ಮಕ್ಕಳಲ್ಲಿರುವ ಸೃಜನಾತ್ಮಕ ಕಲೆ-ಕೌಶಲ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ, ತಕ್ಕ ಗುರುವಿನ ಬಳಿ ಶಿಕ್ಷಣ ಕೊಡಿಸಿದಾಗ ಅವರ ಪ್ರತಿಭೋಜ್ವಲನವಾಗುತ್ತದೆ. ಅಂತಹ ಪ್ರತಿಭೋಜ್ವಲನ ಚಿತ್ರ ಕೃತಿಗಳ ಕಲಾಪ್ರದರ್ಶನವೊಂದು ಬ್ರಹ್ಮಾವರದ ಜಿ.ಎಂ.ವಿದ್ಯಾನಿಕೇತನ ಪಬ್ಲಿಕ್‌ಸ್ಕೂಲ್‌ನಲ್ಲಿ ನಡೆಯಿತು. ಕಲಾವಿದ ಮನೋಜ್ ಪಾಂಗಾಳ ಹಾಗೂ ಕಲಾ ಶಿಕ್ಷಕಿಯರಾದ ಆಶಾ, ಉಷಾ ಅರಳು ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿ ಅವರಿಂದ ಸೃಜನಾತ್ಮಕ ಚಿತ್ರಕೃತಿಗಳನ್ನು ರಚಿಸಿಕೊಂಡು ಸ್ಟ್ರೋಕ್ಸ್ 2018 ಶೀರ್ಷಿಕೆಯಡಿ ಕಲಾಪ್ರದರ್ಶನ ನಡೆಸಿ ವಿದ್ಯಾನಿಕೇತನದೊಳಗೆ ಕಲಾನಿಕೇತನವನ್ನು ಪ್ರತಿಷ್ಠಾಪಿಸಿದರು.
ವಿಶಿಷ್ಟ ಉಮೇದ್ವಾರಿಕೆಯೊಂದಿಗೆ ಚಿತ್ರ ಕಲಾಪ್ರದರ್ಶನ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಆಯೋಜನೆಗೊಂಡಿತ್ತು. ಸ್ವತಃ ಮಕ್ಕಳೇ ತಮ್ಮ ಸೃಷ್ಟಿಯೆದುರು ತಾವು ಬೆರಗುಗೊಂಡರು. ಇನ್ನಷ್ಟು ಕಲಾಕೃತಿ ರಚಿಸಬೇಕೆಂದು ಪ್ರೇರಣೆಗೊಂಡರು. ಸ್ಟ್ರೋಕ್ಸ್ – 2018 ಹೆಸರೇ ಸೂಚಿಸುವಂತೆ ಮಕ್ಕಳ ಹೃನ್ಮನಗಳ ಭಾವಾಭಿವ್ಯಕ್ತಿ ಚಿತ್ರಗಳಲ್ಲಿ ಮೂಡಿದೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳು ರಚಿಸಿರುವ ಈ ಚಿತ್ರಗಳಲ್ಲಿ ಸೀದಾ ಸಾದಾ ರೇಖೆಗಳು, ವಿಷಯದ ನೇರ ಪ್ರಸ್ತಾಪನೆ, ನೇರ ಬಣ್ಣಗಳ ಪ್ರಸರಣ, ಮುಗ್ಧತೆ, ಪ್ರೀತಿ-ಪ್ರೇಮಗಳ ಅನಾವರಣ, ಪಶು ಪಕ್ಷಿ ಪ್ರೇಮ, ಪರಿಸರ ಕಾಳಜಿ ಎದ್ದುಕಾಣುತ್ತದೆ. ಆ ಪ್ರಾಯದಲ್ಲಿ ಗ್ರಹಿಸಬಹುದಾದಷ್ಟು ವಿಷಯಗಳ ಅಭಿವ್ಯಕ್ತಿ ಚಿತ್ರದಲ್ಲಿ ಮೂಡಿದೆ. ಮೂರ್ತ-ಅಮೂರ್ತ ಎರಡು ದೃಷ್ಟಿಯಿಂದಲೂ ವೀಕ್ಷಕರು ಚಿತ್ರಗಳನ್ನು ಗ್ರಹಿಸಬಹುದಾಗಿತ್ತು.
ಮಕ್ಕಳ ಮೆಚ್ಚಿನ ವಿಷಯಗಳಾದ ಗುಡ್ಡ-ಬೆಟ್ಟಗಳಿರುವ ನಿಸರ್ಗ, ಮಳೆಗಾಲದ ದೃಶ್ಯ, ಕಡಲತೀರ, ಕಂಬಳ, ಕೋಳಿಅಂಕ, ತನ್ನ ಮನೆ ಹಾಗೂ ಸುತ್ತಲಿನ ವಾತಾವರಣ, ನನ್ನ ತಮ್ಮ ತಂಗಿ, ನನ್ನ ಶಾಲೆ, ನನ್ನ ಅಜ್ಜಿಮನೆ, ನನ್ನ ಮೆಚ್ಚಿನ ನಾಯಿ, ದೀಪಾವಳಿ-ಕ್ರಿಸ್ಮಸ್ ಹಬ್ಬ, ಬರ್ತ್‌ಡೇ ಆಚರಣೆ, ಉತ್ಸವ-ಜಾತ್ರೆಗಳು, ತಾನು ಆಡುವ ಆಟ, ಬೆಲೂನ್ ಆಟ, ಆಟದ ಮೈದಾನ, ರಾಕೆಟ್ ಉಡಾವಣೆ, ದೇವದೇವತೆಗಳ ಚಿತ್ರಗಳು ಮೂಡಿದ್ದವು. ಅವುಗಳಿಗೆ ಮೌಂಟ್ ಹಾಕಿ ಹಿನ್ನೆಲೆ ಪರದೆಯೊಂದಿಗೆ ಅಂದವಾಗಿ ಜೋಡಿಸಲಾಗಿತ್ತು. ಕರಕುಶಲ ವಸ್ತುವಿಭಾಗದಲ್ಲಿ ತರಕಾರಿ ಕತ್ತರಿಸಿ ಮೂಡಿಸಿದ ಮಾದರಿಗಳು, ನಿರುಪಯೋಗಿ ರಟ್ಟು, ಕಾಗದ, ಗೆರಟೆ, ಸ್ಟ್ರಾ, ಪ್ಲಾಸ್ಟಿಕ್ ಬಾಟ್ಲಿಗಳಿಂದ ಸೃಷ್ಟಿಸಿದ ಹೂದಾನಿಗಳು, ಮನೆಗುಡಿಸಲುಗಳ ಮಾದರಿಗಳು, ಟೊಪೊಗ್ರಫಿ ಭೂದೃಶ್ಯಗಳು, ಬಲೂನಿನ ಮುಖವಾಡಗಳು ಹೀಗೆ ಒಂದಕ್ಕಿಂತ ಒಂದು ಆಕರ್ಷಕವಾಗಿದ್ದವು.
ವಿದ್ಯಾರ್ಥಿ ಕಲಾವಿದರಾದ ಆದರ್ಶ ನಾರಾಯಣ, ಚಿಂತನ್ ಎಸ್., ಕಿಶನ್ ಜೆ., ಶ್ರೀರಾಂ, ಶರಧಿ ಅಡಿಗ, ಶ್ರಾವ್ಯ ಕುಲಾಲ್, ಧೃತಿ ಎಸ್., ಶರಣ್ಯ ಭಟ್., ಸೃಜನಾ ಎ. ಶೆಟ್ಟಿ, ಮೊದಲಾದವರ ಸೃಜನಶೀಲ ಚಿತ್ರಗಳು ಹಾಗೂ ಕರಕುಶಲ ವಿಭಾಗದಲ್ಲಿ ಶ್ರೀಕೃಪಾ, ರಚನಾ ಕೋಟ್ಯಾನ್, ಸುಪ್ರಿತಾ, ವಿವನ್ ರಾಯ್ ಅವರ ಕಲಾಕೃತಿಗಳು ಗಮನಾರ್ಹವಾಗಿದ್ದವು.
ಉಪಾಧ್ಯಾಯ ಮೂಡುಬೆಳ್ಳೆ