Advertisement

ಹಳ್ಳಿಗಳಲ್ಲಿ ಮತ್ತೆ ಹೆಡೆ ಬಿಚ್ಚಿದ ಕಳ್ಳಭಟ್ಟಿ ದಂಧೆ

11:16 AM Apr 21, 2020 | Suhan S |

ಹುಬ್ಬಳ್ಳಿ: ಕಲಘಟಗಿ ತಾಲೂಕಿನಾದ್ಯಂತ ಕಳ್ಳಭಟ್ಟಿ ಸಾರಾಯಿ ದಂಧೆ ಸಕ್ರಿಯವಾಗಿದೆಯೇ ಎಂಬ ಅನುಮಾನ ಮೂಡಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಇದು ಮದ್ಯವಸ್ಯನಿಗಳ ಮೇಲೆ ತುಂಬಾ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Advertisement

ಹಿಂದೆ ಹುಬ್ಬಳ್ಳಿಯ ಕೆಲ ಕೊಳಚೆ ಪ್ರದೇಶಗಳಲ್ಲಿ ಪ್ರಮುಖವಾಗಿ ಸೆಟ್ಲಮೆಂಟ್‌ನಲ್ಲಿ ಕಳ್ಳಭಟ್ಟಿ ದಂಧೆ ಜೋರಾಗಿತ್ತು.ಗೋವಾ, ಮಹಾರಾಷ್ಟ್ರದಿಂದ ಅಕ್ರಮವಾಗಿ ಸ್ಪಿರಿಟ್‌ ತಂದು ಮದ್ಯ ತಯಾರಿಸುತ್ತಿದ್ದರು. ಇವರಲ್ಲಿ ಕೆಲವರು ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದರು. ಆದರೆ ಪೊಲೀಸರು ಹಾಗೂ ಅಬಕಾರಿ ಇಲಾಖೆಯವರ ನಿರಂತರ ದಾಳಿಯಿಂದ ತಮ್ಮ ದಂಧೆಗೆ ಹೊಡೆತ ಬೀಳತೊಡಗಿತು. ಇದನ್ನರಿತ ಇಲ್ಲಿ ಕಳ್ಳಭಟ್ಟಿ ಸಾರಾಯಿ ದಂಧೆ ನಡೆಸುತ್ತಿದ್ದ ಬಹುತೇಕರು ತಮ್ಮ ದಂಧೆಯನ್ನು ಕಲಘಟಗಿ ತಾಲೂಕಿನ ಗ್ರಾಮೀಣ ಭಾಗದ ನಿರ್ಜನ ಪ್ರದೇಶಗಳಿಗೆ ಸ್ಥಳಾಂತರಿಸಿದ್ದಾರೆಂದು ಹೇಳಲಾಗುತ್ತಿದೆ.

ಕೆಲವರು ಹೇಳುವ ಪ್ರಕಾರ ಧಾರವಾಡ ಜಿಲ್ಲೆ ಸೇರಿದಂತೆ ಕಲಘಟಗಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟ ಜೋರಾಗಿದೆ. ತಾಂಡಾ ಹಾಗೂ ಗ್ರಾಮದ ಹೊರವಲಯದ ಪ್ರದೇಶಗಳಲ್ಲಿ ಕಳ್ಳಭಟ್ಟಿ ತಯಾರಿಸುವವರ ಜಾಲವೇ ಇದೆ. ಕಲಘಟಗಿ ತಾಲೂಕಿನಲ್ಲಿ 9-10 ತಾಂಡಾಗಳಿದ್ದು, ಗಂಭ್ಯಾಪೂರ ಮಾತ್ರವಲ್ಲದೆ ಉಗ್ಗಿನಕೇರಿ, ಹಿರೇಹೊನ್ನಳ್ಳಿ, ಕುರುವಿನಕೊಪ್ಪ, ಮುತ್ತಗಿ, ಗಳಗಿ ಹುಲಕೊಪ್ಪ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟ ಜೋರಾಗಿದೆ ಎಂದು ತಿಳಿದು ಬಂದಿದೆ.

ಮದ್ಯ ಸಿಗದೇ ಸ್ಯಾನಿಟೈಜರ್‌ಗೆ ಮೊರೆ ಹೋದ್ರೆ: ದೇಶಾದ್ಯಂತ ಕೊರೊನಾ ವೈರಸ್‌ ಹರಡುತ್ತಿದ್ದಂತೆ ಮಾ. 22ರಂದು ಜನತಾ ಕರ್ಫ್ಯೂ ಹಾಗೂ 24ರಿಂದ ಲಾಕ್‌ ಡೌನ್‌ ಆರಂಭವಾದಾಗಿನಿಂದ ಮದ್ಯದಂಗಡಿ, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಬಂದ್‌ ಆಗಿವೆ. ಅಂದಿನಿಂದ ಇಂದಿನವರೆಗೂ ಮದ್ಯದಂಗಡಿಗಳು ತೆರೆದಿಲ್ಲ. ಆವಾಗಿನಿಂದ ಮದ್ಯವ್ಯಸನಿಗಳು ಮದ್ಯಕ್ಕಾಗಿ ಇನ್ನಿಲ್ಲದ ರೀತಿ ಚಡಪಡಿಸುತ್ತಿದ್ದಾರೆ. ಮದ್ಯಕ್ಕೆ ಪರ್ಯಾಯವಾಗಿ ಕೆಲವರು ಕಡಿಮೆ ದರಕ್ಕೆ ದೊರೆಯುವ ಸ್ಯಾನಿಟೈಸರ್‌ ಸೇವಿಸುತ್ತಿದ್ದಾರೆಂದು ತಿಳಿದು ಬಂದಿದ್ದು, ಇದರಲ್ಲಿ ಅಲ್ಕೋಹಾಲ್‌ ಪ್ರಮಾಣ ತೀರ ಕಡಿಮೆಯಿದ್ದು, ಎಥೇನಾಲ್‌ ಪ್ರಮಾಣ ಅಧಿಕವಾಗಿರುತ್ತದೆ. ಹೀಗಾಗಿ ಇದನ್ನು ಸೇವಿಸುವುದು ಹಾಗೂ ಕಳ್ಳಭಟ್ಟಿ ಸಾರಾಯಿ ಕುಡಿಯುವುದು ಸಹ ಆರೋಗ್ಯಕ್ಕೆ ತೀವ್ರ ಹಾನಿಕಾರಕ ಎಂದು ಹೇಳುತ್ತಾರೆ ವೈದ್ಯರು. ಗಂಭ್ಯಾಪೂರದಲ್ಲಿ ಬಸವರಾಜ ಕುರುವಿನಕೊಪ್ಪ ಸ್ಯಾನಿಟೈಸರ್‌ ಕುಡಿದೆ ಮೃತಪಟ್ಟಿದ್ದಾರೆ. ಇವರ ಮನೆಯಲ್ಲಿ ಮೂರು ಸ್ಯಾನಿಟೈಸರ್‌ ಖಾಲಿ ಬಾಟಲಿಗಳು ದೊರೆತಿವೆ ಎಂದು ಮೂಲಗಳು ತಿಳಿಸಿವೆ.

ಅಷ್ಟೊಂದು ಸ್ಯಾನಿಟೈಜರ್‌ ಎಲ್ಲಿಂದ ಬಂತು: ಲಾಕ್‌ಡೌನ್‌ದಿಂದ ಮದ್ಯ ಮಾರಾಟ ಸ್ಥಗಿತಗೊಂಡಾಗಿನಿಂದ ಬಹುತೇಕ ಮದ್ಯವ್ಯಸನಿಗಳು ಮದ್ಯಕ್ಕಾಗಿ ಚಡಪಡಿಸುತ್ತಿದ್ದಾರೆ. ಅದೇ ರೀತಿ ಗಂಭ್ಯಾಪೂರ ಗ್ರಾಮದಲ್ಲಿನ ಸುಮಾರು 15ಕ್ಕೂ ಅಧಿಕ ಮದ್ಯವ್ಯಸನಿಗಳು ಸಹಿತ ಮದ್ಯ ಸಿಗದಿದ್ದಕ್ಕೆ ಸ್ಯಾನಿಟೈಸರ್‌ ಬಳಸುತ್ತಿದ್ದರೆಂದು ಹೇಳಲಾಗುತ್ತಿದೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಅವರಿಗೆ ಸ್ಯಾನಿಟೈಸರ್‌ ಎಲ್ಲಿಂದ ದೊರೆಯಿತು ಎಂಬ ಅನುಮಾನಗಳು ಮೂಡುತ್ತಿವೆ. ಈಗಾಗಲೇ ಸ್ಯಾನಿಟೈಸರ್‌ ಕುಡಿದ ಕೆಲವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

Advertisement

ಪೊಲೀಸ್‌ ಹಾಗೂ ಅಬಕಾರಿ ಇಲಾಖೆಯವರು ಇಂತಹ ಕಳ್ಳಭಟ್ಟಿ ಸಾರಾಯಿ ಮತ್ತು ಅಕ್ರಮವಾಗಿ ಮದ್ಯ ಮಾರಾಟ ಮಾಡುವ ದಂಧೆಕೋರರ ಮೇಲೆ ನಿಗಾ ವಹಿಸಬೇಕು. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕಳ್ಳಭಟ್ಟಿ ಸಾರಾಯಿ ಕುಡಿದು ಅವಘಡಗಳು ಸಂಭವಿಸುತ್ತಲೇ ಇರುತ್ತವೆ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಕಲಘಟಗಿ ತಾಲೂಕು ಗಂಭ್ಯಾಪೂರ ಗ್ರಾಮದಲ್ಲಿ ಸ್ಯಾನಿಟೈಸರ್‌ ಸೇವಿಸಿ ವ್ಯಕ್ತಿ ಹಾಗೂ ಮಹಿಳೆ ಮೃತಪಟ್ಟಿದ್ದಾರೆಂದು ಅವರ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಕುರಿತು ಸರಕಾರಿ ವೈದ್ಯರೆ ಖಚಿತಪಡಿಸಿದ್ದಾರೆ. ಅಲ್ಲದೆ ಮೃತಪಟ್ಟವರ ಮನೆಯಿಂದಲೂ ಸ್ಯಾನಿಟೈಸರ್‌ ಖಾಲಿ ಬಾಟಲಿಗಳು ದೊರೆತಿವೆ. ಗ್ರಾಮದಲ್ಲಿ ಹೆಚ್ಚಿನ ಜನರು ಸ್ಯಾನಿಟೈಸರ್‌ ಕುಡಿದಿದ್ದಾರೆ ಎಂಬುದು ಗಮನಕ್ಕೆ ಬಂದಿಲ್ಲ. ಯಾವುದೇ ಕಾರಣಕ್ಕೂ ಸ್ಯಾನಿಟೈಸರ್‌ ಕುಡಿಯಬೇಡಿ. ಅದು ಅಲ್ಕೋಹಾಲ್‌ ಅಲ್ಲ. ಅದು ಹಾನಿಕಾರಕವಾಗಿದೆ ಎಂದು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಕಲಘಟಗಿ ತಾಲೂಕಿನಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟ ತಡೆಗಟ್ಟಲಾಗಿದೆ. ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು.ವರ್ತಿಕಾ ಕಟಿಯಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.

 

-ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next