ಪುತ್ತೂರು: ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಶನಿವಾರ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಿತು. ಆರು ದಿನಗಳಿಂದ ನಡೆಯುತ್ತಿರುವ ಮಾಣಿಕ್ಯೋತ್ಸವದ ವಿವಿಧ ಕಾರ್ಯಕ್ರಮ ಶನಿವಾರ ಬ್ರಹ್ಮಕಲಶೋತ್ಸವದೊಂದಿಗೆ ಸಮಾಪನಗೊಂಡಿತು. ಏಳು ದಿನಗಳು ಚಿತ್ರಾಪುರ ವೇ|ಮೂ| ಗೋಪಾಲ ಕೃಷ್ಣಾಚಾರ್ಯರ ನೇತೃತ್ವದಲ್ಲಿ, ಶ್ರೀ ಮಠದ ಪ್ರಧಾನ ಅರ್ಚಕ ರಾಘವೇಂದ್ರ ಉಡುಪರ ಆಚಾರ್ಯತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು.
ಶನಿವಾರ ಬೆಳಗ್ಗೆ 6 ಗಂಟೆಗೆ ನಿರ್ಮಾಲ್ಯ ವಿಸರ್ಜನ ಪೂಜೆ, 7ರಿಂದ ಪಂಚಗವ್ಯ ಪುಣ್ಯಾಹ ಪುರಸ್ಸರ ಪವಮಾನ ಹೋಮ, ಶತಕಲಶಾ ವಾದ ಪ್ರಧಾನ ಹೋಮ ನಡೆದು 10 ಗಂಟೆಗೆ ಪಂಚಾಮೃತಾಭಿಷೇಕ, ಅಷ್ಟಬಂಧ ಕಲಶಾಭಿಷೇಕ, ಪ್ರಸನ್ನ ಪೂಜೆ ಜರಗಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ನಡೆದ ಮಹಾ ಅನ್ನಸಂತರ್ಪಣೆ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡರು. ಶ್ರದ್ಧಾ ಪೈವಳಿಕೆ ಅವರಿಂದ ಹರಿಕಥಾ ಕಾಲಕ್ಷೇಪ ಪ್ರದರ್ಶನಗೊಂಡಿತು.
ರಾತ್ರಿ 8.30ಕ್ಕೆ ರಂಗಪೂಜೆ, ಮಹಾಪೂಜೆ, ರಥೋತ್ಸವ, ಪಲ್ಲಕ್ಕಿ ಉತ್ಸವಾದಿಗಳು, ಪ್ರಸಾದ ವಿತರಣೆ ನಡೆದು ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ 6ರಿಂದ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಮಂತ್ರಾಲಯದ ಶ್ರೀ ಸುಬುಧೇಂದ್ರ ಶ್ರೀಪಾದರು ಆಶೀರ್ವಚನ ನೀಡಿದರು. 7ರಿಂದ ಪಂಡಿತ್ ಭೀಮ ಸೇನ ಜೋಷಿಯವರ ಶಿಷ್ಯ ಉಪೇಂದ್ರ ಭಟ್ ಪುಣೆ ರಿಂದ ಭಜನ ಸಂಧ್ಯಾ ನಡೆಯಿತು.
40 ಸಾವಿರಕ್ಕೂ ಅಧಿಕ ಮಂದಿ
7 ದಿನಗಳ ಅನ್ನಸಂತರ್ಪಣೆ, ಉಪಾಹಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ದಾನಿಗಳ ಪ್ರಾಯೋಜಕತ್ವದಲ್ಲಿ ಜರಗಿದವು. ಅನ್ನಸಂತರ್ಪಣೆಯಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡರು.