ಕುಷ್ಟಗಿ: ಐತಿಹಾಸಿಕ ಸ್ಮಾರಕವಾಗಿದ್ದ ಕಲ್ಲುಬಾವಿ ಚರಂಡಿ ನೀರು ತುಂಬಿ ಬೃಹತ್ ಚರಂಡಿ ಗುಂಡಿಯಾಗಿ ವಿರೂಪಗೊಂಡಿರುವುದು ಒಂದೆಡೆಯಾದರೆ, ಈ ಕಲ್ಲಬಾವಿಯ ರಕ್ಷಾ ಗೋಡೆ ಕುಸಿದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ವಿಜಯಪುರದ ಸುಲ್ತಾನ್ ಅಲಿ ಆದಿಲ್ ಶಾ ವಿಜಯ ನಗರದ ಮೇಲೆ ದಂಡೆತ್ತಿ ಹೋಗುವಾಗ ಕುದರೆ, ಒಂಟೆ, ಆನೆಗಳ ಬಿಡಾರಕ್ಕಾಗಿ ಈ ಪ್ರದೇಶದಲ್ಲಿ ಕಲಾತ್ಮಕ ಬಾವಿ ನಿರ್ಮಿಸಲಾಗಿದೆ ಎಂಬ ಇತಿಹಾಸವಿದೆ. ಬಾವಿ ಗೋಡೆ ಮೇಲೆ ಉಬ್ಬು ಕಲಾಕೃತಿಗಳು, ಸುರಂಗ ಮಾರ್ಗದ ತೂಬಿನ ವ್ಯವಸ್ಥೆ ಇರುವುದು ಗಮನಾರ್ಹವಾಗಿದೆ. ಈ ತೆರೆದ ಬಾವಿಯಲ್ಲಿ ಚರಂಡಿ ನೀರು ಹೊರತು ಪಡಿಸಿದರೆ ಅಷ್ಟಾಗಿ ನೀರು ಜಮಾಯಿಸುತ್ತಿರಲಿಲ್ಲ. ಕಳೆದ ನವೆಂಬರ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಬಾವಿಯ ಅರ್ಧಕ್ಕೆ ನೀರು ಸಂಗ್ರಹವಾಗಿದೆ. ಈ ನೀರನ್ನು ತೆರವುಗೊಳಿಸುವುದು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ.
ಇದನ್ನೂ ಓದಿ :‘ರಾಮ್ ತೇರಿ ಗಂಗಾ ಮೈಲಿ’ ನಟ ರಾಜೀವ್ ಕಪೂರ್ ಇನ್ನಿಲ್ಲ
ಸದಾ ನೀರು ನಿಂತು ರಕ್ಷಾ ಗೋಡೆ ಕುಸಿದಿದ್ದು, ನಿರಂತರವಾಗಿ ಕೊಳಚೆ ನೀರು ಹಾಗೆಯೇ ಬಿಟ್ಟರೆ ಬಾವಿಯ ಸುತ್ತಲಿನ ಗೋಡೆ ಕುಸಿಯುವ ಆತಂಕ ವ್ಯಕ್ತವಾಗಿದೆ. ಪುನರುಜ್ಜೀವ ಅಗತ್ಯ: ಅಂದಾಜು 200 ಅಡಿ ಉದ್ದ, ಅಗಲದ ಚೌಕಾಕಾರದ ಬೃಹತ್ ಬಾವಿ ಇದಾಗಿದ್ದು, ಈ ಬಾವಿಗೆ ಪಕ್ಕದ ಕೆರೆಯಿಂದ ನೀರು ತುಂಬಿಸುವ ಒಳ ಸುರಂಗ ಮಾರ್ಗದ ವ್ಯವಸ್ಥೆ ಇತ್ತು. ನಂತರದ ವರ್ಷಗಳಲ್ಲಿ ಈ ಎಕೆರೆ ನೀರು ತುಂಬಿಸುವುದು ನಿಲ್ಲಿಸಿದಾಗ ಬಾವಿ ನಿರ್ಲಕ್ಷಕ್ಕೆ ಒಳಗಾಗಿದೆ. ಇತ್ತೀಚಿನ ವರ್ಷಗಳಲ್ಲಿ ತಿಪ್ಪೆ, ಮುಳ್ಳು ಕಂಟಿ ಬೆಳೆದು ಬಾವಿ ಅವಸ್ಥೆಗೀಡಾಗಿತ್ತು. ದಶಕಗಳ ಹಿಂದೆ ಯುವ ಬ್ರಿಗೇಡ್ ನೇತೃತ್ವದಲ್ಲಿ ಬಾವಿಯನ್ನು ಸ್ವತ್ಛಗೊಳಿಸಿ, ಇದರಲ್ಲಿ ಶಟಲ್ ಕಾಕ್ ಆಟಕ್ಕೆ ಬಳಸಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಬಾವಿಯ ಅವಸ್ಥೆಗೆ ಮತ್ತೂಮ್ಮೆ ಪುನರುಜ್ಜೀನವನ ಅಗತ್ಯವಾಗಿದೆ.
ಈ ಭಾಗದಲ್ಲಿ ಸೊಳ್ಳೆಕಾಟ ವಿಪರೀತವಾಗಿದ್ದು, ಗಬ್ಬು ವಾಸನೆ ಅಸಹನೀಯವಾಗಿದೆ. ಕಲ್ಲುಬಾವಿ ನೀರನ್ನು ತೆರವುಗೊಳಿಸಬೇಕಿದ್ದು, ಸದ್ಯಕ್ಕೆ ಅಸಾಧ್ಯದ ಮಾತಾಗಿದೆ. ಚರಂಡಿ ನೀರು ಹರಿಸದಂತೆ ಕ್ರಮ ಕೈಗೊಳ್ಳುವುದು, ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಿಮಿನಾಶಕ ಸಿಂಪಡಿಸುವುದು ಅಗತ್ಯವಾಗಿದೆ.