ಬೀಳಗಿ: ಮುಂಬರುವ 2019 ರ ಫೆಬ್ರವರಿ 9,10 ಹಾಗೂ 11 ರಂದು ಜರುಗಲಿರುವ ಕಲ್ಮಠದ ಗುರುಪಾದ ದೇವರು ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಶ್ರೀಗಳ ಹಾಗೂ ಹಿರಿಯರ ಮಾರ್ಗದರ್ಶನದಂತೆ ತಾವು ಪ್ರಾಮಾಣಿಕ ಸೇವೆ ಸಲ್ಲಿಸುವೆ ಜತೆಗೆ ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಎಲ್ಲ ಭಕ್ತ ಸಮೂಹದ ಒಗ್ಗಟ್ಟು ಅಗತ್ಯವಾಗಿದೆ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.
ಕಲ್ಮಠದ ಗುರುಪಾದ ದೇವರು ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ವಿವಿಧ ಮಠಾಧಿಧೀಶರ, ರಾಜಕೀಯ ಮುಖಂಡರ ಮತ್ತು ಊರಿನ ಗಣ್ಯರ ಸಮ್ಮುಖದಲ್ಲಿ ಶ್ರೀಮಠದಲ್ಲಿ ಕರೆಯಲಾದ ಎರಡನೇ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಮಗೆ ಇಂತಹ ಕಾರ್ಯಕ್ರಮದಲ್ಲಿ ಸ್ವಲ್ಪ ಅನುಭವದ ಕೊರತೆಯಿದ್ದರೂ ಕೂಡಾ ಅಂತರಾತ್ಮದಿಂದ ಶ್ರೀಮಠವು ನೀಡುವ ಜವಾಬ್ದಾರಿಯನ್ನು ನಿಭಾಯಿಸುವೆ. ಕಾರ್ಯಕ್ರಮದ ಯಶಸ್ಸಿಗೆ ಕೈಲಾದಷ್ಟು ಮಾಡುವ ದಾನ-ಧರ್ಮ ಎಷ್ಟು ಮುಖ್ಯವೋ ಎಲ್ಲರೂ ತನು-ಮನದಿಂದ ಕೈ ಜೋಡಿಸಿ ದುಡಿಯುವುದು ಕೂಡ ಅಷ್ಟೇ ಮುಖ್ಯ. ಇದು ನಮ್ಮ ಮಠ ಎನ್ನುವ ಭಾವ ಎಲ್ಲರಲ್ಲೂ ಬಂದರೆ ಕಾರ್ಯಕ್ರಮ ಯಶಸ್ವಿಯಾದಂತೆ. ಶ್ರೀಮಠವು ಭವ್ಯ ಇತಿಹಾಸ ಹೊಂದಿದೆ.
ಶ್ರೀಮಠದ ಗುರುಪಾದ ದೇವರು ಕೂಡ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತಿದ್ದಾರೆ. ಶ್ರೀಮಠವು ಇನ್ನೂ ಉತ್ತೋರೋತ್ತರವಾಗಿ ಬೆಳೆಯಬೇಕು. ಶ್ರೀಮಠದ ಪಟ್ಟಾ ಧಿಕಾರ ಮಹೋತ್ಸವದ ಯಶಸ್ಸಿಗೆ ಪಕ್ಷಾತೀತ, ಜಾತ್ಯತೀತವಾಗಿ ದುಡಿಯುವ ಮೂಲಕ ಎಲ್ಲರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುವುದಾಗಿ ಹೇಳಿದರು. ಶ್ರೀಮಠಕ್ಕೆ ಕೂಡಲೇ ಕಾಂಕ್ರೀಟ್ ರಸ್ತೆ, ಕುಡಿವ ನೀರು ಸೌಲಭ್ಯ ಒದಗಿಸುವ ಮೂಲಕ ಇನ್ನು ಏನು ಮೂಲ ಸೌಕರ್ಯಗಳ ಅಗತ್ಯತೆವಿದೆಯೋ ಅದನ್ನು ಪೂರೈಸುವುದಾಗಿ ಭರವಸೆ ನೀಡಿದರು.
ಬೆಳಗಾವಿ-ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ವಿದಾಯಕ ಮತ್ತು ರಚನಾತ್ಮಕ ಕಾರ್ಯಕ್ರಮ ಮಾಡಲು ಆಯೋಜಿಸಲಾಗಿದೆ. ಅದ್ಧೂರಿ ಜತೆಗೆ ಅರ್ಥಪೂರ್ಣ ಕಾರ್ಯಕ್ರಮವನ್ನಾಗಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಈಗಿನಿಂದಲೇ ಸಿದ್ಧತೆ ಮಾಡಿಕೊಂಡಾಗ ಮಾತ್ರ ಅಂದುಕೊಂಡತೆ ಗುರಿ ಮುಟ್ಟಲು ಸಾಧ್ಯ ಎಂದರು.
ಮುರುಘಾಮಠ- ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ, ಹಂದಿಗುಂದ ಶಿವಾನಂದ ಸ್ವಾಮೀಜಿ, ಬೂದಿಹಾಳ ಪ್ರಭು ಸ್ವಾಮೀಜಿ, ಗಿರಿಸಾಗರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಚರಂತಿಮಠ ಶಿವುಕುಮಾರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ಹನುಮಂತ ನಿರಾಣಿ, ರಾಮನಗೌಡ ಜಕ್ಕನಗೌಡರ, ಶ್ರೀರಾಮ ಇಟ್ಟಣ್ಣವರ, ಸಿದ್ದಣ್ಣ ಕೆರೂರ ಹಾಜರಿದ್ದರು.