Advertisement

ಗುಂಡಿಬೈಲು: ಗದ್ದೆಯೇ ಕೊಳಚೆ ಗುಂಡಿ !

06:00 AM Jun 08, 2018 | Team Udayavani |

ವಿಶೇಷ ವರದಿ- ಉಡುಪಿ: ನಗರಸಭಾ ವ್ಯಾಪ್ತಿಯ “ಗುಂಡಿಬೈಲು’ ಗದ್ದೆಗಳಿದ್ದ ಜಾಗ. ಆದರೆ ಈಗ ಗದ್ದೆಗಳ ಮೇಲೆ ಮಣ್ಣು ತುಂಬಿಸಿ, ಸಮತಟ್ಟುಗೊಳಿಸಿ ಮನೆ, ವಸತಿ ಸಂಕೀರ್ಣಗಳು ನಿರ್ಮಾಣವಾಗಿವೆ. ಆದರೆ ಒಂದು ಮಳೆ ಬಂದರೆ ಸಾಕು, ನೀರು ಹೋಗುವುದಕ್ಕೆ ಮಾತ್ರ ಜಾಗವಿಲ್ಲ.

Advertisement

ಇಲ್ಲಿ ಕಲ್ಸಂಕ ತೋಡನ್ನು ಸೇರುವ ಕುದ್ರೆ ಕಲ್ಸಂಕ ಒಂದು ಬದಿಯಲ್ಲಿ ಹರಿಯುತ್ತಿದೆ. ಈ ತೋಡಿನ ಹೂಳು, ಕಸ ತೆಗೆಯುವ ಕೆಲಸವೂ ನಡೆದಿಲ್ಲ. ಇದರಿಂದ ಮಳೆಗಾಲದಲ್ಲಿ ನೀರು ಮೇಲೆ ಉಕ್ಕಿ ಬರುತ್ತದೆ. “ಮೊನ್ನೆಯ ಮಳೆಗೂ ತೋಡಿನ ನೀರು ಕಸ ಸಮೇತ ನಮ್ಮ ಮನೆ ಬಾಗಿಲಿಗೆ ಬಂದಿತ್ತು. ತೋಡು ಕ್ಲೀನ್‌ ಮಾಡಿದರೆ ಇಡೀ ಪರಿಸರದವರಿಗೆ ಉಪಯೋಗವಿದೆ’ಎನ್ನುತ್ತಾರೆ  ಶ್ಯಾಮ್‌.

ಗದ್ದೆ ಕೊಳಚೆ ಗುಂಡಿ
ಗುಂಡಿಬೈಲು ಮೊದಲನೇ ಅಡ್ಡರಸ್ತೆ ಯಿಂದ ಮುಂದಕ್ಕೆ ಹೋದಾಗ ಅಲ್ಲಿನ ಗದ್ದೆ ಕೊಳಚೆ ನೀರಿನಿಂದ ತುಂಬಿ ಹೋಗಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ಇದು ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ.


ಒಳಚರಂಡಿ ಪಿಟ್‌ ಅಸಮರ್ಪಕ
ಇಲ್ಲಿ  ಒಳಚರಂಡಿ ಮ್ಯಾನ್‌ಹೋಲ್‌ ಅಸಮರ್ಪಕವಾಗಿದೆ. ಅದಕ್ಕೆ ಕೊಳಚೆ ನೀರು ಹರಿಯುವುದಕ್ಕೆ ವ್ಯವಸ್ಥೆಯೂ ಮಾಡಿಲ್ಲ. ಮೊನ್ನೆ ಮಳೆಗೆ ಸಮಸ್ಯೆಯಾದಾಗ ನಗರಸಭೆಯವರು ಸಣ್ಣ ತೋಡು ಮಾಡಿದ್ದಾರೆ. ಈಗ ಕೊಳಚೆ ನೀರು ಗದ್ದೆ ಸೇರಿ ಮನೆಗಳಲ್ಲಿ ವಾಸಿಸಲು ಆತಂಕ ಉಂಟಾಗಿದೆ. ಬಾವಿಗಳು ಹಾಳಾಗುವ ಭೀತಿ ಇದೆ ಎಂದು ಸ್ಥಳೀಯರ ಅಸಹಾಯಕತೆ.

ಪಂಪ್‌ ಅಳವಡಿಸಿ ಕೊಳಚೆ ನೀರೆತ್ತಲು ಹರಸಾಹಸ
ಗದ್ದೆಯಲ್ಲಿ ತುಂಬಿರುವ ಕೊಳಚೆ ನೀರನ್ನು ಒಳಚರಂಡಿ ಪಿಟ್‌ಗೆ ಪಂಪ್‌ ಮೂಲಕ ಹರಿಸುವ ಪ್ರಯತ್ನವನ್ನು ಸ್ಥಳೀಯರು ನಡೆಸುತ್ತಿದ್ದಾರೆ. ಮಳೆ ಕಡಿಮೆಯಾದ ಸಂದರ್ಭದಲ್ಲಿಯಾದರೂ ನೀರನ್ನು ಖಾಲಿ ಮಾಡಬಹುದು ಎಂಬ ಲೆಕ್ಕಾಚಾರ ಅವರದ್ದು. ಆದರೆ ಗದ್ದೆಯಲ್ಲಿ ಒರತೆ ಇರುವುದರಿಂದ ಅದು ಫ‌ಲ ನೀಡುವುದು ಕಷ್ಟಕರ. ಹಾಗಾಗಿ ಈ ಮಳೆಗಾಲದಲ್ಲಿ ಇಲ್ಲಿನ ಜನತೆ ಕೊಳಚೆ ಸಮಸ್ಯೆಯಿಂದ ಮುಕ್ತಿ ಹೊಂದುವುದು ಕಷ್ಟವಾಗಿದೆ. ಮನೆಗಳ ಲೇ ಔಟ್‌ ಮಾಡುವಾಗಲೇ ಮಳೆನೀರು ಚರಂಡಿಗೆ ಜಾಗ ಬಿಡುವುದನ್ನು ಕಡ್ಡಾಯ ಮಾಡಬೇಕು. ಇಲ್ಲವಾದರೆ ಇದೇ ರೀತಿಯ ಸಮಸ್ಯೆಯಾದೀತು ಎನ್ನುತ್ತಾರೆ ಸ್ಥಳೀಯರು.

ಮಾದರಿ ಕಾಮಗಾರಿ
ತೋಡನ್ನು ಹೇಗೆ ಸುವ್ಯವಸ್ಥಿತ ಮಾಡಬಹುದು, ಪಕ್ಕದಲ್ಲೇ ರಸ್ತೆಯನ್ನು ನಿರ್ಮಿಸಿ ಸಂಪರ್ಕ ಕಲ್ಪಿಸಬಹುದು ಎಂಬುದಕ್ಕೆ ಗುಂಡಿಬೈಲಿನ 2ನೇ ಅಡ್ಡರಸ್ತೆಯಲ್ಲಿ ಈ ಬಾರಿ ನಡೆದಿರುವ ಕಾಮಗಾರಿ ಉತ್ತಮ ಉದಾಹರಣೆ. ತೋಡು ಕುಸಿಯದಂತೆ ಕಾಂಕ್ರೀಟ್‌ನಿಂದ ತಡೆಗೋಡೆ, ಇದಕ್ಕೆ ಹೊಂದಿಕೊಂಡೇ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಇದೇ ರೀತಿಯ ಕೆಲಸ ಮತ್ತಷ್ಟು ಕಡೆ ನಡೆದರೆ ತೋಡುಗಳಿಂದ ಸಮಸ್ಯೆಯಾಗದು.

Advertisement

ನೀರು ಹೋಗಲು ಜಾಗವಿಲ್ಲ
ಹಿಂದೆ ಇಲ್ಲಿ ಗದ್ದೆಗಳಿತ್ತು. ಈಗ ಮನೆ, ಕಟ್ಟಡಗಳು ಆಗಿ ನೀರು ಹೋಗಲು ಜಾಗವಿಲ್ಲ. ಕುದ್ರೆ ಕಲ್ಸಂಕ ತೋಡನ್ನು ತೆರವುಗೊಳಿಸುವ ಕೆಲಸ ಕಳೆದ ವರ್ಷ ಮಾಡಿದ್ದರು. ಈ ಬಾರಿಯೂ ಮಾಡಿದರೆ ಸಮಸ್ಯೆ ಕಡಿಮೆಯಾಗುತ್ತಿತ್ತು. ಇಲ್ಲಿ ರಸ್ತೆಗಳಿವೆ. ಆದರೆ ನೀರು ಹೋಗಲು ಜಾಗವಿಲ್ಲ.
– ಸಂಜೀವ ಕೋಟ್ಯಾನ್‌, ಗುಂಡಿಬೈಲು 

Advertisement

Udayavani is now on Telegram. Click here to join our channel and stay updated with the latest news.

Next