Advertisement

ಕಳಚಿ ಬಿದ್ದ ಕಲಾಕುಸುಮ ಶ್ರೀನಿವಾಸ ರಾವ್‌

06:00 AM May 04, 2018 | Team Udayavani |

ಬಹುಮುಖಿ ಕಲಾವಿದ ನಿವೃತ್ತ ಶಿಕ್ಷಕ ಮದಂಗಲ್ಲು ಶ್ರೀನಿವಾಸ ರಾವ್‌ ಎ.23ರಂದು 65ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ವೃತ್ತಿಯಲ್ಲಿ ಅಧ್ಯಾಪಕನಾಗಿದ್ದರೂ ಓರ್ವ ಹವ್ಯಾಸಿ ಯಕ್ಷಗಾನ ಕಲಾವಿದನಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ರಂಗನಟನಾಗಿ, ಪ್ರಸಾದನಾ ಕಲಾವಿದನಾಗಿ, ನೇಪಥ್ಯ ಕಲಾವಿದನಾಗಿ ರಾತ್ರಿಯಿಂದ ಬೆಳಗಿನವರೆಗೆ ಹವ್ಯಾಸಿ ಯಕ್ಷಗಾನ ಕಲಾವಿದರ ಮುಖವರ್ಣಿಕೆ ಬರೆಯುತ್ತಾ, ನಾಟಕ ಹಾಗೂ ಶಾಲಾ ವಾರ್ಷಿಕೋತ್ಸವಗಳಿಗೆ ಪ್ರಸಾದನ ಕೈಂಕರ್ಯ ನಡೆಸುತ್ತಾ, ನೇಪಥ್ಯದಲ್ಲಿ ವೇಷಭೂಷಣ ಕಟ್ಟುತ್ತಾ 48 ವರ್ಷಗಳಿಂದ ಸದ್ದಿಲ್ಲದೆ ಕಲಾ ಸೇವೆ ನಡೆಸುತ್ತಾ ಬಂದವರು. ಆಪ್ತರಿಂದ ಒಪ್ಪಣ್ಣನೆಂದೇ ಕರೆಸಿಕೊಂಡವರು.

Advertisement

ಇಂದಿನ ಅನೇಕ ಹಿರಿಯ ಹವ್ಯಾಸಿ ಕಲಾವಿದರೂ ಕೂಡ ಒಂದಲ್ಲ ಒಂದು ಸಲ ಇವರಿಂದ ಮುಖವರ್ಣಿಕೆ ಬರೆಸಿಕೊಂಡವರೆ. ಹವ್ಯಾಸಿ ಯಕ್ಷಗಾನ ಬಯಲಾಟಗಳಿಗೆ ಆಪತ್‌ ಕಲಾವಿದನಾಗಿ ಒದಗುವವರು.ಆಟಕ್ಕೆ ಯಾವುದೇ ಕಲಾವಿದರ ಗೈರಾದಾರೆ ಆ ವೇಷಕ್ಕೆ ಒಪ್ಪಣ್ಣನೇ ಗತಿ. ಆಪತ್‌ ಕಲಾವಿದನಾಗಿ ಶಾಲಾ ದಿನದಲ್ಲಿ ರಂಗವೇರಿದ ಶ್ರೀನಿವಾಸ ರಾವ್‌ ಜೀವನದುದ್ದಕ್ಕೂ ಆಪತ್‌ ಕಲಾವಿದನಾಗೇ ಗುರುತಿಸಿಕೊಂಡಿದ್ದೇನೆ ಎನ್ನುತ್ತಿದ್ದರು. 

ಪುಂಡುವೇಷ, ಕಿರೀಟವೇಷ, ಬಣ್ಣದವೇಷ, ಹೆಣ್ಣು ಬಣ್ಣ, ಹಾಸ್ಯ, ಕನ್ನಡ, ತುಳು, ಪೌರಾಣಿಕ, ಕಾಲ್ಪನಿಕ ಹೀಗೆ ಎಲ್ಲಾ ಪ್ರಕಾರದ ವೇಷಗಳಿಗೆ ಸೈ ಎನಿಸಿದವರು. ಇವರ ಭಸ್ಮಾಸುರ ಮೋಹಿನಿಯ ಶಿವ, ದೇವಿ ಮಹಾತೆ¾ಯ ಬ್ರಹ್ಮ, ಶೂರ್ಪನಖೀ, ತಾಟಕಿ, ಪೂತನಿ, ರಾವಣ, ದೇವೇಂದ್ರ, ಮಹಿಷಾಸುರ, ವಾವರ, ಅಬ್ಬು ಸೇಕು, ಕೇಳು ಪಂಡಿತ, ಕೇತಕಿ ವರ್ಮ, ಬುದ್ಧಿವಂತ, ಕೇಮರ ಬಲ್ಲಾಳ ಹೀಗೆ ಪೌರಾಣಿಕ ಸಾಮಾಜಿಕ, ತುಳು ಕನ್ನಡ ಎಲ್ಲ ಪ್ರಕಾರದ ವೇಷಗಳನ್ನು ಮಾಡಿದ್ದಾರೆ. ನಾಟಕ ರಂಗದಲ್ಲಿ ಬಯ್ಯಮಲ್ಲಿಗೆಯ ಚಿಕ್ಕಮ್ಮ, ಬೊಳ್ಳಿಮೂಡುಂಡು ನಾಟಕದ ಗಂಗಾ, ಕೃಷ್ಣ ದೇವರಾಯದ ಅಪ್ಪಾಜಿ ಇವರ ಪ್ರಸಿದ್ಧ ಪಾತ್ರಗಳು.

 ಅಧ್ಯಾಪನ ವೃತ್ತಿಯ ಜತೆಗೆ ಹಿರಿಯ ಕಲಾವಿದ ದೇವಕಾನ ಕೃಷ್ಣ ಭಟ್ಟರಿಂದ ಪ್ರಸಾದನ ಕಲೆ ಕಲಿತು ಗಣೇಶ ಕಲಾವೃಂದ ಪೈವಳಿಕೆ ಸಂಸ್ಥೆಯಲ್ಲಿ ಸೇವೆಗೈಯುತ್ತಾ ಬಂದಿದ್ದರು. ಪಣಂಬೂರು ಶ್ರೀಧರ ಐತಾಳರು ಒಪ್ಪಣ್ಣರಿಗೆ ಯಕ್ಷಗಾನದ ಮೊದಲ ಪಾಠ ಹೇಳಿಕೊಟ್ಟವರು. ಮಾವ ಕುರಿಯ ವಿಠಲ ಶಾಸ್ತ್ರಿಗಳ ಮಾರ್ಗದರ್ಶನ, ಅಣ್ಣ , ತಮ್ಮಂದಿರೊಂದಿಗೆ ಯಕ್ಷಗಾನದ ಒಡನಾಟ, ಹೀಗೆ ಕೇಳಿ ನೋಡಿ ಕಲಿತದ್ದೇ ಹೆಚ್ಚು ಎನ್ನುತ್ತಿದ್ದರು ರಾವ್‌. ದೇಶ ವಿದೇಶಗಳಲ್ಲಿ ಹಲವಾರು ಪ್ರಶಸ್ತಿ , ಸಮ್ಮಾನದ ಗೌರವಗಳಿಗೆ ಪಾತ್ರರಾದವರು ರಾವ್‌.  

ಯೋಗೀಶ ರಾವ್‌ ಚಿಗುರುಪಾದೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next