ಕಾರವಾರ: ಪ್ರಸಕ್ತವರ್ಷ ಉತ್ತರ ಕನ್ನಡದ ಜೀವನದಿಗಳಾದ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ, ಶರಾಬಿ ನದಿಗಳು ಮೈದುಂಬಿ ಹರಿದವು. ಸಮುದ್ರವನ್ನು ಸಮೃದ್ಧಗೊಳಿಸಿ ನಲಿದವು.
ಕಳೆದ ಏಪ್ರಿಲ್ -ಮೇ ತಿಂಗಳಲ್ಲಿ ನದಿ ದಂಡೆ ಗ್ರಾಮಗಳು, ಸಮುದ್ರ ದಂಡೆ ಊರುಗಳು ಕುಡಿಯುವ ನೀರಿಗಾಗಿ ಪರಿತಪಿಸಿದ್ದವು. ಗಂಗಾವಳಿ ಅಕ್ಷರಶಃ ಬತ್ತಿದ್ದಳು. ಒಂದು ರೀತಿ ಆತಂಕ ಆವರಿಸಿತ್ತು. ಉತ್ತರ ಕನ್ನಡದಲ್ಲೂ ಹೀಗಾ ಎಂದು ರಾಜ್ಯದ ಜನ ಅಚ್ಚರಿ ಪಟ್ಟಿದ್ದರು. ಈ ವರ್ಷದ ಮಳೆ ಎಲ್ಲಾ ಆತಂಕವನ್ನು ಕೊಂಚ ದೂರ ಮಾಡಿ ಹೊಸ ಆಶಾವಾದ ಹುಟ್ಟಿಸಿದೆ.
ಕಾಳಿ ನದಿಗೆ 1980ರ ದಶಕದಲ್ಲಿ ಸೂಪಾ ಎಂಬ ಗ್ರಾಮದ ಬಳಿ ಎರಡು ಗುಡ್ಡಗಳ ನಡುವೆ ನದಿ ಹರಿಯುವ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ನಿರ್ಧರಿಸಲಾಯಿತು. ವಿದ್ಯುತ್ ಉತ್ಪಾದನೆ ಗುರಿಯೊಂದಿಗೆ ಈ ಯೋಜನೆ ರೂಪಿಸಲಾಯಿತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅಣೆಕಟ್ಟಿಗೆ ಅಡಿಗಲ್ಲು ಹಾಕಿದ್ದ ಸೂಪಾ ಅಣೆಕಟ್ಟು ಹಿಮಾಚಲ ಪ್ರದೇಶದ ಬಾಕ್ರಾ ನಂಗಲ್ ತರಹ ಗಮನ ಸೆಳೆದಿತ್ತು. 1987ರಲ್ಲಿ ಪೂರ್ಣವಾಗಿ, ಅದೇ ವರ್ಷ ಸುರಿದ ಭಾರೀ ಮಳೆಗೆ ಭರ್ತಿಯಾಗಿದ್ದ ಸೂಪಾ, ದೇಶದ ಅತೀ ಎತ್ತರದ ಅಣೆಕಟ್ಟು ಎಂಬ ಕೀರ್ತಿಗೆ ಕಾರಣವಾಗಿತ್ತು. ಸೂಪಾ ಜಲಾಶಯ 145 ಟಿಎಂಸಿ ಅಡಿ ನೀರನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿತ್ತು. ವಿದ್ಯುತ್ ಉತ್ಪಾದಿಸಿದ ನೀರನ್ನು ಕಾಳಿಗೆ ಬಿಡಲಾಗುತ್ತಿತ್ತು. ಹೀಗಿದ್ದ ಸೂಪಾ ಜಲಾಶಯ ಮತ್ತೆ ಭರ್ತಿಯಾದದ್ದು 2006ರಲ್ಲಿ. 564.09 ಮೀಟರ್ ಎತ್ತರ ಇರುವ ಈ ಅಣೆಕಟ್ಟು 2007ರಲ್ಲಿ 561.40 ಮೀಟರ್ ವರೆಗೆ ಭರ್ತಿಯಾಗಿತ್ತು. ನಂತರ ಅದು ದಾಖಲೆ ಪ್ರಮಾಣದಲ್ಲಿ ಭರ್ತಿಯಾದದ್ದು 2019ರಲ್ಲಿ. ಸೆಪ್ಟಂಬರ್‌ನಲ್ಲಿ. ಅಣೆಕಟ್ಟು ಪೂರ್ಣ ತುಂಬದಂತೆ ಹೆಚ್ಚು ಕಡಿಮೆ 15 ದಿನ ಜಲಾಶಯದ ಕ್ರಸ್ಟ್‌ಗೇಟ್ನಿಂದ 5000 ಕ್ಯೂಸೆಕ್ಸ್ ನೀರನ್ನು ಹೊರಬಿಡುತ್ತಲೇ ಇರುವಷ್ಟು ಮಳೆ ಸುರಿಯಿತು. ಆಗಸ್ಟ್ ಮೊದಲ ವಾರದಿಂದ ಆರಂಭಗೊಂಡ ವರ್ಷಧಾರೆ ಸೆ.8ರ ಹೊತ್ತಿಗೆ ಕ್ರಸ್ಟ್ ಗೇಟ್‌ಗಳಿಂದ 55000 ಕ್ಯೂಸೆಕ್ ನೀರು ಹೊರಬಿಟ್ಟು ದಾಖಲೆ ಬರೆಯಲಾಯಿತು. 19 ಟಿಎಂಸಿ ಅಡಿ ನೀರು ಸೂಪಾದಿಂದ ಕಾಳಿ ನದಿ ಮೂಲಕ ಅರಬ್ಬೀ ಸಮುದ್ರ ಸೇರಿತ್ತು. ಇದಕ್ಕೂ ಮುನ್ನ ಇದೇ ಜಲಾಶಯದಿಂದ ಆಗಸ್ಟ್ 1994 ರಲ್ಲಿ 35 ರಿಂದ 40 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿತ್ತು.
ಇದೇ ಸೆ.11 ರಂದು 21,388 ಕ್ಯೂಸೆಕ್ ನೀರು ಒಳಗೆ ಹರಿದು ಬರುತ್ತಿದ್ದರೆ, ಅಷ್ಟೇ ಪ್ರಮಾಣದ ನೀರು ಹೊರ ಹೋಗುತ್ತಿತ್ತು. ಸೂಪಾ ಜಲಾಶಯದಲ್ಲಿ ನೀರಿನ ಸಂಗ್ರಹದಲ್ಲಿ ಒಂದು ಸ್ಥಿರತೆ ಕಾಪಾಡಿಕೊಳ್ಳಲು ಮೂರ್‍ನಾಲ್ಕು ದಿನ ಕಣ್ಣಲ್ಲಿ ಕಣ್ಣಿಟ್ಟು ಸಿವಿಲ್ ಎಂಜಿನಿಯರ್‌ಗಳು ಕಾಯಬೇಕಾಯಿತು. ಅಷ್ಟು ಪ್ರಮಾಣದಲ್ಲಿ ಮಳೆ ಸುರಿಯುತ್ತಿತ್ತು.
Advertisement
ನದಿ ದಂಡೆ ಗ್ರಾಮಗಳ ಜನರನ್ನು ಒಂದಿಷ್ಟು ಆತಂಕಕ್ಕೆ ತಳ್ಳಿದ್ದರೂ, ನೀರಡಿಕೆಯಿಂದ ಬಳಲಿದ್ದ ಪಶ್ಚಿಮ ಘಟ್ಟದ ಸಹ್ಯಾದ್ರಿ ಮಡಿಲನ್ನು ತಣಿಸಿ, ಮತ್ತಷ್ಟು ಸಮೃದ್ಧಗೊಳಿಸಿದವು. ಎರಡು ದಶಕಗಳ ಹಿಂದಿನ ಮಳೆಯ ವೈಭವ ಮರುಕಳಿಸಿದ್ದೆ 2019ರಲ್ಲಿ.
Related Articles
Advertisement
ಸೂಪಾ ಸೇರಿದಂತೆ ಕಾಳಿ ನದಿಯ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ನೀರಿನ ಸಂಗ್ರಹದ ಸ್ಥಿರತೆ ಕಾಪಾಡಿಕೊಳ್ಳಲಾಗಿದೆ. ನದಿ ದಂಡೆ ಜನರಿಗೆ ಕಾಲಕಾಲಕ್ಕೆ ಎಚ್ಚರಿಕೆ ನೀಡಿ, ನೀರನ್ನು ಜಲಾಶಯದಿಂದ ನದಿಗೆ ಹರಿಸಲಾಗಿದೆ. ಮಳೆ ಸತತ ಬೀಳುತ್ತಲೇ ಇತ್ತು. ಹಾಗಾಗಿ ಜಿಲ್ಲಾಡಳಿತದ ಮಾರ್ಗದರ್ಶನ ಪಡೆದು ನೀರನ್ನು ಹೊರ ಬಿಡಲಾಗಿತ್ತು. ಜಲಾಶಯಗಳು ಸುರಕ್ಷಿತವಾಗಿವೆ.ನಿಂಗಣ್ಣ. ಮುಖ್ಯ ಎಂಜಿನಿಯರ್. (ಕಾಳಿ ಕೊಳ್ಳದ ಜಲಾಶಯಗಳು) ಕೆಪಿಸಿ
ಕಾಳಿ ನದಿಗೆ 5 ಅಣೆಕಟ್ಟು ನಿರ್ಮಿಸಲಾಗಿದೆ. ಸೂಪಾ, ತಟ್ಟಿಹಳ್ಳ, ಬೊಮ್ಮನಹಳ್ಳಿ, ಕೊಡಸಳ್ಳಿ, ಕದ್ರಾ ಎಂಬಲ್ಲಿ. ವಿದ್ಯುತ್ ಉತ್ಪಾದನೆ ನಾಲ್ಕು ಕಡೆಯಿಂದ ಆಗುತ್ತಿದೆ. 1270 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ರಾಜ್ಯಕ್ಕೆ ನೀಡುತ್ತಿದೆ. ಕೆಪಿಸಿ ಸೂಪಾ ಎರಡು ಘಟಕದಿಂದ 100 ಮೆಗಾವ್ಯಾಟ್, ನಾಗಝರಿ 6 ಘಟಕಗಳಿಂದ 900 ಮೆಗಾವ್ಯಾಟ್, ಕೊಡಸಳ್ಳಿ 3 ಯುನಿಟ್ ಗಳಿಂದ 120 ಮೆಗಾವ್ಯಾಟ್, ಕದ್ರಾದ 3 ಯುನಿಟ್‌ಗಳಿಂದ 150 ಮೆಗಾವ್ಯಾಟ್ ವಿದ್ಯುತ್ ರಾಜ್ಯ ಗ್ರಿಡ್ ಸೇರುತ್ತಿದೆ. 33 ವರ್ಷಗಳ ತನ್ನ ಇತಿಹಾಸದಲ್ಲಿ ಸೂಪಾ ಹೆಚ್ಚು ಸುದ್ದಿಯಾದದ್ದು 2019ರಲ್ಲಿ. ಕದ್ರಾದಿಂದ 80 ಸಾವಿರ ಕ್ಯೂಸೆಕ್ ನೀರನ್ನು ಆ.5 ರಂದು ಹೊರ ಬಿಟ್ಟಾಗ ನದಿ ದಂಡೆ ಜನರಿಗೆ ತೊಂದರೆಯಾದದ್ದು ನಿಜ. ಅದು ಅಂದಿನ ಮಳೆ ಹಾಗೂ ಜಲಾಶಯದಲ್ಲಿನ ನೀರಿನ ಪ್ರಮಾಣ ಕಾರಣವಾಗಿ ಅನಿವಾರ್ಯವಾಗಿತ್ತು. ಏನೆಲ್ಲಾ ಕಷ್ಟಗಳನ್ನು ಜಿಲ್ಲಾಡಳಿತದ ನೆರವಿನ ಮೂಲಕ ಕೆಪಿಸಿ ನಿಭಾಯಿಸಿತು. ನೋವಿನ ಮಧ್ಯೆಯೂ ರಾಜ್ಯಕ್ಕೆ ಬೆಳಕು ನೀಡಿತು.
•ನಾಗರಾಜ ಹರಪನಹಳ್ಳಿ