ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳ ಸಾಹಸಮಯ ಪ್ರದರ್ಶನಗಳನ್ನೊಳಗೊಂಡ 2024ನೇ ಸಾಲಿನ ಹೊನಲು ಬೆಳಕಿನ ಕ್ರೀಡೋತ್ಸವವು ಡಿ. 7ರಂದು ಸಂಜೆ 6ಕ್ಕೆ ವಿದ್ಯಾಕೇಂದ್ರದ ಮೈದಾನದಲ್ಲಿ ನಡೆಯಲಿದ್ದು, ಸಮಾರಂಭದಲ್ಲಿ ಆರೆಸ್ಸೆಸ್‌ನ ಸರಸಂಘ ಚಾಲಕ್ ಡಾ| ಮೋಹನ್‌ಜಿ ಭಾಗವತ್ ಭಾಗವಹಿಸಲಿದ್ದಾರೆ ಎಂದು ವಿದ್ಯಾಕೇಂದ್ರದ ಸ್ಥಾಪಕ ಕಾರ್ಯದರ್ಶಿ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಸೋಮವಾರ ಬಿ.ಸಿ.ರೋಡಿನ ಪ್ರಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀರಾಮ ವಿದ್ಯಾಕೇಂದ್ರವು ದೇಶ ಮೊದಲು ಎಂಬ ಚಿಂತನೆಯಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿದ್ದು, ಪ್ರತಿವರ್ಷವೂ ಕ್ರೀಡೋತ್ಸವವನ್ನು ಆಯೋಜಿಸಿ ಮಕ್ಕಳ ಸಾಹಸಮಯ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ ನೀಡುತ್ತಿದೆ.
ಡಾ| ಮೋಹನ್‌ಜಿ ಭಾಗವತ್ ಅವರಿಗೆ ವಿಶೇಷ ಭದ್ರತಾ ವ್ಯವಸ್ಥೆ ಇರುವುದರಿಂದ ಒಟ್ಟು ಕಾರ್ಯಕ್ರಮವನ್ನು ಒಂದೂವರೆ ಗಂಟೆಗೆ ಸೀಮಿತಗೊಳಿಸಲಾಗಿದೆ. ಒಂದು ದಿನಕ್ಕೆ ಮೊದಲೇ ಕೇಂದ್ರ ಭದ್ರತಾ ಸಿಬಂದಿ ಆಗಮಿಸಿ ಸ್ಥಳವನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳಲಿದ್ದಾರೆ. ಭಾಗವತ್ ಅವರು ಡಿ. 6ರಂದು ಮಂಗಳೂರಿನ ಸಂಘನಿಕೇತನಕ್ಕೆ ಆಗಮಿಸಲಿದ್ದು, ನಾಲ್ಕೈದು ದಿನ ಆರೆಸ್ಸೆಸ್ ಕಾರ್ಯಕ್ರಮಕ್ಕಾಗಿ ಮಂಗಳೂರಿನಲ್ಲೇ ಉಳಿದುಕೊಳ್ಳಲಿದ್ದಾರೆ.
ಡಿ. 7ಕ್ಕೆ ಸಂಜೆ 4.15ಕ್ಕೆ ಮಂಗಳೂರಿನಿಂದ ಹೊರಟು 5ಕ್ಕೆ ಕಲ್ಲಡ್ಕ ತಲುಪಲಿದ್ದಾರೆ. ಶ್ರೀರಾಮ ವಿದ್ಯಾಕೇಂದ್ರದ ಚಟುವಟಿಕೆಗಳನ್ನು ವೀಕ್ಷಿಸಿ 6.30ರಿಂದ ಒಂದೂವರೆ ಗಂಟೆಗಳ ಕಾಲ ಕ್ರೀಡೋತ್ಸವವನ್ನು ವೀಕ್ಷಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ದೇಶ-ವಿದೇಶಗಳ ಗಣ್ಯರಾದ ಅಜಿತ್‌ಕುಮಾರ್ ಎಸ್.ಜೈನ್, ಬಿ.ನಾರಾಯಣ್, ಮನೋಜ್‌ಕುಮಾರ್, ರಾಧೇಶ್ಯಾಮ್ ಶ್ರೀವಲಭ ಹೇಡ, ಮನೋಜ್ ಕೋಟಕ್ ಕಿಶೋರ್‌ಭಾಯ್, ಮನೀಶ್ ಜೋಷಿ, ಪ್ರಕಾಶ್ ಶೆಟ್ಟಿ ಬಂಜಾರ, ಡಾ| ಸೂರಜ್ ಗೋಪಾಲ್ ಎರ್ಮಾಳ್, ಕರುಣಾಕರ ಆರ್.ಶೆಟ್ಟಿ, ನವೀನ್ ಗೋಯೆಲ್, ಡಾ| ವಿರಾರ್ ಶಂಕರ್ ಬಿ. ಶೆಟ್ಟಿ, ರವಿಕಲ್ಯಾಣ ರೆಡ್ಡಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ, ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಸಾದ್‌ಕುಮಾರ್ ರೈ, ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.