Advertisement

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ: ಹೊನಲು ಬೆಳಕಿನ ಸಾಮೂಹಿಕ ಕ್ರೀಡಾಕೂಟ

03:26 PM Dec 17, 2017 | Team Udayavani |

ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಡಿ. 16ರಂದು ಸಂಜೆ 3300 ವಿದ್ಯಾರ್ಥಿಗಳಿಂದ ಹೊನಲು ಬೆಳಕಿನ ಸಾಮೂಹಿಕ ಕ್ರೀಡಾಕೂಟ ನಡೆಯಿತು. ಸಮವಸ್ತ್ರ ಧರಿಸಿದ ಕಾಲೇಜು ವಿದ್ಯಾರ್ಥಿಗಳು ಘೋಷ್‌ನ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತ ಆಕರ್ಷಕವಾಗಿ ಶಿಸ್ತಿನ ಸೈನಿಕರಂತೆ ವಿವಿಧ ವಾಹಿನಿಗಳಲ್ಲಿ ಪಥ ಸಂಚಲನ ಮಾಡಿದರು. ಕೋವಿಯನ್ನು ಹಿಡಿದ ಕಾಲೇಜು ವಿದ್ಯಾರ್ಥಿಗಳಿಂದ ಕೋವಿ ಸಮತಾ ಪ್ರದರ್ಶನಗಳು.

Advertisement

‘ಹಾರುತ್ತಿರಲಿ ನಲಿಯುತ್ತಿರಲಿ ಸಮಸ್ತ ಜಗದ ಜೀವಿಗಳು ನಾನು ನೀನು ಇದ್ದಂತೆ ದೇವಸೃಷ್ಟಿಯ ಜೀವಿಗಳು..’ ಎಂಬ ಹಾಡಿಗೆ ಶ್ರೀ ರಾಮ ಶಿಶುಮಂದಿರ ಪುಟಾಣಿಗಳಿಂದ ಆಕರ್ಷಕ ಶಿಶುನೃತ್ಯ ನಡೆಯಿತು. ಆನಕ, ಶಂಖ, ವಂಶಿ, ಪಣವ, ಝಲ್ಲರಿ, ತ್ರಿಭುಜ, ನಾಗಾಂಗ, ಟ್ರಂಫೆಟ್‌ ಮೊದಲಾದ ವಾದ್ಯಗಳನ್ನು ಸಾಮೂಹಿಕವಾಗಿ ಬಾರಿಸುವ ಮೂಲಕ ಘೋಷ್‌ ಪ್ರದರ್ಶನ ನೀಡಿ, ಜನಮನ ರಂಜಿಸಿದರು.

ಘೋಷ್‌ ಪ್ರದರ್ಶನದಲ್ಲಿ ತಾಳದ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ವಿವಿಧ ರಚನೆಯನ್ನು ನಿರ್ಮಿಸಿ ಸಂಗೀತದೊಂದಿಗೆ
ಬಾಲಕ ಬಾಲಕಿಯರು ಮನರಂಜಿಸಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ನಂದಗೋಪ ನಂದನ ನಾದಲೋಲ ಬೃಂದಾವನ ಮಂದಿರ ಚಂದಿರ ಎಂಬ ಹಾಡಿನ ಜೊತೆಯಲ್ಲಿ ಜಡೆ ಹೆಣೆಯುವ ಮತ್ತು ಬಿಚ್ಚುವ ವಿಶೇಷ ನೃತ್ಯ ವೈಭವ ಪ್ರದರ್ಶಿಸಿದರು.

ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಹೋರಾಟದ ಮನೋಭಾವ ಬೆಳೆಸುವುದಕ್ಕೆ ಸಹಕಾರಿಯಾದ ಭಾರತೀಯ ನಿಶ್ಯಸ್ತ್ರಯುದ್ಧ
ಕಲೆ ಮತ್ತು ವಿದ್ಯಾರ್ಥಿನಿಯರಿಂದ ಆತ್ಮ ರಕ್ಷಣೆಯ ಕರಾಟೆ ಪ್ರಯೋಗ ಮತ್ತು ವಿವಿಧ ಪ್ರದರ್ಶನಗಳು ನಡೆದವು. ಯೋಗ ಗುಚ್ಚಗಳ ರಚನೆ ನಡೆಯಿತು. ಓ ಭಾರತಿ ಹಾಡಿಗೆ ಪುಟಾಣಿಗಳು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಆಕರ್ಷಕ ಚಿತ್ತಾರಗಳನ್ನು ಮೂಡಿಸುವ ಸಂಯೋಜನೆ, ತಾವರೆ, ಓಂಕಾರ, ಮತ್ತು ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಒಂದು ಸಾವಿರ ದಾಟಿದ ನೆನಪಿಗೆ 1,061 ಬರೆದ ರಚನೆ ಗಳೊಂದಿಗೆ ಪ್ರಾಥಮಿಕ ಶಾಲಾ ಎಲ್ಲ ವಿದ್ಯಾರ್ಥಿಗಳು ಒಟ್ಟಾಗಿ ಭಾಗವಹಿಸುವ ಒಂದು ವಿಶೇಷ ಪ್ರದರ್ಶನ ನಡೆಯಿತು.

ಗಣಪತಿ ಬಪ್ಪ ಮೋರೆಯಾ ಮಂಗಳ ಮೂರ್ತಿ ಮೋರೆಯ ಎಂಬ ಮರಾಠಿ ಭಾಷೆಯ ಭಜನೆಗೆ ನೃತ್ಯ, ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ದೀಪಧಾರಿಗಳಾಗಿ ದೀಪಾರತಿ ವಿವಿಧ ರಚನೆಗಳು ನಕ್ಷತ್ರ, ಸ್ವಸ್ತಿಕ, ಭಗವಾಧ್ವಜ ರಚನೆಗಳ ಮೂಲಕ ಸಾಲುದೀಪಗಳ ಸಂಯೋಜನೆ, ದೀಪಾವಳಿಯ ಆಕರ್ಷಕ ನೋಟ ನೀಡಿತ್ತು.

Advertisement

ಮಲ್ಲಕಂಬ
ಮಲ್ಲಕಂಬ ಪ್ರದರ್ಶನದಲ್ಲಿ ಎರಡು ಕಂಬಗಳಲ್ಲಿ ವಿದ್ಯಾರ್ಥಿಗಳು ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಬಾಟಲಿಗಳ ಮೇಲೆ ಜೋಡಿಸಿದ ತಿರುಗುವ ಮಲ್ಲ ಕಂಬಗಳಲ್ಲಿ ವಿಶೇಷ ಯೋಗಾಸನ ಪ್ರದರ್ಶನ ಮೈ ನವಿರೇಳುವ ಪ್ರದರ್ಶನ ನೀಡಿದರು.

ನೃತ್ಯ ವೈವಿಧ್ಯ
ಕಾಲೇಜು ವಿದ್ಯಾರ್ಥಿಗಳಿಂದ ಸುಗ್ಗಿ ಕೊಯ್ಯರೆ ಪೋಯಿ ಎಂಬ ತುಳು ಭಾಷೆಯ ಹಾಡಿಗೆ, ಸೂರ್ಯನಕಿರಣ ಮತ್ತು ಮನೆಯ ರಚನೆಯಲ್ಲಿ ಕರಾವಳಿಯ ಭತ್ತದ ಕೃಷಿಯ ವಿವಿಧ ಹಂತದ ಚಟುವಟಿಕೆಗಳ ಪ್ರದರ್ಶನ ನಡೆಯಿತು. ದ್ವಿಚಕ್ರ, ಏಕಚಕ್ರಗಳ ವಿವಿಧ ಕಸರತ್ತು ಗಳ ಮೂಲಕ ಮೈನವಿರೇಳಿಸುವ ರೋಮಾಂಚನ ದೃಶ್ಯಗಳು, ಮೋಟಾರು ಸೈಕಲುಗಳಲ್ಲಿ ಸಾಹಸಮಯ ಸವಾರಿ, ಬೆಂಚಿನ ಮೇಲೆ ಏಕಚಕ್ರದಲ್ಲಿ ಸವಾರಿ, ಬಾಲಕಿಯರು ಟ್ಯೂಬ್‌ ಲೈಟ್‌ಗಳ ಭಿತ್ತಿಯನ್ನು ಎದೆಯೊಡ್ಡಿ ಒಡೆಯುವ ಅದ್ಭುತ ಸಾಹಸ ನಡೆಸಿದರು.

ಬೆಂಕಿ ಚಕ್ರ 
ಬೆಂಕಿಯೊಂದಿಗೆ ನಿರ್ಭೀತಿಯಿಂದ ತಾಲೀಮುಗಳ ಪ್ರದರ್ಶನ, ಬೆಂಕಿ ಚಕ್ರದೊಳಗೆ ಧುಮುಕುವುದು, ಕಾಲೇಜು ವಿದ್ಯಾರ್ಥಿಗಳಿಂದ ಕೇರಳದ ಚೆಂಡೆ ವಾದ್ಯ, ಕಾಲ್ಚಕ್ರ (ಸ್ಕೇಟಿಂಗ್‌) ಅತ್ಯಂತ ಮನೋ ಹರವಾದ ಕೂಪಿಕಾ ಪ್ರದರ್ಶನ ಎಲ್ಲರನ್ನೂ ಉಸಿರು ಬಿಗಿಹಿಡಿದು ನೋಡುವಂತೆ ಮಾಡಿತ್ತು.

ಪ್ರೌಢಶಾಲೆಯ 902 ವಿದ್ಯಾರ್ಥಿಗಳು ಮೈದಾನದ ಹೊನಲು ಬೆಳಕಿನಲ್ಲಿ ಲಯಬದ್ಧವಾಗಿ ಕುಣಿದು ಕುಪ್ಪಳಿಸಿ ರಂಗೋಲಿಗಳ ಚಿತ್ತಾರ, ಸಾಲುಸಾಲಾಗಿ ಕುಳಿತು ಮಾಡುವ ಸಾಮೂಹಿಕ ರಚನೆಗಳು. ಶಿವಾಜಿಯ ಮತ್ತು ಝಾನ್ಸಿರಾಣಿ ಲಕ್ಷ್ಮೀ ಬಾಯಿಯನ್ನು ನೆನಪಿಸುವ ದೃಶ್ಯ, ಅಂಡಮಾನ್‌ನಲ್ಲಿ ಸ್ವಾತಂತ್ರ್ಯ ವೀರ ಸಾವರ್‌ ಕರ್‌ ಅನುಭವಿಸಿದ ಕರಿನೀರ ಶಿಕ್ಷೆಯ ರೂಪಕ ಮತ್ತು ರಾಕೆಟಿನಿಂದ ಉಪಗ್ರಹ ಉಡಾವಣೆ, ಭಾರತೀಯ ವಿಜ್ಞಾನಿಗಳಿಗೆ ಪ್ರಧಾನಿಗಳ ಶ್ಲಾಘನೆ ಎನ್ನುವ ಸ್ತಬ್ದ ಚಿತ್ರಗಳು ಆಕರ್ಷಿತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next