Advertisement

ಕಲ್ಲಡ್ಕ ಜಂಕ್ಷನ್: ಸಾಧ್ಯತೆ, ಸಾಮರ್ಥ್ಯ ಬಳಸಿಕೊಂಡರೆ ಬೆಳವಣಿಗೆ 

11:15 AM Aug 27, 2018 | Team Udayavani |

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಕಲ್ಲಡ್ಕ ಬೆಳವಣಿಗೆಯ ಸಾಧ್ಯತೆಯೂ ಸಾಮರ್ಥ್ಯವೂ ನಿಹಿತವಾಗಿರುವ ಸಂಧಿ ಸ್ಥಳ. ಸರಿಯಾಗಿ ಉಪಯೋಗಿಸಿಕೊಂಡರೆ ಎಷ್ಟು ಎತ್ತರಕ್ಕೂ ಬೆಳೆಯಬಹುದು. ವಿಟ್ಲ ಕಡೆಗೆ ಮಾರ್ಗ ಇಲ್ಲಿಂದ ತಿರುವು ಪಡೆಯುತ್ತದೆ. ಇದು ಸ್ವಾತಂತ್ರ್ಯ ಪೂರ್ವದಿಂದಲೂ ವಿಟ್ಲಕ್ಕೆ ಸಂಪರ್ಕ ಕಲ್ಪಿಸಿದ್ದ ಬಂಡಿ ರಸ್ತೆ. ಸಂದಿ ಪಾಡªನದಲ್ಲಿ ಬರುವ ಕಡಪ (ಕೇರಳ) ರಾಜ್ಯಕ್ಕೆ ಪ್ರವೇಶ ದ್ವಾರವೂ ಆಗಿತ್ತು. 

Advertisement

ಗೋಳ್ತಮಜಲು ಗ್ರಾಮದ ಕೇಂದ್ರವಾಗಿರುವ ಕಲ್ಲಡ್ಕ ಜಂಕ್ಷನ್‌ ಕೋಮು ಸೂಕ್ಷ್ಮ ಪ್ರದೇಶವಾಗಿಯೂ ಗುರುತಿಸಿಕೊಂಡಿದೆ. ಸಂಚಾರ ಅಡಚಣೆ, ಸತತ ಅಪಘಾತ, ಘರ್ಷಣೆಗೆ ಮೂಲವಾಗಿ ನಿತ್ಯ ಪೊಲೀಸ್‌ ತುಕಡಿಯೊಂದು ಠಿಕಾಣಿ ಹೂಡಿರುವ ಜಂಕ್ಷನ್‌ ಕೂಡ ಹೌದು. 

ಬಸ್‌ ತಂಗುದಾಣ
ಕಲ್ಲಡ್ಕದಲ್ಲಿ ಹಲವು ಸಾರ್ವಜನಿಕ ಸೌಲಭ್ಯಗಳ ತುರ್ತು ಅಗತ್ಯವಿದೆ. ಅವುಗಳಲ್ಲಿ ಬಸ್‌ ತಂಗುದಾಣಕ್ಕೆ ಮೊದಲ ಆದ್ಯತೆ. ದಿನವೊಂದಕ್ಕೆ ನೂರಾರು ಸರಕಾರಿ ಬಸ್‌, ಖಾಸಗಿ ಬಸ್‌ ಗಳು ಕಲ್ಲಡ್ಕದ ಮೂಲಕ ಸಂಚರಿಸುತ್ತವೆ. ಹಾಗೆಯೇ ಸರ್ವೀಸ್‌ ಕಾರು, ರಿಕ್ಷಾಗಳಿಗೂ ಸಮರ್ಪಕ ಪಾರ್ಕಿಂಗ್‌ ಸೌಲಭ್ಯ ಬೇಕು. ತ್ಯಾಜ್ಯ ವಿಲೇವಾರಿ, ಅತಿಕ್ರಮಣದ ಸಮಸ್ಯೆಗೆ ಪರಿಹಾರ ಎರಡನೆಯದು. ಹೆದ್ದಾರಿ ಬದಿಯನ್ನು ತೀರಾ ಇಕ್ಕಟ್ಟುಗೊಳಿಸಿರುವಂತಹ ಅಂಗಡಿ ಮುಂಗಟ್ಟುಗಳನ್ನು ಹಿಂದಕ್ಕೆ ಸರಿಸಬೇಕು. ರಸ್ತೆ ಅಂಚಿನಲ್ಲಿರುವ ತ್ಯಾಜ್ಯಕ್ಕೆ ಮುಕ್ತಾಯ ಹಾಕಬೇಕು. 

ಏನೆಲ್ಲ ಬೇಕು?
ಬಸ್‌ ನಿಲ್ದಾಣ:
ಕಲ್ಲಡ್ಕಕ್ಕೆ ಸುಸಜ್ಜಿತ ಬಸ್‌ ನಿಲ್ದಾಣ ಬೇಕು. ಅಲ್ಲಿ ಕುಡಿಯುವ ನೀರು, ಶೌಚಾಲಯ ಇತ್ಯಾದಿ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ವಿಟ್ಲಕ್ಕೆ, ಪುತ್ತೂರು-ಉಪ್ಪಿನಂಗಡಿ ಕಡೆಗೆ ರಸ್ತೆ ಸೂಚಕ ಫಲಕ ಬೇಕು. ವಿಪರೀತ ಏರುತಗ್ಗು ಇರುವ ರಸ್ತೆ ಅಂಚುಗಳನ್ನು ಮುಚ್ಚಿ, ಚರಂಡಿಗಳನ್ನು ನಿರ್ಮಿಸಬೇಕು. ವಾಹನಗಳು ರಸ್ತೆಯಲ್ಲಿಯೇ ನಿಲ್ಲದಂತೆ ಕ್ರಮ ಕೈಗೊಳ್ಳಬೇಕು.

ಸ್ಥಳಾವಕಾಶ ವಿಸ್ತರಣೆ: ಅಂಗಡಿ ಮುಂಗಟ್ಟುಗಳ ಎದುರು ಸಾಕಷ್ಟು ಸ್ಥಳಾವಕಾಶ ಇದೆ. ಇದನ್ನೇ ಬಳಸಿಕೊಂಡು ರಸ್ತೆಯನ್ನು ವಿಸ್ತರಿಸಿದರೆ ವಾಹನ ನಿಲುಗಡೆಯಿಂದ ಉಂಟಾಗುವ ದಟ್ಟಣೆ ಕಡಿಮೆಯಾಗಬಲ್ಲುದು. ಫುಟ್‌ಪಾತ್‌, ಅಂಡರ್‌ಪಾಸ್‌ ಅಥವಾ ಮೇಲ್ಸೇತುವೆ ನಿರ್ಮಾಣ ಮುಂದಿನ ದಿನಗಳಲ್ಲಿ ಅವಶ್ಯ.

Advertisement

ಪೊಲೀಸ್‌ ಠಾಣೆ: ಕೋಮು ಸೂಕ್ಷ್ಮ ಪ್ರದೇಶ ಕಲ್ಲಡ್ಕಕ್ಕೆ ಪೊಲೀಸ್‌ ಠಾಣೆ ಅತೀ ಅಗತ್ಯ. ಒಂದು ದಶಕಗಳಷ್ಟು ಹಳೆಯದಾದ ಈ ಬೇಡಿಕೆಯನ್ನು ಈಡೇರಿಸಲು ಇನ್ನಷ್ಟು ವಿಳಂಬಿಸಬಾರದು.

ಮೀನು ಮಾರುಕಟ್ಟೆ ಸ್ಥಳಾಂತರ: ರಸ್ತೆ ಬದಿಯಲ್ಲಿ ಇರುವ ಮೀನು ಮಾರುಕಟ್ಟೆಯನ್ನು ಸ್ವಲ್ಪ ಒಳ ಪ್ರದೇಶಕ್ಕೆ ಸ್ಥಳಾಂತರಿಸಿ ಸುಸಜ್ಜಿತಗೊಳಿಸಿದರೆ ಗ್ರಾಹಕರ ವಾಹನ ನಿಲುಗಡೆಯಿಂದ ಈಗ ಉಂಟಾಗುತ್ತಿರುವ ದಟ್ಟಣೆ ಮತ್ತು ತ್ಯಾಜ್ಯ ಸಮಸ್ಯೆ ಎರಡನ್ನೂ ಪರಿಣಾಮಕಾರಿಯಾಗಿ ನಿಭಾಯಿಸಬಹುದು.

ಸರಕಾರಿ ಆಸ್ಪತ್ರೆ: ಸುಸಜ್ಜಿತವಾದ, ಆಧುನಿಕ ಸೌಕರ್ಯಗಳನ್ನು ಒಳಗೊಂಡ ಸರಕಾರಿ ಆಸ್ಪತ್ರೆಯೂ ಅಷ್ಟೇ ಅಗತ್ಯ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ವಾಹನ ನಿಲುಗಡೆ ಇವನ್ನೆಲ್ಲ ವ್ಯವಸ್ಥಿತವಾಗಿ ಒದಗಿಸಿದರೆ ಕಲ್ಲಡ್ಕ ಜಂಕ್ಷನ್‌ನ ಪ್ರಗತಿಗೆ ವೇಗ ಸಿಗಬಹುದು.

ವ್ಯವಸ್ಥಿತ ಸಂತೆ ಮಾರುಕಟ್ಟೆ: ಈಗ ಸಂತೆ ಮಾರುಕಟ್ಟೆ ಶಿಥಿಲ ಕಟ್ಟಡದಲ್ಲಿ ನಡೆಯುತ್ತದೆ. ಇದು ಅಭಿವೃದ್ಧಿ ಪಡಿಸಿ ಸ್ಥಳೀಯ ಕೃಷಿಕರಿಗೆ ಪ್ರೋತ್ಸಾಹ ಹೆಚ್ಚಿಸಿದರೆ ಸ್ಥಳೀಯ ಕೃಷಿ ಆರ್ಥಿಕತೆಗೆ ಚುರುಕು ಸಿಗಲು ಸಾಧ್ಯ.

ಗ್ರಾಮಗಳು
ಗೋಳ್ತಮಜಲು, ವೀರಕಂಭ, ಬಾಳ್ತಿಲ, ಬರಿಮಾರು, ಕಡೇಶಿವಾಲಯ, ಮಾಣಿ, ಬಾಳೆಪುಣಿ, ಇರಾ, ಮಂಚಿ, ಬಿಳಿಯೂರು, ಪೆರಾಜೆ, ಅನಂತಾಡಿ, ಬೋಳಂತೂರು, ಕೊಳ್ನಾಡು, ಕರೋಪಾಡಿ, ಕೆದಿಲ, ವಿಟ್ಲಪಟ್ನೂರು, ಇಡ್ಕಿದು ಸಹಿತ ನೆರೆಕರೆಯ ಅನೇಕ ಗ್ರಾಮಗಳ ಜನರು ದೈನಂದಿನ ವ್ಯವಹಾರಕ್ಕೆ ಕಲ್ಲಡ್ಕವನ್ನು ಆಶ್ರಯಿಸುತ್ತಾರೆ. 

ಇಚ್ಛಾಶಕ್ತಿ ಬೇಕು
ಅಭಿವೃದ್ಧಿ ಹೊಂದುವ ಹಲವು ಅವಕಾಶಗಳನ್ನು ಕಲ್ಲಡ್ಕ ಹೊಂದಿದೆ. ನಗರ ಪಂಚಾಯತಾಗಿ ಬೆಳೆಯುವ ಚೈತನ್ಯ ಇಲ್ಲಿ ಇದೆ. ಅವಕಾಶಗಳನ್ನು ಸರಿಯಾಗಿ ಗುರುತಿಸಿ ಉಪಯೋಗಿಸಿಕೊಂಡು ಮುನ್ನಡೆಯಬೇಕಾಗಿರುವುದು ಅಗತ್ಯ

ತಿರುವು ಸಮಸ್ಯೆ 
ವಾಹನಗಳು ಕಲ್ಲಡ್ಕ ಜಂಕ್ಷನ್‌ನಲ್ಲಿ ವಿಟ್ಲದ ಕಡೆಗೆ ತಿರುವು ಪಡೆಯುವಲ್ಲಿ ಗೊಂದಲ ಎದುರಾಗುತ್ತದೆ. ಪೊಲೀಸರು ಇಲ್ಲಿ ಅಳವಡಿಸಿರುವ ಬ್ಯಾರಿಕೇಡ್‌ ಗಳು ಸಂಚಾರ ನಿಯಂತ್ರಿಸುತ್ತವೆ ಹೌದಾದರೂ ಅವನ್ನು ವಾಹನ ದಟ್ಟಣೆಯ ಸಂದರ್ಭದಲ್ಲಿ ಬದಿಗೆ ಸರಿಸುವುದು ಉತ್ತಮ. ಕಲ್ಲಡ್ಕ ಶ್ರೀರಾಮ ಶಾಲೆಯ ಕಡೆಯಿಂದ ಬರುವ ಬಾಳ್ತಿಲ ಕುರ್ಮಾನು ರಸ್ತೆಯು ಜಂಕ್ಷನ್‌ನಲ್ಲಿ ಸೇರುತ್ತವೆ. ಇಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ರಬ್ಬರ್‌ ರಸ್ತೆ ಉಬ್ಬುಗಳನ್ನು ಬಳಸುವುದು ಹೆಚ್ಚು ಸುರಕ್ಷಿತ. ಮುಂದೆ ಹೆದ್ದಾರಿ ಚತುಷ್ಪಥಗೊಳಿಸುವ ಸಂದರ್ಭದಲ್ಲಿ ಅಂಡರ್‌ಪಾಸ್‌ ಅಥವಾ ಓವರ್‌ಬ್ರಿಡ್ಜ್ ಒದಗಿಸಿದರೆ ರಸ್ತೆ ದಾಟುವ ಗೊಂದಲ ಪರಿಹಾರ ಕಾಣುತ್ತದೆ. 

ವಿಸ್ತರಣೆ
ಕಲ್ಲಡ್ಕ ಜಂಕ್ಷನ್‌ ರಾ.ಹೆ. ಇಲಾಖೆಯಿಂದ ವಿಸ್ತರಣೆ ಆಗುವುದಕ್ಕೆ ಈಗಾಗಲೇ ಪ್ರಸ್ತಾವನೆ ಹೋಗಿದೆ. ಅಭಿವೃದ್ಧಿ ಹಂತದಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಗ್ರಾ.ಪಂ.ನಿಂದ ಒದಗಿಸಲಾಗುವುದು. ಬಹುಗ್ರಾಮ ಕುಡಿಯುವ ನೀರು ಯೋಜನೆ, ಗುಣಮಟ್ಟದ ವಿದ್ಯುತ್‌ ಪೂರೈಕೆ ಯೋಜನೆ ಅನುಷ್ಠಾನದಲ್ಲಿ ಇದೆ. ಕಲ್ಲಡ್ಕ ಜಂಕ್ಷನ್‌ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ ಅಗತ್ಯ.
 -ಜಯಲಕ್ಷ್ಮೀ ರಾವ್‌ ಅಧ್ಯಕ್ಷರು, ಗೋಳ್ತಮಜಲು ಗ್ರಾ. ಪಂ. 

ಹೊಸ ಠಾಣೆ
ಕಲ್ಲಡ್ಕದಲ್ಲಿ ಬಂಟ್ವಾಳ ನಗರ, ಗ್ರಾಮಾಂತರ, ವಿಟ್ಲ ಠಾಣಾ ವ್ಯಾಪ್ತಿಯ ಕೆಲವು ಗ್ರಾಮಗಳನ್ನು ಸೇರಿಸಿ ಹೊಸ ಠಾಣೆ ಅನುಷ್ಠಾನಕ್ಕೆ ತರುವ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಿದೆ. ಈಗಾಗಲೇ ಇಲ್ಲಿ ಪೊಲೀಸ್‌ ಇಲಾಖೆ ಒಂದು ಔಟ್‌ಪೋಸ್ಟ್‌ ಹೊಂದಿದೆ. ರಾತ್ರಿ ಸೂಕ್ತ ಬೆಳಕಿನ ವ್ಯವಸ್ಥೆ, ಸಿಸಿ ಕೆಮರಾ, ಹೆದ್ದಾರಿ ವೀಕ್ಷಣಾ ಗೋಪುರ ಬೇಕಾಗಿದೆ.
-ಚಂದ್ರಶೇಖರ್‌
ಎಸ್‌ಐ, ಬಂಟ್ವಾಳ ನಗರ ಠಾಣೆ

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next