ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಗಡಿಭಾಗ ಕಲ್ಮಕಾರು ಭಾಗದಲ್ಲಿ ಕಾಡಾನೆ ಹಾವಳಿ ಕಾಣಿಸಿಕೊಂಡಿದೆ. ಮೇ 1ರಂದು ರಾತ್ರಿ ಇಲ್ಲಿನ ಕೊಪ್ಪಡ್ಕ ಪರಿಸರದಲ್ಲಿ ಆನೆಗಳು ಕೃಷಿಕರ ತೋಟಕ್ಕೆ ಧಾಳಿ ಮಾಡಿವೆ. ತಾ.ಪಂ. ಸದಸ್ಯ ಉದಯ ಕೊಪ್ಪಡ್ಕ ಅವರ ತೋಟಕ್ಕೆ ನುಗ್ಗಿದ ಆನೆ 6 ಫಲಭರಿತ ತೆಂಗಿನ ಸಸಿ, 25ಕ್ಕೂ ಹೆಚ್ಚು ಅಡಿಕೆ ಸಸಿ ಹಾಗೂ ಅಪಾರ ಪ್ರಮಾಣದ ಬಾಳೆ ಸಸಿಗಳನ್ನು ತಿಂದು ಹಾಕಿದೆ. ಹೊಟ್ಟೆ ತುಂಬಿದ ಮೇಲೆ ಗಿಡಗಳನ್ನು ಪುಡಿ ಮಾಡಿ, ಹಾನಿಗೊಳಿಸಿದೆ. ನೀರಾವರಿ ಯಂತ್ರೋಪಕರಣಗಳನ್ನೂ ಧ್ವಂಸ ಮಾಡಿದೆ. ಆನೆಗಳು ಕಾಡಿಗೆ ಮರಳಿದ್ದರೂ ಮತ್ತೆ ದಾಳಿ ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಬಳಿಕ ಪಕ್ಕದ ಕೃಷಿಕರ ತೋಟಗಳಿಗೂ ತೆರಳಿ ಅಲ್ಲಿಯೂ ಬೆಳೆದು ನಿಂತ ಫಸಲು, ಗಿಡಗಳನ್ನು ನಾಶಪಡಿಸಿದೆ. ಈ ಭಾಗದಲ್ಲಿ ಅರಣ್ಯ ಇಲಾಖೆ ಆನೆ ಕಂದಕ ನಿರ್ಮಿಸಿದ್ದು, ಅದು ಪೂರ್ಣ ಪ್ರಮಾಣದಲ್ಲಿ ಆಗಿಲ್ಲ ಎಂದು ಆರೋಪಿಸಿರುವ ತಾ.ಪಂ. ಸದಸ್ಯರು, ಉಳಿದ ಕಡೆಗಳಲ್ಲೂ ಕಂದಕ ಪೂರ್ಣಗೊಳಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ನಗರದ ಸಮೀಪವೇ ರಸ್ತೆ ಮೇಲೂ ಅಡ್ಡಾಡಿ ಆತಂಕ ಮೂಡಿಸಿತ್ತು. ಸಂಜೆಯಾದರೆ ಸಾಕು, ಹಳ್ಳಿಗರು ಹಾಗೂ ಕೃಷಿಕರು ಜೀವ ಮುಷ್ಟಿಯಲ್ಲಿ ಇಟ್ಟುಕೊಂಡು ಸಂಚರಿಸಬೇಕಾದ ಸ್ಥಿತಿ ಉಂಟಾಗಿದೆ. ಕಾಡಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಹಾರ ಸಿಗದೇ ಇರುವುದು, ಅರಣ್ಯ ನಾಶ ಇತ್ಯಾದಿ ಕಾರಣಗಳಿಂದ ಕಾಡಾನೆ, ಕಾಡುಕೋಣ ಇತ್ಯಾದಿ ಪ್ರಾಣಿಗಳು ತೋಟಗಳಿಗೆ ದಾಳಿಯಿಡುತ್ತಿವೆ.
ಕೆಲವು ಸಂದರ್ಭಗಳಲ್ಲಿ ಮಾನವನೊಂದಿಗೆ ಸಂಘರ್ಷಕ್ಕೂ ಇಳಿಯುತ್ತವೆ. ರೈತರ ಕೋವಿ ಇತ್ಯಾದಿ ಶಸ್ತ್ರಾಸ್ತ್ರಗಳನ್ನು ಚುನಾವಣೆ ಹಿನ್ನೆಲೆಯಲ್ಲಿ ಠಾಣೆಗಳಲ್ಲಿ ದಾಸ್ತಾನು ಇರಿಸಿದ್ದು, ಬೆಳೆ ರಕ್ಷಣೆ ಕಷ್ಟವಾಗುತ್ತಿದೆ. ಕಾಡಾನೆಗಳ ಹಾವಳಿಯಿಂದ ತಮ್ಮ ಬೆಳೆ, ಪ್ರಾಣ ಹಾಗೂ ಆಸ್ತಿ-ಪಾಸ್ತಿ ಸಂರಕ್ಷಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.