ಮಂಗಳೂರು: ಮಹಮ್ಮದ್ ಅಶ್ರಫ್ ಕೊಲೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕೋಮು ದ್ವೇಷವನ್ನು ಕಾರುವ ಸಂಘ – ಪರಿವಾರದ ಕಾರ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಶೇಷ ಕಾನೂನು ಪಾಲನಾ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಎಸ್‌ಡಿಪಿಐ ಪಕ್ಷದ ವತಿಯಿಂದ ಎಲ್ಲ ಸಂಘ – ಸಂಸ್ಥೆಗಳನ್ನು ಸೇರಿಸಿ ಜಿಲ್ಲೆಯ ಸಾಮರಸ್ಯಕ್ಕಾಗಿ ಜನತೆಯ ಒಕ್ಕೂಟ ಎಂಬ ಘೋಷಣೆಯೊಂದಿಗೆ ‘ಕಲ್ಲಡ್ಕ ಚಲೋ’ ಬೃಹತ್ ಜನಾಂದೋಲನವನ್ನು ರೂಪಿಸಲಾಗುವುದು ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಎಚ್ಚರಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾಂದೋಲನದೊಂದಿಗೆ ಹೆದ್ದಾರಿ ಬಂದ್ ಮತ್ತು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಯಂತಹ ಬೃಹತ್ ಸ್ವರೂಪದ ಪ್ರತಿಭಟನೆಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು. ಅಶ್ರಫ್ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳು ಮತ್ತು ತಲೆ ಮರೆಸಿಕೊಂಡಿರುವ ಭರತ್ ಕುಮಾರ್ ಸೇರಿಕೊಂಡು ಮಾತ್ರ ಮಾಡಿರುವ ಕೃತ್ಯವಲ್ಲ. ಈ ಕೊಲೆಯಲ್ಲಿ ನೇರ ಭಾಗಿಯಾಗಿರುವ ವ್ಯಕ್ತಿಗಳು ಬಂಧಿತರಾಗಿದ್ದರೂ ಕೊಲೆಯ ಮೊದಲು ಕೋಮು ದ್ವೇಷದ ಮೂಲಕ ಪ್ರಚೋದನೆ ನೀಡಿದವರು ಸೇರಿ ಆರೋಪಿಗಳ ಸಂಖ್ಯೆ ಇನ್ನೂ ಹೆಚ್ಚು ಇದೆ. ಆದರೆ ಪೊಲೀಸ್ ಅಧಿಕಾರಿಗಳು ಮಾತ್ರ ಈ ಕೊಲೆಯ ಬಗ್ಗೆ ಆಳವಾಗಿ ತನಿಖೆ ನಡೆಸುವಂತೆ ಕಾಣುತ್ತಿಲ್ಲ. ಕೊಲೆ ಆರೋಪಿಗಳನ್ನು ಕೇವಲ 6ಕ್ಕೆ ಸೀಮಿತಗೊಳಿಸುವಂತೆ ತೋರುತ್ತಿರುವುದಲ್ಲದೇ ದುರ್ಬಲವಾದ ಎಫ್‌ಐಆರ್ ಮತ್ತು ಹೇಳಿಕೆಗಳನ್ನು ದಾಖಲಿಸಿರುವುದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ದಾಖಲೆಯಿಂದ ತಿಳಿದುಬರುತ್ತದೆ ಎಂದು ರಿಯಾಝ್ ಆರೋಪಿಸಿದರು.
ಈ ಕೊಲೆ ಪ್ರಕರಣ ಕೇವಲ 6 ಮಂದಿ ಸೇರಿ ಚರ್ಚೆ ಮಾಡಿ ಒಂದು ಸಣ್ಣ ಅವಧಿಯಲ್ಲಿ ಮಾಡಿದ್ದಲ್ಲ. ಏಕೆಂದರೆ, ಈ ಕೊಲೆ ನಡೆಯುವ 3 ತಿಂಗಳ ಮೊದಲು ಬಂಟ್ವಾಳ ಆಸುಪಾಸಿನಲ್ಲಿ ಮುಸ್ಲಿಮರ ಮೇಲೆ ದಾಳಿ ಸಂಬಂಧಿಸಿ ಹಲವು ಪ್ರಕರಣಗಳು ನಡೆದಿವೆ. ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಭರತ್ ಕುಮಾರ್‌ನೊಂದಿಗೆ ಜೂ. 15ರಂದು ಮಂಗಳೂರಿನಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಶರಣ್ ಪಂಪ್‌ವೆಲ್, ಪದ್ಮನಾಭ ಕೊಟ್ಟಾರಿ ಮತ್ತು ಇತರ ಮುಖಂಡರು ಸೇರಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಇದನ್ನು ನೋಡಿದರೆ ಭರತ್ ಕುಮಾರ್‌ನನ್ನು ಇದೇ ನಾಯಕರು ಸೇರಿ ಕೊಲೆ ಪ್ರಕರಣದಲ್ಲಿ ತಮ್ಮ ಬಣ್ಣ ಬಯಲಾಗಬಹುದೆಂಬ ಭಯದಿಂದ ತಲೆ ಮರೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದಲ್ಲದೇ, ಆರೋಪಿಗೆ ಆಶ್ರಯವನ್ನು ನೀಡಿದ್ದಾರೆ ಎಂದು ಆರೋಪಿಸಿರುವ ರಿಯಾಝ್ ಫರಂಗಿಪೇಟೆ, ಜಿಲ್ಲೆಯ ದಕ್ಷ ಪೊಲೀಸರು ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗದೆ ಕೊಲೆ ಆರೋಪಿಯೊಂದಿಗೆ ನೇರ ಸಂಪರ್ಕದಲ್ಲಿದ್ದ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‌ವೆಲ್ ಅವರನ್ನು ಕೂಡಲೇ ಬಂಧಿಸಿ, ವಿಚಾರಿಸಬೇಕು ಎಂದು ರಿಯಾಝ್ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೆ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಥಾವುಲ್ಲಾ ಜೋಕಟ್ಟೆ, ಬಂಟ್ವಾಳ ಪುರಸಭಾ ಸದಸ್ಯ ಇಕ್ಬಾಲ್ ಐ.ಎಂ.ಆರ್., ಪಾಲಿಕೆ ಸದಸ್ಯ ಅಯಾಝ್ ಕೆ., ಜಿಲ್ಲಾ ಸಮಿತಿ ಸದಸ್ಯ ಸಾಹುಲ್ ಎಸ್.ಎಚ್. ಉಪಸ್ಥಿತರಿದ್ದರು.