Advertisement

Kalladka: ವಿದ್ಯೆಯಿಂದ ಪಡೆದ ಜ್ಞಾನ ದೇಶದ ಏಳಿಗೆಗೆ ಬಳಕೆಯಾಗಲಿ: ಆರೆಸ್ಸೆಸ್‌ ಮುಖ್ಯಸ್ಥ

01:05 AM Dec 08, 2024 | Team Udayavani |

ಬಂಟ್ವಾಳ: ವಿದ್ಯೆಯಿಂದ ನಾವು ಪಡೆದ ಜ್ಞಾನವನ್ನು ಯಾವತ್ತೂ ನಮ್ಮ ಸ್ವಾರ್ಥಕ್ಕೆ ಬಳಸದೆ ದೇಶದ ಅಭಿವೃದ್ಧಿ, ಸಂಸ್ಕೃತಿಯ ರಕ್ಷಣೆ, ದುರ್ಬಲರ ಏಳಿಗೆಗೆ ಉಪಯೋಗಿಸಬೇಕಿದೆ. ವಿದ್ಯೆಯು ಕೇವಲ ಹೊಟ್ಟೆ ತುಂಬಿಸುವ ಸಾಧನವಲ್ಲ ಎಂಬ ಜ್ಞಾನ ಅಗತ್ಯ ಎಂದು ಆರೆಸ್ಸೆಸ್‌ ಸರಸಂಘಚಾಲಕ್‌ ಡಾ| ಮೋಹನ್‌ ಭಾಗವತ್‌ ಹೇಳಿದರು.

Advertisement

ಶನಿವಾರ ಸಂಜೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳ ಸಾಹಸಮಯ ಪ್ರದರ್ಶನಗಳನ್ನೊಳಗೊಂಡ ಹೊನಲು ಬೆಳಕಿನ ಕ್ರೀಡೋತ್ಸವವನ್ನು ಶ್ರೀರಾಮನ ಮೂರ್ತಿಗೆ ಕ್ಷೀರಾಭಿಷೇಕ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ ಶಿಕ್ಷಿತ ಮನುಷ್ಯನಿಗೆ ತನ್ನ ಕುಟುಂಬವನ್ನು ಪಾಲನೆ ಮಾಡುವ ಜತೆಗೆ ವಿದ್ಯೆಯನ್ನು ಸರಿಯಾಗಿ ಉಪಯೋಗಿಸುವ ಬುದ್ಧಿ- ಸಂಸ್ಕಾರ ಅಗತ್ಯವಾಗಿದೆ. ಪುಸ್ತಕದ ಓದಿನ ಜತೆಗೆ ಎಲ್ಲರನ್ನೂ ಪ್ರೀತಿಸುವ ಗುಣ ನಮ್ಮಲ್ಲಿರಬೇಕಿದೆ. ಈ ಎಲ್ಲ ಗುಣಗಳನ್ನು ಹೊಂದಿರುವವರು ಮಾತ್ರ ಶಿಕ್ಷಿತರು ಪದಕ್ಕೆ ಅರ್ಹರಾಗುತ್ತಾರೆ ಎಂದರು.

ದೇಶದಲ್ಲಿ ಕಳೆದ ಸಾಲಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದ್ದು, ಆದರೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಅದಕ್ಕೆ ಮುನ್ನವೇ ಅಂತಹ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದ್ದು, ಮನುಷ್ಯನನ್ನು ವಿಚಾರಪೂರ್ಣ ವ್ಯಕ್ತಿಯಾಗಿಸಲು ಇಲ್ಲಿ ಉಚಿತ ಶಿಕ್ಷಣ ಸಿಗುತ್ತಿದೆ ಎಂದರು.

ವಿದ್ಯಾಕೇಂದ್ರದ ಸ್ಥಾಪಕ ಕಾರ್ಯ ದರ್ಶಿ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕ್ಯಾ| ಬ್ರಿಜೇಶ್‌ ಚೌಟ, ಶಾಸಕರಾದ ರಾಜೇಶ್‌ ನಾೖಕ್‌, ಹರೀಶ್‌ ಪೂಂಜ, ಉಮಾನಾಥ ಕೋಟ್ಯಾನ್‌, ಭಾಗೀರಥಿ ಮುರುಳ್ಯ, ಗುರ್ಮೆ ಸುರೇಶ್‌ ಶೆಟ್ಟಿ, ಗುರುರಾಜ್‌ ಗಂಟಿಹೊಳೆ, ಸಿಮೆಂಟ್‌ ಮಂಜು, ಮಾಜಿ ಸಚಿವರಾದ ಬಿ.ನಾಗರಾಜ ಶೆಟ್ಟಿ, ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಬೆಂಗಳೂರು ಎಂಆರ್‌ಜಿ ಗ್ರೂಪ್‌ ಮುಖ್ಯಸ್ಥ ಪ್ರಕಾಶ್‌ ಶೆಟ್ಟಿ ಬಂಜಾರ, ಪ್ರಸಾದ್‌ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣಪ್ರಸಾದ್‌ ಕೂಡ್ಲು, ಉದ್ಯಮಿ ಸಂತೋಷ್‌‍ ಕುಮಾರ್‌ ದಳಂದಿಲ, ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಮೊದಲಾದವರು ಪಾಲ್ಗೊಂಡಿದ್ದರು.

ಆರೆಸ್ಸೆಸ್‌ನ ಪ್ರಮುಖರಾದ ಮುಕುಂದ್‌ ಸಿ.ಆರ್‌., ಡಾ| ವಾಮನ ಶೆಣೈ, ಕಜಂಪಾಡಿ ಸುಬ್ರಹ್ಮಣ್ಯ ಭಟ್‌, ಸುಧೀರ್‌, ಭರತ್‌, ತಿಪ್ಪೇಸ್ವಾಮಿ, ಕೈಲಾಸ್‌, ಗುರುಪ್ರಸಾದ್‌, ನಂದೀಶ್‌, ಜಯಪ್ರಕಾಶ್‌, ನಾರಾಯಣ ಶೆಣೈ, ಪಟ್ಟಾಭಿರಾಮ ಅವರು ಸರಸಂಘಚಾಲಕ್‌ ಜತೆಗಿದ್ದರು.
ಸಂಚಾಲಕ ವಸಂತ ಮಾಧವ ಸ್ವಾಗತಿಸಿದರು. ರಾಧಾಕೃಷ್ಣ ಅಡ್ಯಂತಾಯ ಹಾಗೂ ಜಿನ್ನಪ್ಪ ಏಳ್ತಿಮಾರ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

ಪ್ರದರ್ಶನದ ಬಳಿಕ ಭಾಷಣವೇ ಬೇಕಿಲ್ಲ
ಕ್ರೀಡೋತ್ಸವದಲ್ಲಿ ಮಕ್ಕಳ ಪ್ರದರ್ಶನವನ್ನು ನೋಡಿದ ಬಳಿಕ ಭಾಷಣ ಮಾಡುವ ಅಗತ್ಯವೇ ಇಲ್ಲ. ಆದರೆ ಅತಿಥಿ ಸ್ಥಾನಕ್ಕೆ ಗೌರವ ನೀಡಿ ಒಂದೆರಡು ಮಾತುಗಳನ್ನು ಆಡುತ್ತೇನೆ. ಮಕ್ಕಳ ಪ್ರತಿ ಪ್ರದರ್ಶನಗಳು ಒಂದಕ್ಕೊಂದು ಉತ್ತಮವಾಗಿದ್ದು, ಸಂಸ್ಥೆಯ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಾ| ಮೋಹನ್‌ ಭಾಗವತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next