Advertisement

ಆರ್.ಆರ್.ನಗರದ ಅನರ್ಘ್ಯ ರತ್ನ ಮುನಿರತ್ನ : ಕಲ್ಲಡ್ಕ ಪ್ರಭಾಕರ್ ಭಟ್

08:40 PM Jun 21, 2021 | Team Udayavani |

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅನರ್ಘ್ಯ ರತ್ನ ಎಂದು ಹೇಳಿರುವ ಸಂಘ ಪರಿವಾರದ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಯಶವಂತಪುರದಲ್ಲಿ ನಿರ್ಮಿಸುತ್ತಿರುವ 400 ಹಾಸಿಗೆಗಳ ಕೋವಿಡ್ ಆಸ್ಪತ್ರೆ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಸೋಮವಾರ (ಜೂನ್ 21) ಇಲ್ಲಿನ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಗಣೇಶ ಪ್ರತಿಮೆ ಪೀಠ ಸ್ಥಾಪನೆ ಕರ‍್ಯಾರಂಭಿಸಿದ ಅವರು, ಆಸ್ಪತ್ರೆಯ ಖುದ್ದು ಪರಿಶೀಲನೆ ನಡೆಸಿದರು.

ಜಾಗತಿಕ ಸಾಂಕ್ರಾಮಿಕ ಕರೋನಾ ವೈರಸ್ ಪಸರಿಸುತ್ತಿರುವ ಈ ಸಂದರ್ಭದಲ್ಲಿ ಕೋವಿಡ್‌ಗೆ ಮೀಸಲಾದ ಹೈಟೆಕ್ ಆಸ್ಪತ್ರೆ ಮತ್ತು ಆಸ್ಪತ್ರೆಗೆ ರೋಗಿಗಳನ್ನು ತ್ವರಿತವಾಗಿ ಕರೆ ತರಲು ಅನುವಾಗುವಂತೆ ‘ವೇಗದ ಮಾರ್ಗ’ ನಿರ್ಮಿಸುತ್ತಿರುವುದು ಸಕಾಲಿಕ ಕ್ರಮ ಎಂದು ಹೇಳಿದರು.

“ಮುನಿರತ್ನ” ಎಂಬ ಹೆಸರನ್ನು ಉಲ್ಲೇಖಿಸಿದ ಪ್ರಭಾಕರ್ ಭಟ್ ಅವರು, “ಮುನಿ ಎಂದರೆ ಋಷಿ, ರತ್ನ ಎಂದರೆ ಋಷಿಗಳಲ್ಲಿ ಶ್ರೇಷ್ಠರು, ತಮ್ಮ ಸುಖಃವನ್ನು ತ್ಯಜಿಸಿ ಲೋಕ ಕಲ್ಯಾಣಕ್ಕೆ ಶ್ರಮಿಸುವವರೇ ಋಷಿ ಮುನಿಗಳು, ಹೆಸರಿಗೆ ತಕ್ಕಂತೆ ಮುನಿರತ್ನ ಸಹ ತಮ್ಮ ಕ್ಷೇತ್ರದ ಜನತೆ ಒಳಿತಿಗೆ ಶ್ರಮಿಸುತ್ತಿದ್ದಾರೆ” ಎಂದು ಶ್ಲಾಘಿಸಿದರು.

ಕರೋನಾ- ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಈಡಾಗಿರುವ ತಮ್ಮ ಕ್ಷೇತ್ರದ ಜನತೆಗೆ ಆಹಾರ ಮತ್ತು ತರಕಾರಿ ಕಿಟ್ ವಿತರಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಂಘ ಪರಿವಾರದ ಹಿರಿಯ, ಆರ್.ಆರ್.ನಗರದಲ್ಲಿ ಆಹಾರ ಕಿಟ್ ವಿತರಣೆ ನಡೆಯುತ್ತಿದ್ದ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಖುದ್ದು ವೀಕ್ಷಿಸಿದರು.

Advertisement

ಅಕ್ಕಿ, ಬೇಳೆ, ಎಣ್ಣೆ, ಗೋಧಿಹಿಟ್ಟು, ರವೆ, ಟೂತ್ ಪೇಸ್ಟ್, ಸೋಪುಗಳು ಸೇರಿದಂತೆ ತಾಜಾ ತರಕಾರಿಗಳನ್ನು ವಿತರಿಸುತ್ತಿರುವುದು ಮತ್ತು ಈ ಸಂದರ್ಭದಲ್ಲಿ ನೂಕು ನುಗ್ಗಲು ಆಗದಂತೆ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಮೊಬೈಲ್- ಓಟಿಪಿ ತಂತ್ರಜ್ಞಾನದ ಮೂಲಕ ಶಿಸ್ತುಬದ್ಧವಾಗಿ ದಿನಸಿ ಕಿಟ್‌ಗಳನ್ನು ನೀಡುತ್ತಿರುವುದನ್ನು ಪರಿಶೀಲಿಸಿದ ಅವರು, ಇತರೆ ಜನಪ್ರತಿನಿಧಿಗಳಿಗೆ ಮುನಿರತ್ನ ಮಾದರಿಯಾಗಿದ್ದಾರೆ. ಎಲ್ಲ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನತೆಯನ್ನು ಇದೇ ರೀತಿ ಪ್ರೀತಿ ಅಭಿಮಾನಗಳಿಂದ ಕಂಡರೆ ದೇಶಕ್ಕೆ ಒಳಿತಾಗಲಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಶಾಸಕ ಮುನಿರತ್ನ, ಪ್ರಭಾಕರ್ ಭಟ್ ಅವರಿಗೆ ಆಹಾರ ಪದಾರ್ಥಗಳ ವಿತರಣೆ ಮತ್ತು ಆಸ್ಪತ್ರೆ ಕಾಮಗಾರಿ ಬಗ್ಗೆ ಖುದ್ದು ಮಾಹಿತಿ ನೀಡಿದರು.

ಹೈಟೆಕ್ ಆಸ್ಪತ್ರೆ!

ಆರ್.ಆರ್.ನಗರ ಕ್ಷೇತ್ರದ ಶಾಸಕ ಮುನಿರತ್ನ ಒತ್ತಾಸೆಗೆ ಪ್ರತಿಯಾಗಿ ಯಶವಂತಪುರ ಕ್ಷೇತ್ರದಲ್ಲಿ ನಿರ್ಮಿಸಲಾಗುತ್ತಿರುವ 400 ಹಾಸಿಗೆಗಳ ಕೋವಿಡ್ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡಿದ್ದು ಈ ಮೂಲಕ ಆಸ್ಪತ್ರೆ ಆಗು ಹೋಗುಗಳ ಬಗ್ಗೆ ದಿನದ 24 ಗಂಟೆಯೂ ತಾವೇ ಖುದ್ದು ನಿಗಾ ಇರಿಸುವಂತಹ ವ್ಯವಸ್ಥೆ ಮಾಡಿದ್ದಾರೆ.

ಹಳೆಯ ಹೆರಿಗೆ ಆಸ್ಪತ್ರೆ ಕಟ್ಟಡಕ್ಕೆ ಅತ್ಯಾಧುನಿಕ ಆಸ್ಪತ್ರೆ ಸೌಲಭ್ಯಗಳನ್ನು ಒದಗಿಸುತ್ತಿರುವ ಅವರು, ಲಿಫ್ಟ್, ಆಕ್ಸಿಜನ್ ಘಟಕ, ಎಕ್ಸ್ರೆ ಘಟಕಗಳನ್ನು ಈಗಾಗಲೇ ಅಳವಡಿಸಿದ್ದು, ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ “ಆನ್‌ಲೈನ್ ನಿಗಾ” ವ್ಯವಸ್ಥೆಯನ್ನು ಅಳವಡಿಸುತ್ತಿದ್ದಾರೆ.

ಕರೋನಾ ಸಂದರ್ಭದಲ್ಲಿ ರೋಗಿಗಳ ಸಂಕಷ್ಟವನ್ನು ಖುದ್ದು ವೀಕ್ಷಿಸಿ ನಿಗಾ ವಹಿಸಿ ಸ್ಥಳದಲ್ಲಿರುವ ವೈದ್ಯರು- ದಾದಿಯರಿಗೆ ಸೂಕ್ತ ನಿರ್ದೇಶನ- ಮಾರ್ಗದರ್ಶನ ನೀಡುವ ಸಲುವಾಗಿ ಆಸ್ಪತ್ರೆಯಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.

ಆತ್ಯಾಧುನಿಕ ಮಾದರಿಯ ಚಲಿಸುವ ಕ್ಯಾಮರಾಗಳು ಇದ್ದಾಗಿದ್ದು, ಶಾಸಕರು ತಮ್ಮ ಮೊಬೈಲ್‌ನಲ್ಲಿ ಆಸ್ಪತ್ರೆಯನ್ನು ವೀಕ್ಷಿಸುವ ವ್ಯವಸ್ಥೆಗೆ ನಾಂದಿಹಾಡಿದ್ದಾರೆ. ಇದರಿಂದ ರೋಗಿಗಳ ದೂರಿಗೆ ಕ್ಷಣದಲ್ಲಿ ಸ್ಪಂಧಿಸುವ ಜತೆಗೆ ಸಿಬ್ಬಂದಿ ಸಹ ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯವಾಗಲಿದೆ.

ಒಟ್ಟಾರೆ ಯಶ್ವಂತಪುರದಲ್ಲಿ ಭರದಿಂದ ನಿರ್ಮಾಣವಾಗುತ್ತಿರುವ ಕೋವಿಡ್ ಆಸ್ಪತ್ರೆ ಕಾಮಗಾರಿ ಹೊಸ ವ್ಯವಸ್ಥೆಗೆ ನಾಂದಿಹಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next