಕ್ತವಾಗಿದೆ.

Advertisement

ಕಾರ್ಕಳ ತಾಲೂಕಿನ ಹಾಳೆಕಟ್ಟೆಯಿಂದ- ಕಲ್ಯಾ ಮಲ್ಲಾಯಬೆಟ್ಟು ಮಾರ್ಗವಾಗಿ ಕುಂಟಾಡಿ, ಕಾರ್ಕಳ ಹಾಗೂ ಉಡುಪಿಯನ್ನು ತಲುಪಲು ಬಹು ಹತ್ತಿರದ ರಸ್ತೆ ಇದಾಗಿದೆ. ಕಾಮಗಾರಿ ನಿಂತ ಕಾರಣ ರಸ್ತೆ ತುಂಬ ಜಲ್ಲಿಕಲ್ಲಿಗಳು ಬಿದ್ದಿದ್ದು ಸಣ್ಣಪುಟ್ಟ ವಾಹನಗಳ ಓಡಾಟವೂ ಕಷ್ಟ ಎನ್ನುವಂತಿದೆ.

ಹಾಳೆಕಟ್ಟೆಯಿಂದ ಕುಂಟಾಡಿಗೆ ಸುಮಾರು 5 ಕಿ.ಮೀ. ಉದ್ದದ ರಸ್ತೆಯಿದ್ದು 400 ಮೀ. ಉದ್ದದ ರಸ್ತೆ ಪ್ರಸ್ತುತ ಅರಣ್ಯ ಇಲಾಖೆಯ ತಡೆಯಿಂದಾಗಿ ಡಾಮರೀಕರಣಗೊಳ್ಳದೆ ಜಲ್ಲಿ ಕಲ್ಲಿನ ರಾಶಿಯಿಂದ ತುಂಬಿ ಹೋಗಿದೆ.

ಗ್ರಾಮ ಸಡಕ್‌ ಯೋಜನೆಯ ರಸ್ತೆ
8 ವರ್ಷಗಳ ಹಿಂದೆ ಈ ರಸ್ತೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಕಾಮಗಾರಿ ಜಾರಿಯಾದರೂ ತಾಂತ್ರಿಕ ಕಾರಣಗಳಿಂದ ಕಾಮಗಾರಿ ನಿಂತಿದೆ.

ಹಾಳೆಕಟ್ಟೆಯಿಂದ ಸಾಗಿ ಮಲ್ಲಾಯಬೆಟ್ಟುವಿನ ವರೆಗೆ ರಸ್ತೆಗೆ ಡಾಮರೀಕರಣಗೊಂಡಿದ್ದರೆೆ, ಅನಂತರ ಅಲ್ಲಿಂದ ಸುಮಾರು 400 ಮೀ. ಉದ್ದದ ರಸ್ತೆಗೆ ಅರಣ್ಯ ಇಲಾಖೆ ಆಕ್ಷೇಪವಿರುವ ಕಾರಣ ಕಾಮಗಾರಿ ನಿಂತಿದೆ.

Advertisement

ಹಾಕಿದ ಡಾಮರೂ ಕಿತ್ತು ಹೋಗಿದೆ
ಕಲ್ಯಾ ಕುಂಟಾಡಿ ಸಂಪರ್ಕ ರಸ್ತೆ ಡಾಮರೀಕರಣ ಗೊಂಡರೂ ಮಲ್ಲಾಯಬೆಟ್ಟು ಸಮೀಪ ಜಲ್ಲಿಯ ಮಣ್ಣಿನ ರಸ್ತೆ ಮಾತ್ರ ಓಡಾಟಕ್ಕೆ ದೊರಕುತ್ತದೆ. ಕೆಲ ವರ್ಷಗಳ ಹಿಂದೆ ಹಾಕಲಾದ ಡಾಂಬರೂ ಕಿತ್ತು ಹೋಗಿದೆ. ಒಂದೆಡೆ ರಸ್ತೆಯ ಕಾಮಗಾರಿ ಪೂರ್ಣಗೊಂಡಿಲ್ಲವಾದರೆ ಇನ್ನೊಂದೆಡೆ ರಸ್ತೆಗೆ ಹಾಕಲಾದ ಜಲ್ಲಿ ಟಾರು ಎಲ್ಲವೂ ಕಿತ್ತು ಹೋಗಿ ಅಲ್ಲಲ್ಲಿ ಹೊಂಡಗಳು ನಿರ್ಮಾಣಗೊಂಡಿದ್ದು ಸಂಚಾರ ದುಸ್ತರವಾಗಿದೆ.

ಈ ಭಾಗದ 400 ಮೀ. ಉದ್ದದ ರಸ್ತೆ ಡಾಮರೀಕರಣಗೊಳ್ಳದೆ ಹಾಗೆಯೇ ಉಳಿದರೂ ಇಲ್ಲಿ ಓಡಾಟ ನಡೆಸುವ ಘನ ವಾಹನಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಈ ಭಾಗದಲ್ಲಿ ಸಾಕಷ್ಟು ಗಣಿಗಾರಿಕೆಗಳು ನಡೆಯುತ್ತಿದ್ದು 10 ಚಕ್ರದ ಟಿಪ್ಪರ್‌ ಗಳ ನಿತ್ಯ ಓಡಾಟದಿಂದ ಡಾಮರು ಕಿತ್ತು ಹೋಗಿದೆ. ಆದ್ದರಿಂದ ಘನ ವಾಹನ ನಿಷೇಧಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

ರಸ್ತೆ ಡಾಮರು ಆಗದ್ದರಿಂದ ಮಳೆಗಾಲದಲ್ಲಿ ವರ್ಷವೂ ಸಮಸ್ಯೆ ತೀವ್ರಗೊಳ್ಳುತ್ತದೆ. ಪಾದಚಾರಿ ಗಳು, ವಿದ್ಯಾರ್ಥಿಗಳು ಕೆಸರಿನ ಅಭಿಷೇಕ ಮಾಡಿಸಿ ಕೊಳ್ಳಬೇಕಾಗಿದೆ. ಇಷ್ಟರವರೆಗೆ ರಸ್ತೆ ಕಾಮಗಾರಿ ನಿಂತರೂ ಅಧಿಕಾರಿಗಳು, ಜನಪ್ರತಿನಿಧಿಗಳಾರೂ ಮಾತೇ ಆಡುತ್ತಿಲ್ಲ ಎನ್ನುವುದು ಗ್ರಾಮಸ್ಥರ ದೂರು. ಅರಣ್ಯ ಇಲಾಖೆ ತಡೆ ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೂಡಲೇ ಡಾಮರು ಕಾಮಗಾರಿ
ಅರಣ್ಯ ಇಲಾಖೆಯ ಜತೆ ಚರ್ಚಿಸಿ ಕೂಡಲೇ ಕ್ರಮ ಕೈಗೊಂಡು ರಸ್ತೆ ಡಾಮರು ಕಾಮಗಾರಿ ನಡೆಸಲಿದ್ದೇವೆ.
-ಸುಮೀತ್‌ ಶೆಟ್ಟಿ, ಜಿ.ಪಂ. ಸದಸ್ಯರು

ಹಲವು ವರ್ಷಗಳ ಸಮಸ್ಯೆ
ಪ್ರತೀ ಬಾರಿಯೂ ಚುನಾವಣೆ ಬಂದಾಗ ಈ ರಸ್ತೆ ಸರಿ ಮಾಡಿಕೊಡುತ್ತೇವೆ ಎಂದು ಬರುವ ಜನಪ್ರತಿನಿಧಿ ಗಳು ಮತ್ತೆ ಇತ್ತ ಕಡೆ ಸುಳಿಯುವುದಿಲ್ಲ. ಹಲವು ವರ್ಷಗಳಿಂದ ರಸ್ತೆ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಯಾರೊಬ್ಬರೂ ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ.
-ಸತೀಶ್‌ ಹಾಳೆಕಟ್ಟೆ, ಗ್ರಾಮಸ್ಥರು

ಘನ ವಾಹನಗಳ ಆರ್ಭಟ
ರಸ್ತೆ ಕಾಮಗಾರಿ ವಿಳಂಬಕ್ಕೆ ಅರಣ್ಯ ಇಲಾಖೆಯ ತಡೆ ಕಾರಣ ಎನ್ನಲಾಗುತ್ತಿದೆ. ಇದು ಇಡೀ ಎರಡು ಗ್ರಾಮಗಳ ಜನರಿಗೆ ತೊಂದರೆಯನ್ನು ಉಂಟುಮಾಡಿದೆ. ಕೆಲವು ಕಡೆ ಹಾಕಿರುವ ಡಾಮರು ಘನ ವಾಹನಗಳ ಆರ್ಭಟಕ್ಕೆ ಈಗಾಗಲೇ ಕಿತ್ತು ಹೋಗಿದೆ.
-ಸುಂದರಿ ಪೂಜಾರಿ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next