Advertisement
ಈ ಪ್ರದೇಶದಲ್ಲಿ ಸುಮಾರು 50 ಮನೆಗಳಿದ್ದು, ಹಿಂದೆ ಇವರು ಕಾಮಿನಿ ಹೊಳೆಗೆ ಅಡ್ಡಲಾಗಿ ನಿರ್ಮಿಸಿದ ಕಲ್ಲಿನ ಕಾಲುಸಂಕ ಮೂಲಕ ಹಾದು ಗದ್ದೆ ಬದುವಿನ ದಾರಿಯಲ್ಲಿ ಸಂಚರಿಸುವುದು ಅನಿವಾರ್ಯವಾಗಿತ್ತು. ಇದೀಗ 750 ಮೀ. ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಸ್ಥಳೀಯರು ತಮ್ಮದೇ ಖಾಸಗಿ ಜಾಗವನ್ನು ನೀಡಿದ್ದಾರೆ. ಜಿ. ಪಂ. ಹಾಗೂ ಗ್ರಾ. ಪಂ. ಅನುದಾನ ಬಳಸಿ ಮಣ್ಣು ತುಂಬಿಸಿ ಸೇತುವೆ ಇಕ್ಕೆಲಗಳಲ್ಲಿ ಈಗಾಗಲೇ ಕಚ್ಚಾ ರಸ್ತೆ ನಿರ್ಮಾಣ ಮಾಡಲಾಗಿದೆ.
ಕೃಷಿಯೇ ಜೀವನಾಧಾರವಾಗಿದ್ದ ಈ ಪ್ರದೇಶದ ಜನರ ಅನುಕೂಲಕ್ಕಾಗಿ ಕಾಲು ಸಂಕದ ಬಳಿಕ 15 ವರ್ಷಗಳ ಹಿಂದೆ ಉಪ್ಪು ನೀರಿನ ತಡೆ ಅಣೆಕಟ್ಟು ನಿರ್ಮಾಣವಾಗಿತ್ತು. ಅದೂ ಶಿಥಿಲಗೊಂಡಿದ್ದು, ತಡೆ ಬೇಲಿ ಕಿತ್ತು ಹೋಗಿದೆ. ಕಚ್ಚಾ ರಸ್ತೆ ನಿರ್ಮಾಣವಾಗಿರುವುದರಿಂದ ಶಿಥಿಲಾವಸ್ಥೆಯಲ್ಲಿರುವ ಕಿಂಡಿ ಅಣೆಕಟ್ಟು ಮೇಲಿಂದ ದ್ವಿಚಕ್ರ ವಾಹನಗಳಲ್ಲಿ ಜನರು ಸಂಚರಿಸುತ್ತಿದ್ದಾರೆ. ಪ್ರವಾಸೋದ್ಯಮ, ಪರಿಸರದ ದೈವ-ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸಲು ಅನುಕೂಲವಾಗಿರುವ ಈ ರಸ್ತೆ ಶೀಘ್ರ ನಿರ್ಮಾಣವಾಗಬೇಕು ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ. ಅಂದಾಜು ಪಟ್ಟಿ ತಯಾರಿಸಲಿದ್ದಾರೆ
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶೀಘ್ರ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಅಂದಾಜು ಪಟ್ಟಿ ತಯಾರಿಸಲಿದ್ದಾರೆ. ಮಳೆ ನೀರಿನ ಸರಾಗ ಹರಿಯುವಿಕೆಗಾಗಿ ತೂಬು ನಿರ್ಮಾಣ ಹಾಗೂ ಕಡಲತೀರ ಸಂದಿಸುವ ಭಾಗದಲ್ಲಿ ಪಿಚ್ಚಿಂಗ್ ಮಾಡಲಾಗುವುದು.
-ಶಶಿಕಾಂತ್ ಜಿ. ಪಂ. ಸದಸ್ಯ ಪಡುಬಿದ್ರಿ