ಜಾಗತಿಕ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 800 ಕೋ. ರೂ. ಅಧಿಕ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಚಿತ್ರ ಎನಿಸಿಕೊಂಡು ಎಲ್ಲೆಡೆ ಚರ್ಚೆಯಾಗುತ್ತಿರುವ ‘ಕಲ್ಕಿ -2898’ ಸಿನೆಮಾದ ನಿರ್ದೇಶಕ ನಾಗ್ ಅಶ್ವಿನ್ ಕೃಷ್ಣನೂರು ಉಡುಪಿಯ ನಂಟು ಹೊಂದಿದ್ದಾರೆ.
ಜಾಗತಿಕ ಮಟ್ಟದಲ್ಲಿ ಉತ್ತಮ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಮಣಿಪಾಲ ಮಾಹೆಯಲ್ಲಿ ಕಲಿತವರು ಶಿಕ್ಷಣ ಹೊರತಾಗಿಯೂ ಕಲೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧಕರಾಗಿದ್ದಾರೆ. ಹಾಗೇ ನಾಗ್ ಅಶ್ವಿನ್ ಅವರು ಮಣಿಪಾಲ ಎಂಐಸಿ(ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್)ನಲ್ಲಿ ಮೂರು ವರ್ಷ ಬಿಎ ಜರ್ನಲಿಸಂ ಆ್ಯಂಡ್ ಮಾಸ್ ಕಮ್ಯೂನಿಕೇಶನ್ ಓದಿ ಪದವಿ ಪಡೆದಿದ್ದಾರೆ.
ನಾಗ್ ಅಶ್ವಿನ್ ತನ್ನ ವಿದ್ಯಾಾರ್ಥಿಯಾಗಿದ್ದು, ಅವರು 2001ರಿಂದ 2004ರಲ್ಲಿ ಮಣಿಪಾಲದಲ್ಲಿ ನೆಲೆಸಿ ಶಿಕ್ಷಣವನ್ನು ಪೂರೈಸಿದ್ದರು. ಯಾವುದೇ ವಿಷಯಗಳಲ್ಲಿಯೂ ಅತೀಯಾದ ಚಟುವಟಿಕೆ, ತೊಡಗಿಸಿಕೊಳ್ಳುವಿಕೆ ಇಲ್ಲದೇ ಸರಳ ಮತ್ತು ಸಾಮಾನ್ಯ ವಿದ್ಯಾರ್ಥಿಯಾಗಿ ತಮ್ಮ ಶಿಕ್ಷಣವನ್ನು ಪೂರೈಸಿದ್ದರು ಎಂದು ಮಣಿಪಾಲ ಎಂಐಸಿ ಮೀಡಿಯ ಸ್ಟಡೀಸ್‌ನ ಬಿಎಂ ಪ್ರೋಗ್ರಾಮ್ ಕೋಆರ್ಡಿನೇಟರ್ ಡಾ. ಶುಭಾ ಎಚ್. ಎಸ್. ತಮ್ಮ ಅನಿಸಿಕೆ ಹಂಚಿಕೊಂಡರು.
ಪಠ್ಯಕ್ಕೆ ಸಂಬಂಧಿಸಿದ ವಿಷಯಗಳಾಯಿತು, ಅವರಾಯಿತು. ಉತ್ತಮ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದರು. ಉಡುಪಿ-ಮಣಿಪಾಲ ಪರಿಸರ ಜೀವನದಲ್ಲಿ ಅವರಿಗೆ ವಿಶಿಷ್ಟ ಅನುಭವಗಳನ್ನು ನೀಡಿದೆ. ಸರಳ ವಿದ್ಯಾರ್ಥಿಯ ಇಂದಿನ ಅದ್ಬುತ ಪ್ರತಿಭೆ ಕಂಡು ಇಲ್ಲಿನ ಶಿಕ್ಷಕರೇ ಅಚ್ಚರಿ ವ್ಯಕ್ತಪಡಿಸಿದ್ದಾಾರೆ.
ವಿದ್ಯಾರ್ಥಿಯಾದ ಕಲ್ಕಿ ಸಿನಿಮಾದ ಕಥೆ ಮಹಾಭಾರತದಿಂದ ಆರಂಭಗೊಂಡು ಭವಿಷ್ಯದ 2898 ಇಸವಿಯ ಟೈಮ್‌ಲೈನ್‌ನಲ್ಲಿ ಚಿತ್ರಕಥೆ ಹೇಳಲಾಗುತ್ತದೆ. ಮಹಾಭಾರತ ಪಾತ್ರಗಳ ಕಥೆ ಆಯ್ದುಕೊಂಡು ಭವಿಷ್ಯದಲ್ಲಿ ನಡೆಯುವ ಘಟನೆಯೊಂದಕ್ಕೆ ಆ ಪಾತ್ರಗಳನ್ನು ತಳುಕು ಹಾಕಿಕೊಂಡು ಕಥೆ ರೂಪಿಸಿದ ರೀತಿಯೇ ಅನನ್ಯ. ಕುರುಕ್ಷೇತ್ರದ ಯುದ್ಧಭೂಮಿಯಿಂದ ಶುರುವಾಗುವ ಕಥೆಯು ಕಲಿಯುಗದ ಅಂತ್ಯದವರೆಗೂ ಸಾಗುತ್ತದೆ. ಭೂಮಿಯ ಮೊದಲ ನಗರ ಕಾಶಿ ಎಂಬ ಪ್ರತೀತಿ ಇದ್ದು, ಈ ನಗರವನ್ನೇ ಪ್ರಮುಖವಾಗಿ ಕೇಂದ್ರಿಕರಿಸಿ ಚಿತ್ರವನ್ನು ಕಾಲ್ಪನಿಕ ವೈಜ್ಞಾನಿಕ ನೆಲೆಯಲ್ಲಿ ರೂಪಿಸಲಾಗಿದೆ. ಚಿತ್ರದಲ್ಲಿನ ಕುರುಕ್ಷೇತ್ರದ ಯುದ್ದ ಭೂಮಿ ಆರಂಭದ ದೃಶ್ಯ ಶ್ರೀಕೃಷ್ಣ ಮತ್ತು ಅಶ್ವತ್ಥಾಮನ ಸಂಭಾಷಣೆ ವ್ಯಾಪಕ ಮೆಚ್ಚುಗೆ ಗಳಿಸಿದೆ.
ಒಟ್ಟಾರೆ ನಾಗ್ ಅಶ್ವಿನ್ ಅವರು ಭಾರತೀಯ ಚಿತ್ರರಂಗವನ್ನು ಹಾಲಿವುಡ್‌ನ ಡಿಸಿ ಮತ್ತು ಮಾರ್ವಲ್ ಯೂನಿವರ್ಸ್‌ಗೂ ಮೀರಿ ಕಲ್ಕಿ ಯೂನಿವರ್ಸ್ ರೂಪಿಸುವ ಮೂಲಕ ಭಾರತೀಯ ಚಿತ್ರರಂಗವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಸಿನಿಮಾ ವಿಶ್ಲೇಷಕರು ಬಣ್ಣಿಸಿದ್ದಾರೆ.
– ಅವಿನ್ ಶೆಟ್ಟಿ