Advertisement

ಕಲ್ಲಡ್ಕ ಪ್ರಭಾಕರ ಭಟ್‌ ಬಂಧನ ಬೇಡ- ತನಿಖೆಗೆ ಸಹಕರಿಸುವಂತೆ ಭಟ್ಟರಿಗೆ ಹೈಕೋರ್ಟ್‌ ಸೂಚನೆ

10:58 PM Dec 28, 2023 | Team Udayavani |

ಬೆಂಗಳೂರು: ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿ ತನಿಖೆಗೆ ಸಹಕರಿಸುವಂತೆ ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರಿಗೆ ಹೈಕೋರ್ಟ್‌ ಸೂಚಿಸಿದೆ. ಇದೇ ವೇಳೆ ಕಲ್ಲಡ್ಕ ಪ್ರಭಾಕರ ಭಟ್‌ ಅವರನ್ನು ಬಂಧಿಸಬಾರದು ಎಂದೂ ಹೈಕೋರ್ಟ್‌ ರಾಜ್ಯ ಸರಕಾರಕ್ಕೆ ನಿರ್ದೆಶನ ನೀಡಿದೆ.

Advertisement

ಶ್ರೀರಂಗಪಟ್ಟಣ ಟೌನ್‌ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್‌ ರದ್ದು ಕೋರಿ ಭಟ್ಟರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾ| ಕೆ. ರಾಜೇಶ್‌ ರೈ ನೇತೃತ್ವದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಭಟ್‌ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌ ವಾದ ಮಂಡಿಸಿ, ರಾಜಕೀಯ ಪ್ರೇರಿತವಾಗಿ ದೂರು ದಾಖಲಿಸಲಾಗಿದೆ. ಅರ್ಜಿದಾರರು ವಯೋವೃದ್ಧರು ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ಬಂಧಿಸುವ ಸಾಧ್ಯತೆ ಇದೆ. ಹೀಗಾಗಿ ಎಫ್ಐಆರ್‌ಗೆ ತಡೆ ನೀಡಬೇಕು ಎಂದು ಕೋರಿದರು.

ದೂರುದಾರೆ ನಜ್ಮಾ ನಜೀರ್‌ ಪರ ವಕೀಲ ಎಸ್‌. ಬಾಲಕೃಷ್ಣನ್‌ ಅವರು ಅರ್ಜಿದಾರರ ಹೇಳಿಕೆ ಪರಿಶೀಲಿಸಬೇಕು. ಮುಸ್ಲಿಂ ಮಹಿಳೆಯರಿಗೆ ಒಬ್ಬ ಗಂಡ ಅಲ್ಲ. ದಿನಕ್ಕೊಬ್ಬ ಗಂಡಂದಿರು ಎಂದಿದ್ದಾರೆ. ಇದು ಸಮಾಜದಲ್ಲಿ ಅಶಾಂತಿ ಹುಟ್ಟಿಸುತ್ತಿದೆ. ಎಲ್ಲ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಆರೋಪಿ ಈ ಹಿಂದೆಯೂ ಇಂತಹ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಹೀಗಾಗಿ ಕಾನೂನು ಅದರ ಕೆಲಸ ಮಾಡಲಿ ಎಂದರು.

ಅದಕ್ಕೆ ಆಕ್ಷೇಪಿಸಿದ ಅರುಣ್‌ ಶ್ಯಾಮ್‌ ಮುಂದಿನ ದಿನಾಂಕದವರೆಗೆ ಬಂಧಿಸದಂತೆ ನಿರ್ದೇಶಿಸಬೇಕು. ಪ್ರಭಾಕರ ಭಟ್‌ ವಿರುದ್ದ ಸರಕಾರ ರೌಡಿಶೀಟ್‌ ತೆರೆಯುವ ಸಾಧ್ಯತೆ ಇದೆ ಎಂದರು. ಇದಕ್ಕೆ ಬಾಲಕೃಷ್ಣನ್‌ ಪ್ರತಿಕ್ರಿಯಿಸಿ, ಆರೋಪಿ ವಿರುದ್ದ ರೌಡಿಶೀಟ್‌ ಮಾತ್ರವಲ್ಲ. ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯ್ದೆ (ಯುಎಪಿಎ) ಸಹಿತ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಪೊಲೀಸರು ಹಾಕಿರುವ ಎಲ್ಲ ಸೆಕ್ಷನ್‌ಗಳು ಸರಿಯಾಗಿವೆ. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಯಬೇಕು. ಇದು ಸರಳ ಪ್ರಕರಣ ಅಲ್ಲ ಎಂದರು.

Advertisement

ರಾಜ್ಯ ಸರಕಾರದ ಪರ ಹೆಚ್ಚುವರಿ ವಿಶೇಷ ಸರಕಾರಿ ಅಭಿಯೋಜಕ ಬಿ. ಎನ್‌. ಜಗದೀಶ್‌ ವಾದ ಮಂಡಿಸಿ, ಅರ್ಜಿದಾರರಿಗೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಮಧ್ಯಾಂತರ ಜಾಮೀನು ಸಿಕ್ಕಿದೆ. ಹೀಗಾಗಿ ಅವರನ್ನು ಬಂಧಿಸುತ್ತಿಲ್ಲ. ಆದರೆ ಅವರು ತನಿಖೆಗೆ ಸಹಕರಿಸಬೇಕು. ಜನರನ್ನು ರಕ್ಷಿಸುವ ಹೊಣೆಗಾರಿಕೆ ಸರಕಾರಕ್ಕಿದೆ. ದ್ವೇಷದ ಭಾಷಣ ಮಾಡುವವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ದೂರಿನ ಸಾರಾಂಶ ಅಥವಾ ಯಾರು ದೂರು ನೀಡಿದ್ದಾರೆ ಎಂಬುದು ಮುಖ್ಯವಲ್ಲ. ಅರ್ಜಿದಾರರು ಮಾಡಿರುವ ಇಡೀ ಭಾಷಣವನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಸೂಕ್ತ ವರದಿಯನ್ನು ಸಂಬಂಧಿತ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.

ಆಗ ನ್ಯಾಯಪೀಠವು ಅರ್ಜಿದಾರರು ತನಿಖೆಗೆ ಸಹಕರಿಸಬೇಕು. ಸರಕಾರ ಅರ್ಜಿದಾರರನ್ನು ಬಂಧಿಸಬಾರದು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜನವರಿ 9ಕ್ಕೆ ಮುಂದೂಡಿತು.

 

Advertisement

Udayavani is now on Telegram. Click here to join our channel and stay updated with the latest news.

Next