ಕನಸಿಗೆ ಬಂದ ಹನುಮ- ಇಂಥ ಸ್ಥಳದಲ್ಲೇ ನನ್ನ ವಿಗ್ರಹ ಪ್ರತಿಷ್ಠಾಪಿಸು ಎಂದು ಹೇಳಿದಂತೆ ಭಾಸವಾಯಿತಂತೆ. ಆ ದೇವಾಜ್ಞೆಯನ್ನು ಪಾಲಿಸಲೆಂದೇ ಸಮರ್ಥ ರಾಮದಾಸರು ಈ ದೇವಾಲಯ ನಿರ್ಮಾಣಕ್ಕೆ ಮುಂದಾದರಂತೆ…
ಬೆಳಗಾವಿ ಜಿಲ್ಲೆಯ ಗೋಕಾಕ ನಗರದಿಂದ 12 ಕಿ.ಮೀ ದೂರದಲ್ಲಿರುವ ಕಲ್ಲೋಳಿ ಪಟ್ಟಣಕ್ಕೆ ದೊಡ್ಡ ಇತಿಹಾಸವಿದೆ. ಇಲ್ಲಿರುವ ರಾಮಲಿಂಗೇಶ್ವರ, ಜೈನ ಬಸದಿಯಿಂದ ಕೂಡಿದ ಸುಕ್ಷೇತ್ರವಾಗಿದೆ. ಇದರ ಜೊತೆಗೆ, ಭಕ್ತರನ್ನು ಸಲಹುವ ಜಾಗೃತ ಹನುಮಂತ ದೇವರ ದೇವಾಲಯವೂ ಇಲ್ಲಿದೆ.
ಸಮರ್ಥ ರಾಮದಾಸರ ಕಾಲದಲ್ಲಿ ಕಲ್ಲೋಳಿಯಲ್ಲಿ ಈ ಹನುಮಪ್ಪನ ಗುಡಿ ನಿರ್ಮಾಣಗೊಂಡಿತಂತೆ. ರಾಮದಾಸರು ಮೂಲತಃ ಮಹಾರಾಷ್ಟ್ರದಿಂದ ಬಂದವರಾಗಿದ್ದರಿಂದ, ಈಗಲೂ ಸಹ ಈ ದೇವಾಲಯಕ್ಕೆ ಪುಣೆ, ಕರಾಡ ಸೇರಿದಂತೆ ಮಹಾರಾಷ್ಟ್ರದ ಹಲವು ಜಿಲ್ಲೆಗಳಿಂದ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಈ ದೇಗುಲದಲ್ಲಿ ಹನುಮಂತ ದೇವರ ಆಳೆತ್ತರದ ಭವ್ಯ ಮೂರ್ತಿ ಆಕರ್ಷಣಿಯವಾಗಿದೆ. ಉತ್ತರ ಭಾರತ ಶೈಲಿಯ ಕಲೆಯಲ್ಲಿ ಕಂಗೊಳಿಸುತ್ತಿದೆ, ಈ ಮಾರುತಿ. ಇದು ಮಹಾರಾಷ್ಟ್ರ, ಕರ್ನಾಟಕ, ಗೋವಾ ರಾಜ್ಯಗಳ ಅನೇಕ ಭಕ್ತರ ಮನೆ ದೇವರಾಗಿದೆ.
ಅದೊಮ್ಮೆ, ರಾಮದಾಸರ ಕನಸಲ್ಲಿ ಬಂದ ಮಾರುತಿ, ನನ್ನವಿಗ್ರಹವನ್ನು ಇಂಥ ಜಾಗದಲ್ಲೇ ಪ್ರತಿಷ್ಠಾಪಿಸಬೇಕು ಎಂದು ಸೂಚಿಸಿದರಂತೆ. ಈ ಹಿನ್ನೆಲೆಯಲ್ಲಿ ಕಲ್ಲೊಳ್ಳಿಯಲ್ಲಿ ಹನುಮಂತನ ದೇವಾಲಯ ನಿರ್ಮಾಣವಾಯಿತು ಎನ್ನುತ್ತದೆ ಇತಿಹಾಸ.
ರಾಮದಾಸರು, ಗರ್ಭ ಗುಡಿಯ ಬಲಭಾಗದಲ್ಲಿ ಉಗ್ರ ಸ್ವರೂಪಿಣಿ ಲಕ್ಷಿ$¾à ದೇವಿ(ಚೌಡೇಶ್ವರಿ), ಎಡಭಾಗದಲ್ಲಿ ವಿಘ್ನನಿವಾರಕ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಜಾಗೃತ ಹನುಮಪ್ಪನ ಗರ್ಭಗುಡಿಯ ಎದುರು ಚತುರ್ಗಜಗಳ ಭವ್ಯ ಹಾಗೂ ಎತ್ತರವಾದ ದೀಪಸ್ತಂಭ ಮನಮೋಹಕವಾಗಿದೆ. ಮಾರುತಿ ದೇವಲದ ತೀರ್ಥಜಲ ಅತ್ಯಂತ ಪವಿತ್ರವಾಗಿದೆ ಎಂದು ನಂಬಲಾಗಿದೆ. ಋಷಿ ಮುನಿಗಳು ಮಂತ್ರ ಸಿದ್ಧಿ ಮಾಡಿ ಸ್ಥಾಪಿಸಲ್ಟಪ್ಪ ನಾಲ್ಕು ಅಡಿ ಎತ್ತರದ ಲಿಂಗವಿದೆ. ಲಿಂಗದ ತೀರ್ಥಜಲವನ್ನು ಇಂದಿಗೂ ಸಹ ಹಾವು, ಚೇಳು, ನಾಯಿ ಕಚ್ಚಿದರೆ ನಂಜು ನಿವಾರಕ ತೀರ್ಥವಾಗಿ (ಪ್ರತಿ ಗುರುವಾರ, ಭಾನುವಾರ)ವಿತರಿಸುತ್ತಾರೆ.
ಗುಡಿಗೆ ಬೃಹತ್ ಗ್ರಾತ್ರದ ದ್ವಾರವಿದ್ದು, ಅದರೊಳಗೆ ಚಿಕ್ಕ ದಿಡ್ಡಿ ಬಾಗಿಲಿದೆ. ಅದರ ಮುಂದೆ ಬೊರ್‌ಗಲ್ ಇದೆ. ದಿಡ್ಡಿ ಬಾಗಿಲಿನಿಂದ ಒಳಗೆ ಪ್ರವೇಶಿಸಿ, ಬೊರ್‌ಗಲ್‌ಗೆ ಬೆನ್ನುತಾಗಿದರೆ ಬೆನ್ನು, ಸೊಂಟ ನೋವು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಅಲ್ಲದೇ, ಹನುಮಪ್ಪ ದೇವರ ಬೃಹತ್ ಪಾದುಕೆಗಳಿವೆ. ಅವುಗಳನ್ನು ತಲೆ, ಬೆನ್ನಿನ ಮೇಲೆ ಇಟ್ಟುಕೊಂಡು ಆಶೀರ್ವಾದ ಪಡೆದರೆ ಹಲವು ರೋಗ ನಿವಾರಣೆ ಯಾಗುತ್ತದೆ ಎಂಬ ನಂಬಿಕೆಯೂ ಈ ಭಾಗದ ಭಕ್ತ ಜನರಲ್ಲಿದೆ.
ಸಂಭ್ರಮದ ಕಾರ್ತಿಕೋತ್ಸವ
ಕಲ್ಲೋಳಿ ಹನುಮಪ್ಪನ ಕಾರ್ತಿಕೋತ್ಸವ, ಪಲ್ಲಕ್ಕಿ ಉತ್ಸವ, ಜಾತ್ರಾ ಮಹೋತ್ಸವು ಈಗಾಗಲೇ ಶುರುವಾಗಿದ್ದು, ಡಿ.29ರವರೆಗೆ ನಡೆಯಲಿದೆ. ಬೆಳಗಾವಿ ಜಿಲ್ಲೆಯ ವಿವಿಧ ಪಟ್ಟಣ ಹಾಗೂ ಸುತ್ತಲಿನ ಹಳ್ಳಿಗಳ ಅಸಂಖ್ಯಾತ ಭಕ್ತರು ಸೂರ್ಯ ಉದಯಕ್ಕೂ ಮುನ್ನ, ಪಾದ ಯಾತ್ರೆ ಮೂಲಕ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಜಂಗಿ ಕುಸ್ತಿ ನಡೆಯಲಿದೆ.
ಅಡಿವೇಶ ಮುಧೋಳ