Advertisement

ಕಲ್ಲಂತಡ್ಕ: ಸರಕಾರಿ ಜಾಗ ಅತಿಕ್ರಮಿಸಿ ಮನೆ ನಿರ್ಮಾಣ

11:40 PM Jul 16, 2019 | mahesh |

ಕಡಬ: ಕೋಡಿಂಬಾಳ ಗ್ರಾಮದ ಕಲ್ಲಂತಡ್ಕದಲ್ಲಿ ಸಾರ್ವಜನಿಕ ಸ್ಮಶಾನದ ಸಮೀಪ ಸರಕಾರಿ ಜಾಗವನ್ನು ಅತಿಕ್ರಮಿಸಿ ಆಕ್ರಮವಾಗಿ ಮನೆಗಳನ್ನು ನಿರ್ಮಿಸತ್ತಿರುವ ಪ್ರಕರಣದ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸುಳ್ಳು ಮಾಹಿತಿ ನೀಡಿ ಪಡೆದ ಜಾಗದ ಹಕ್ಕುಪತ್ರ ರದ್ದುಪಡಿಸಿ ಅಕ್ರಮ ಮನೆಗಳನ್ನು ತೆರವುಗೊಳಿಸಲು ಮುಂದಾಗಿದೆ.

Advertisement

ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿರುವವರಿಗೆ ನೋಟಿಸ್‌ ನೀಡಿರುವ ಕಂದಾಯ ಇಲಾಖೆ ಅಕ್ರಮ ರಚನೆಗಳನ್ನು ತೆರವುಗೊಳಿಸಲು ಸೂಚಿಸಿದೆ. ಮಾತ್ರವಲ್ಲದೇ ಕಂದಾಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ 94ಸಿ ಅಡಿ ಪಡೆದಿರುವ ಹಕ್ಕುಪತ್ರವನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ
ಕೋಡಿಂಬಾಳ ಗ್ರಾಮದ ಕಲ್ಲಂತಡ್ಕ ಪ್ರದೇಶದಲ್ಲಿ ಸಾರ್ವಜನಿಕ ಸ್ಮಶಾನದ ಬಳಿ ಇರುವ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸುತ್ತಿರುವ ಬಗ್ಗೆ ಕಳೆದ ತಿಂಗಳು ಸಾರ್ವಜನಿಕರು ಕಂದಾಯ ಇಲಾಖೆ ಹಾಗೂ ಕಡಬ ಗ್ರಾ.ಪಂ.ಗೆ ದೂರು ನೀಡಿದ್ದರು. ದೂರಿಗೆ ಸ್ಪಂದಿಸಿದ ಗ್ರಾ.ಪಂ. ಪಿಡಿಒ ಸ್ಥಳಕ್ಕೆ ಭೇಟಿ ನೀಡಿ, ನಿರ್ಮಾಣ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಅತಿಕ್ರಮಣಕಾರರಿಗೆ ಆದೇಶಿಸಿದ್ದರು. ಬಳಿಕ ಎಚ್ಚೆತ್ತುಕೊಂಡ ಕಂದಾಯ ಇಲಾಖೆ, ಅಕ್ರಮವಾಗಿ ಮನೆ ನಿರ್ಮಿಸುತ್ತಿರುವವರನ್ನು ಪತ್ತೆ ಹಚ್ಚಿ ಅಕ್ರಮ ನಿರ್ಮಾಣವನ್ನು ತೆರವುಗೊಳಿಸುವಂತೆ ನೋಟಿಸ್‌ ಜಾರಿಗೊಳಿಸಿತ್ತು. ಆದರೆ ಆತಿಕ್ರಮಣ ಮಾಡಿದ್ದಾರೆ ಎನ್ನಲಾದ 7 ಮಂದಿಯ ಪೈಕಿ ಮೂವರು ತಮಗೆ 94ಸಿ ಅಡಿ ಹಕ್ಕುಪತ್ರ ಸಿಕ್ಕಿದೆ ಎಂದು ಉತ್ತರಿಸಿದ್ದರು. ಅವರ ಹಕ್ಕುಪತ್ರಗಳನ್ನು ಪರಿಶೀಲಿಸಿದಾಗ ಅವರು ಬೇರೆ ಜಾಗದ ಮನೆಯ ಚಿತ್ರ ಸಹಿತ ಸುಳ್ಳು ದಾಖಲೆಗಳು ಹಾಗೂ ಮಾಹಿತಿ ನೀಡಿ 94ಸಿ ಅಡಿ ಹಕ್ಕು ಪತ್ರ ಪಡೆದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳು ಆ ಹಕ್ಕು ಪತ್ರ ರದ್ದು ಮಾಡಿ, ನಿರ್ಮಾಣ ಹಂತದಲ್ಲಿರುವ ಅಕ್ರಮ ಮನೆಗಳನ್ನು ತೆರವುಗೊಳಿಸಿ ಸರಕಾರಿ ಜಾಗವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ತಯಾರಿ ನಡೆಸುತ್ತಿದ್ದಾರೆ.

ಗೊಂದಲ ನಿವಾರಣೆಗೆ ಆಗ್ರಹ
ಕೋಡಿಂಬಾಳದ ಕಲ್ಲಂತಡ್ಕ ದಲ್ಲಿರುವ ಸ್ಮಶಾನದ ಸಮೀಪ ಅತಿಕ್ರಮಣಗೊಂಡಿರುವ ಸರಕಾರಿ ಭೂಮಿ ಗೋಮಾಳಕ್ಕೆ ಕಾದಿರಿಸಿದ್ದು ಎಂದು ಸಾರ್ವಜನಿಕರು ವಾದಿಸುತ್ತಿದ್ದರೆ, ಕಡಬ ಸರ್ವೆ ಇಲಾಖೆಯಲ್ಲಿ ಗೋಮಾಳ ಜಮೀನಿನ ಬಗ್ಗೆ ಸ್ವಷ್ಟ ಮಾಹಿತಿ ಲಭ್ಯವಾಗುತ್ತಿಲ್ಲ. ಕಡಬ ಗ್ರಾಮ ಕರಣಿಕರ ಕಚೇರಿಯಲ್ಲಿ ವಿಚಾರಿಸಿದರೆ, ಅಲ್ಲಿ ಗೋಮಾಳ ಜಮೀನು ಇರುವ ಮಾಹಿತಿ ಸಿಕ್ಕಿದೆ. ಕಂದಾಯ ಇಲಾಖೆಯ ಮಾಹಿತಿಯಂತೆ ಕಲ್ಲಂತಡ್ಕದ ಸರಕಾರಿ ಜಾಗದಲ್ಲಿ ಹಲವು ವರ್ಷಗಳ ಹಿಂದೆಯೇ ಮನೆ ನಿವೇಶನಗಳನ್ನು ಮಾಡಿ ಹಂಚಿಕೆ ಮಾಡಲಾಗಿದೆ.

ಆದರೆ ನಿವೇಶನ ಪಡೆದುಕೊಂಡ ಕೆಲವರು ಆ ಜಾಗದಲ್ಲಿ ಸರಕಾರದ ಶರತ್ತಿನಂತೆ ಮನೆ ನಿರ್ಮಿಸದೆ ಇದ್ದ ಹಿನ್ನೆಲೆಯಲ್ಲಿ ಹಂಚಲಾಗಿದ್ದ ನಿವೇಶನ ಗಳನ್ನು ರದ್ದುಪಡಿಸಿ ಜಮೀನನ್ನು ಪುನಃ ಸರಕಾರದ ಸ್ವಾಧೀನಕ್ಕೆ ತೆರೆದುಕೊಳ್ಳಲಾಗಿದೆ. ಆದರೆ ಇದೀಗ ಜಮೀನು ಅತಿಕ್ರಮಣ ಮಾಡಿ ಮನೆ ನಿರ್ಮಿಸಲು ಆರಂಭಿಸಿದವರು ಈ ಹಿಂದೆ ನಿವೇಶನದ ಹಕ್ಕು ಪಡೆದುಕೊಂಡವರು ಅಲ್ಲ ಎನ್ನುವ ಮಾಹಿತಿ ಕಂದಾಯ ಇಲಾಖೆಯ ಮೂಲಗಳಿಂದ ಲಭಿಸಿದೆ. ಒಟ್ಟಿನಲ್ಲಿ ಕಡಬ ಪಂಜ ರಸ್ತೆಯ ಬದಿಯಲ್ಲಿ ಕಡಬ ಪೇಟೆಗೆ ಹತ್ತಿರವಾಗಿ ಇರುವ ಅಮೂಲ್ಯ ಸರಕಾರಿ ಜಾಗವನ್ನು ರಕ್ಷಣೆ ಮಾಡಬೇಕಾದ ಕಂದಾಯ ಇಲಾಖೆಯವರೇ ಸರಿಯಾಗಿ ಸ್ಥಳ ಪರಿಶೀಲನೆ ನಡೆಸದೆ ಅಕ್ರಮವಾಗಿ ಹಕ್ಕುಪತ್ರ ನೀಡುತ್ತಿರುವುದು ಮಾತ್ರವಲ್ಲದೆ ಅಕ್ರಮ ಕಟ್ಟಡಗಳ ತೆರವಿಗೆ ಮೀನ ಮೇಷ ಎಣಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಗಡಿಗುರುತು ಮಾಡಿ
ಕಲ್ಲಂತಡ್ಕದ ಸರಕಾರಿ ಜಾಗವನ್ನು ಸರ್ವೆ ನಡೆಸಿ, ಸ್ಮಶಾನದ ಜಾಗ, ಸರಕಾರಿ, ಗೋಮಾಳ ಜಾಗ ಯಾವುದೆಂದು ಗಡಿ ಗುರುತು ಮಾಡಿ ಎಂದು ಸಾರ್ವಜನಿಕರು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿದ್ದಾರೆ.

ಕ್ರಮ ಕೈಗೊಳ್ಳಲು ಸೂಚನೆ

ಕಲ್ಲಂತಡ್ಕದ ಸರಕಾರಿ ಜಾಗದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಿರುವ ಬಗ್ಗೆ ದೂರುಗಳು ಬಂದಿವೆ. ಅಕ್ರಮ ಕಟ್ಟಡಗಳ ತೆರವಿಗೆ ಮತ್ತು ಅಲ್ಲಿ ಸುಳ್ಳು ಮಾಹಿತಿ ನೀಡಿ ಹಕ್ಕು ಪತ್ರ ಪಡೆದಿದ್ದರೆ ತನಿಖೆ ನಡೆಸಿ ಅಂತಹ ಹಕ್ಕುಪತ್ರ ರದ್ದತಿಗೆ ಸೂಕ್ತ ಕ್ರಮ ಕೈಗೊಳ್ಳಲು ಕಡಬ ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ.
– ಎಚ್.ಕೆ. ಕೃಷ್ಣಮೂರ್ತಿ ಸಹಾಯಕ ಆಯುಕ್ತರು, ಪುತ್ತೂರು

ಸರಕಾರಿ ಜಾಗ ರಕ್ಷಣೆ

ಸರಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಿಸಲು ಪ್ರಾರಂಭ ಮಾಡಿರುವವರನ್ನು ಪತ್ತೆ ಹಚ್ಚಿ ಅವರಿಗೆ ನೋಟಿಸ್‌ ನೀಡಿದ್ದೇವೆ. ಅದರಲ್ಲಿ ಮೂವರಿಗೆ ಹಕ್ಕುಪತ್ರ ಕೊಡಲಾಗಿದ್ದು, ಅದನ್ನು ರದ್ದುಗೊಳಿಸಲು ಕ್ರಮ ಕೈಗೊಂಡು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಸರಕಾರಿ ಜಾಗವನ್ನು ರಕ್ಷಣೆ ಮಾಡಲಾಗುವುದು.
– ಜಾನ್‌ಪ್ರಕಾಶ್‌, ಕಡಬ ತಹಶೀಲ್ದಾರ್‌
Advertisement

Udayavani is now on Telegram. Click here to join our channel and stay updated with the latest news.

Next