Advertisement

ಕಲ್ಮಡ್ಕ –ದೊಡ್ಡತೋಟ ರಸ್ತೆಗಿಲ್ಲ ಬಸ್‌ ಭಾಗ್ಯ

12:39 AM Jun 22, 2019 | mahesh |

ಬೆಳ್ಳಾರೆ: ಬೆಳ್ಳಾರೆಯಿಂದ ನಿಂತಿಕಲ್ಲು ಮುಖ್ಯ ರಸ್ತೆಯ ಪಾಜಪಳ್ಳದಿಂದ ಕಲ್ಮಡ್ಕ ಗ್ರಾಮದ ಮೂಲಕ ಅಮರ ಮುಟ್ನೂರು, ದೊಡ್ಡತೋಟ ಮೂಲಕ ಹಾದು ಹೋಗಿ ಸುಳ್ಯಕ್ಕೆ ಸುಲಭವಾಗಿ ತಲುಪಬಹುದಾದ ರಸ್ತೆಯಲ್ಲಿ ಕಲ್ಮಡ್ಕದಿಂದ ಸುಳ್ಯಕ್ಕೆ ಬಸ್‌ ಸೌಲಭ್ಯವಿಲ್ಲದೆ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ.

Advertisement

ಈ ರಸ್ತೆ ಕುಕ್ಕುಜಡ್ಕ ಮೂಲಕ ಸುಳ್ಯಕ್ಕೆ ಹಾದು ಹೋಗುವ ಮುಖ್ಯ ರಸ್ತೆಯನ್ನು ಸಂಪರ್ಕಿಸುತ್ತದೆ. ಸುಳ್ಯ ಮತ್ತು ಪುತ್ತೂರು ಬಸ್‌ ಡಿಪೋದಿಂದ 9 ಬಸ್‌ಗಳು ಕಲ್ಮಡ್ಕದ ವರೆಗೆ ಬರುತ್ತಿವೆ. ಅಯ್ಯನಕಟ್ಟೆ ಕಳಂಜ ಮಾರ್ಗವಾಗಿಯೂ ಕುಕ್ಕುಜಡ್ಕ ಅಮರ ಪಟ್ನೂರುಗೆ ಕೆಲವು ಬಸ್ಸುಗಳಿವೆ. ಆದರೆ ಕಲ್ಮಡ್ಕದಿಂದ ಕುಕ್ಕುಜಡ್ಕ ಮಾರ್ಗವಾಗಿ ಹಾದು ಹೋಗುವ ರಸ್ತೆಯಲ್ಲಿ ಯಾವುದೇ ಬಸ್‌ಗಳ ಸೌಲಭ್ಯ ಇಲ್ಲ. ಕಲ್ಮಡ್ಕದಿಂದ ಮುಂದೆ ಮತ್ತಿಗುಡ್ಡೆ, ಹಾಸನಡ್ಕ, ಉರುಂಬಿ ಮುಂತಾದ ಊರುಗಳು ಸಿಗುತ್ತವೆ. ಆ ಊರಿನ ಜನ ಸರಕಾರಿ ಬಸ್‌ ನೋಡಬೇಕಾದರೆ 5 ಕಿ.ಮೀ. ದೂರ ನಡೆದು ಬರಬೇಕು. ಈ ರಸ್ತೆಯಲ್ಲಿ ಯಾವುದೇ ಖಾಸಗಿ ಸರ್ವೀಸ್‌ ಬಸ್‌, ಟೆಂಪೋಗಳೂ ಓಡಾಡುವುದಿಲ್ಲ.

ಕಲ್ಮಡ್ಕ ಅಮರ ಮುಟ್ನೂರು, ಮುಪ್ಪೇರ್ಯ ಗ್ರಾಮಗಳನ್ನು ಒಳಗೊಂಡ ನೂರಾರು ಜನರು ನಿತ್ಯ ಓಡಾಟ ನಡೆಸುವ ಈ ರಸ್ತೆ ಸರಕಾರಿ ಬಸ್‌ ಸೌಕರ್ಯದಿಂದ ವಂಚಿತವಾಗಿದೆ. ಕಲ್ಮಡ್ಕದ ಜನರಿಗೆ ತಾಲೂಕು ಕೇಂದ್ರವಾದ ಸುಳ್ಯಕ್ಕೆ ಹೋಗಬೇಕಾದರೆ ಪಾಜಪಳ್ಳ ಮೂಲಕ ಬೆಳ್ಳಾರೆಗೆ ಬರಬೇಕು. ಸುಳ್ಯದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳು ಸಹಿತ ತಾಲೂಕು ಕಚೇರಿ ಗಳಿವೆ. ನ್ಯಾಯಲಯ ಮಾತ್ರವಲ್ಲದೆ ಇನ್ನೂ ಅನೇಕ ಸರಕಾರಿ ಖಾಸಗಿ ಸಂಸ್ಥೆಗಳು ಇವೆ. ನೂರಾರು ವಿದ್ಯಾರ್ಥಿಗಳು ಬಸ್‌ ಪಾಸ್‌ ಮಾಡಿಸಿಕೊಂಡರೂ ಬಸ್‌ ಇಲ್ಲದೆ ಪ್ರಯೋಜನವಿಲ್ಲ. ಶಾಲಾ ಕಾಲೇಜಿಗೆ ಸುಲಭವಾಗಿ ತಲುಪಬಹುದಾದ ದಾರಿ ಇದ್ದರೂ ಬಸ್‌ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.

ಮನವಿಗೆ ಸಿಕ್ಕಿಲ್ಲ ಸ್ಪಂದನೆ
ಈ ರಸ್ತೆಯ ಮೂಲಕ ಸರಕಾರಿ ಬಸ್‌ ಸೌಲಭ್ಯಕ್ಕಾಗಿ ಹಲವು ಬಾರಿ ಶಾಸಕರಿಗೆ ಹಾಗೂ ಸಂಬಂಧ ಪಟ್ಟವರಿಗೆ ಮನವಿ ಮಾಡುತ್ತಲೇ ಬಂದಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ನಾಗರಿಕರು.

ವಿದ್ಯಾಥಿಗಳಿಗೆ ಅನುಕೂಲ

ಕಲ್ಮಡ್ಕದಿಂದ ಸುಳ್ಯಕ್ಕೆ ಬಸ್‌ ಸಂಪರ್ಕವಿದ್ದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು. ಈಗ ವಿದ್ಯಾರ್ಥಿಗಳು ಸುತ್ತು ಬಳಸಿ ಸುಳ್ಯ ತಲುಪಬೇಕಾಗಿದ್ದು, ಬಸ್‌ ಸೌಲಭ್ಯವಾದರೆ ವಿದ್ಯಾರ್ಥಿಗಳಿಗೆ ಸಮಯದ ಸದುಪಯೋಗವಾಗುತ್ತಿತ್ತು.
Advertisement

– ಜಯಗಣೇಶ, ವಿದ್ಯಾರ್ಥಿ

ಮನವಿ ಬಂದಿಲ್ಲ

ಡಿಪೋಗೆ ಮನವಿ ಬಂದಿಲ್ಲ. ಮನವಿ ಬಂದಲ್ಲಿ ಪರಿಶೀಲಿಸಿ ವಿಭಾಗೀಯ ಕಚೇರಿಗೆ ತಲುಪಿಸುತ್ತೇವೆ. ಇದು ಹೊಸ ರೂಟ್ ಆದ ಕಾರಣ ಬೇಡಿಕೆಯ ಬಗ್ಗೆ ಪರಿಶೀಲಿಸಬೇಕಿದೆ. – ಸುಂದರ್‌ರಾಜ್‌ ಕೆಎಸ್ಸಾರ್ಟಿಸಿ ಡಿಪೋ ಮ್ಯಾನೇಜರ್‌, ಸುಳ್ಯ

ಬಸ್‌ ಓಡಾಟ ಆರಂಭಿಸಿ

ಸಮರ್ಪಕವಾದ ರಸ್ತೆ ಇದ್ದರೂ ಇಲ್ಲಿ ಬಸ್‌ ಓಡಾಟವಿಲ್ಲ. ದಿನದಲ್ಲಿ ಬೆಳಿಗ್ಗೆ,ಮಧ್ಯಾಹ್ನ,ಸಂಜೆಯಾದರೂ ಮೂರು ಬಾರಿ ಸರಕಾರಿ ಬಸ್‌ ಬಂದರೆ ಸುಳ್ಯಕ್ಕೆ ಸುಲಭವಾಗಿ ತಲುಪಬಹುದು. – ಭಾಸ್ಕರ ಕಲ್ಮಡ್ಕ, ಸ್ಥಳೀಯ ನಿವಾಸಿ
Advertisement

Udayavani is now on Telegram. Click here to join our channel and stay updated with the latest news.

Next