ಶಿವಮೊಗ್ಗ: ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಕಲ್ಲಂಗಡಿಯಿಂದ ಬೆಲ್ಲ ತಯಾರಿ ಪ್ರಯೋಗ ಯಶಸ್ವಿಯಾಗಿ ನಡೆದಿದ್ದು, ಕಲ್ಲಂಗಡಿ ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ. ಹೊಸನಗರ ತಾಲೂಕು ನಿಟ್ಟೂರು ಗ್ರಾಮದ ಹೊಟೇಲ್ ಉದ್ಯಮಿ ಜಯರಾಮ ಶೆಟ್ಟಿಯವರು ಕಲ್ಲಂಗಡಿ ಬಳಸಿ ರುಚಿಯಾದ ಜೋನಿ ಬೆಲ್ಲ ತಯಾರಿಸಿ ಕಲ್ಲಂಗಡಿಯ ಮತ್ತೂಂದು ರೂಪವನ್ನು ಪರಿಚಯಿಸಿದ್ದಾರೆ.
ಕೊರೊನಾ ಲಾಕ್ ಡೌನ್ ಪರಿಣಾಮ ಶೆಟ್ಟಿ ಅವರು ಬೆಳೆದ ಕಲ್ಲಂಗಡಿ ಹಣ್ಣುಗಳು ಮಾರಾಟವಾಗದೇ ಉಳಿದಾಗ ಬೆಲ್ಲ ತಯಾರಿಕೆ ಪ್ರಯೋಗಕ್ಕೆ ಮುಂದಾಗಿದ್ದಾರೆ. ಯಾವಾಗ ಕಲ್ಲಂಗಡಿ ಹಣ್ಣಿನ ಬೆಲ್ಲ ತುಂಬಾ ರುಚಿಯಾಗಿ ಕೈ ಸೇರಿತೋ ಆಗ ದೊಡ್ಡ ಮಟ್ಟದಲ್ಲಿ ಬೆಲ್ಲ ಉತ್ಪಾದನೆ ಮಾಡಿದ್ದಾರೆ.
ಇದನ್ನೂ ಓದಿ : ದೇಶವನ್ನು 70 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿದ್ದೇ ಕೇಂದ್ರದ ಸಾಧನೆ : ಸಿದ್ದರಾಮಯ್ಯ
ಚೆನ್ನಾಗಿ ಹಣ್ಣಾಗಿರುವ ಕಲ್ಲಂಗಡಿ ಹಣ್ಣುಗಳ ಸಿಪ್ಪೆ ಬೀಜಗಳನ್ನೆಲ್ಲಾ ತೆಗೆದು ಅದನ್ನು ಜ್ಯೂಸ್ ಮಾಡಿ ಸೋಸಿ ಬೆಲ್ಲ ಕಾಯಿಸಲು ಬಳಸುವ ದೊಡ್ಡ ಕೊಪ್ಪರಿಗೆಗೆ ಹಾಕಲಾಗುತ್ತದೆ. ಬಳಿಕ ಒಂದೇ ಸಮನಾದ ಬೆಂಕಿ ಉರಿಯಲ್ಲಿ ನಾಲ್ಕು ಗಂಟೆ ಕಾಲ ಕುದಿಸಿದಾಗ ನೀರಿನ ಅಂಶ ಆವಿಯಾಗಿ ಬೆಲ್ಲದ ರೂಪ ಬರಲಾರಂಭಿಸುತ್ತದೆ.
ಯಾವಾಗ ಜ್ಯೂಸ್ ನಿಧಾನವಾಗಿ ಪಾಕದಂತೆ ಆಗಲಾರಂಭಿಸುತ್ತದೋ ಆಗ ಬೆಂಕಿಯ ಉರಿ ಕಡಿಮೆ ಮಾಡಿ ಯಾವ ಹದಕ್ಕೆ ಬೆಲ್ಲ ಬೇಕೋ ಆ ಹದವನ್ನು ನೋಡಿ ಒಲೆ ಮೇಲಿಂದ ಕೊಪ್ಪರಿಗೆಯನ್ನು ಇಳಿಸಬೇಕು. ಕಲ್ಲಂಗಡಿ ಬೆಲ್ಲ ತಯಾರಾಗಿರುತ್ತದೆ. ಜೋನಿ ಬೆಲ್ಲದಂತೆ ಕಲ್ಲಂಗಡಿ ಬೆಲ್ಲವೂ ಬಹಳ ರುಚಿ ಇರಲಿದೆ.
ಒಂದು ಟನ್ ಕಲ್ಲಂಗಡಿಯಿಂದ 700 ಲೀಟರ್ ಜ್ಯೂಸ್ ಸಿಗಲಿದೆ. ಅದನ್ನು ಕೊಪ್ಪರಿಗೆಯಲ್ಲಿ ಹಾಕಿ ಮೂರೂವರೆಯಿಂದ ನಾಲ್ಕು ಗಂಟೆ ಕುದಿಸಿದರೆ 80 ರಿಂದ 85 ಕೆಜಿ ಬೆಲ್ಲ ಸಿಗುತ್ತದೆ. ಲ್ಯಾಬ್ ಟೆಸ್ಟ್ ನಲ್ಲೂ ಇದು ಪಾಸ್ ಆಗಿದೆ. ಸರಕಾರ ಇದಕ್ಕೆ ಅವಕಾಶ ನೀಡಿದರೆ ಕಲ್ಲಂಗಡಿ ಬೆಳೆಗಾರರು ನಿಶ್ಚಿಂತೆಯಿಂದ ಬೆಳೆ ಬೆಳೆಯಬಹುದು.
ಕಲ್ಲಂಗಡಿ ಸಿಪ್ಪೆಯಿಂದ ಹಿಂಡಿ ತಯಾರಿಸಬಹುದು. ಮುಂದೆ ಅದರ ಬಗ್ಗೆಯೂ ಸಂಶೋಧನೆ ಕೈಗೊಳ್ಳುವೆ ಎನ್ನುತ್ತಾರೆ ಜಯರಾಮ್ ಶೆಟ್ಟಿ.
ಇದನ್ನೂ ಓದಿ : ಬಿಜೆಪಿಗೆ ಸೇರಿ ತಪ್ಪು ನಿರ್ಧಾರ ತೆಗೆದುಕೊಂಡಿದ್ದೇನೆ : ದೀದಿಗೆ ದೀಪೇಂದು ಬಿಸ್ವಾಸ್ ಪತ್ರ