ಮಣಿಪಾಲ:ದಿ.ಕಾಳಿಂಗ ನಾವಡರ ತಂದೆ ರಾಮಚಂದ್ರ ನಾವಡರು ಕೂಡಾ ಆ ಕಾಲದಲ್ಲಿ ಹೆಸರಾಂತ ಭಾಗವತರಾಗಿದ್ದರು. ಹೀಗಾಗಿ ಕಿರಿಯ ವಯಸ್ಸಿನಲ್ಲಿಯೇ ನಾವಡರಿಗೆ ಯಕ್ಷಗಾನದ ಕುರಿತು ಆಸಕ್ತಿ ಇದ್ದಿತ್ತು. ನವರಾತ್ರಿ ಸಂದರ್ಭದಲ್ಲಿ ಮಗನನ್ನು ಜತೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಚಿಕ್ಕವಯಸ್ಸಿನಲ್ಲಿ ತುಂಬಾ ತುಂಟನಾಗಿದ್ದರಿಂದ ಮಗನನ್ನು ದಾರಿಗೆ ತನ್ನಿ ಎಂದು ಸಾಲಿಗ್ರಾಮದ ಹಂಗಾರಕಟ್ಟೆಯ ಯಕ್ಷಕಲಾ ಕೇಂದ್ರ ಭಾಗವತ ತರಬೇತಿ ಕೇಂದ್ರಕ್ಕೆ ತಂದೆ ಸೇರಿಸಿದ್ದರು.
1973ರಲ್ಲಿ ನಾವಡರು ಯಕ್ಷಕಲಾ ಕೇಂದ್ರಕ್ಕೆ ಸೇರಿದ್ದಾಗ ನಾರಣಪ್ಪ ಉಪ್ಪೂರರು ಗುರುಗಳಾಗಿದ್ದರು. ಚಿಕ್ಕಂದಿನಲ್ಲಿಯೇ ಯಕ್ಷಗಾನದ ಬಗ್ಗೆ ಗೊತ್ತಿದ್ದರಿಂದ ನಾವಡರಿಗೆ ಕಲಿಯಲು ಕಷ್ಟ ಆಗಲಿಲ್ಲ. ತಾಳ, ಲಯ ಎಲ್ಲವನ್ನೂ ಕಲಿತುಕೊಂಡಿದ್ದರು…ಅವೆಲ್ಲಕ್ಕಿಂತ ಹೆಚ್ಚಾಗಿ ಅವರಲ್ಲಿ ಅದ್ಭುತವಾದ ಸ್ವರ ಇದ್ದಿತ್ತು. ಅವರ ತಂದೆಗೂ ಉತ್ತಮವಾದ ಸ್ವರ ಇತ್ತು. ಕಾಳಿಂಗ ನಾವಡರಿಗೆ ಯಾವುದನ್ನೇ ಆಗಲಿ ಕೂಡಲೇ ಗ್ರಹಿಸುವ ಶಕ್ತಿ ಇದ್ದಿತ್ತು. ತುಂಬಾ ಆಸಕ್ತಿಯಿಂದ ಕಲಿತು ಭಾಗವತಿಕೆಯಲ್ಲಿ ಕೃಷಿ ಮಾಡಿ ಅದನ್ನು ಕರಗತ ಮಾಡಿಕೊಂಡಿದ್ದರು.
ತರಬೇತಿ ಕೇಂದ್ರದಲ್ಲಿ ನಾರಾಣಪ್ಪ ಉಪ್ಪೂರರು ಇರದಿದ್ದಾಗ ಕೆಲವೊಮ್ಮೆ ಕಾಳಿಂಗ ನಾವಡರೇ ಕ್ಲಾಸ್ ಅನ್ನು ತೆಗೆದುಕೊಳ್ಳುತ್ತಿದ್ದರು. ನಂತರ ತಮ್ಮ ಪ್ರೀತಿಯ ಶಿಷ್ಯನನ್ನು ಉಪ್ಪೂರರು ಕೋಟ ಶ್ರೀ ಅಮೃತೇಶ್ವರಿ ಮೇಳಕ್ಕೆ ಸೇರಿಸಿದ್ದರು. ಕೇವಲ 16ನೇ ವಯಸ್ಸಿನ ಯುವ ಪ್ರತಿಭೆ ಮುಖ್ಯ ಭಾಗವತರಾಗಿ ಯಕ್ಷಗಾನ ಕಲಾ ಸೇವೆ ಆರಂಭಿಸಿದ್ದರು. ಸುಮಾರು ನಾಲ್ಕೈದು ವರ್ಷ ಉಪ್ಪೂರರ ಜತೆ ತಿರುಗಾಟದಲ್ಲಿ ಪಳಗಿದ ಬಳಿಕ ಆರ್ಥಿಕ ಅವಶ್ಯಕತೆ ಹಿನ್ನೆಲೆಯಲ್ಲಿ ಪೆರ್ಡೂರು ಮೇಳಕ್ಕೆ ಭಾಗವತರಾಗಿ ಸೇರ್ಪಡೆಗೊಂಡಿದ್ದರು. ಕಂಚಿನ ಕಂಠದ ನಾವಡರು ಅಲ್ಪಾವಧಿಯಲ್ಲಿಯೇ ಅಪಾರ ಜನಪ್ರಿಯತೆ ಗಳಿಸಿಬಿಟ್ಟಿದ್ದರು. ನಂತರ ಸಾಲಿಗ್ರಾಮ ಮೇಳದಲ್ಲಿ ಖಾಯಂ ಪ್ರಧಾನ ಭಾಗವತರಾಗಿ ಮೇರು ಶಿಖರವೇರಿದ್ದರು.
ಭಾಗವತಿಕೆಯಲ್ಲಿ ಹೊಸತನ ತಂದ ವ್ಯಕ್ತಿ ಕಾಳಿಂಗ ನಾವಡರು. ಮೊದಲು ಯಕ್ಷಗಾನದಲ್ಲಿ ಭಾಗವತರು ನಿರ್ದೇಶಕರಾಗಿದ್ದರು ಕೂಡಾ ಅದು ಅಷ್ಟೊಂದು ಪರಿಣಾಮಕಾರಿಯಾಗಿರಿಲಿಲ್ಲವಾಗಿತ್ತು. ನಾವಡರು ಅದಕ್ಕೊಂದು ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿದ್ದರು. ಗುರುಗಳ ಬಗ್ಗೆ ಅವರಿಗೆ ಅಪಾರ ಗೌರವ. ಆ ನಿಟ್ಟಿನಲ್ಲಿ ಅವರು ಪ್ರತಿವರ್ಷ ಉಪ್ಪೂರರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸುತ್ತಿದ್ದರು. ಕಲಾಕೇಂದ್ರದ ಕಟ್ಟಡ ಕಟ್ಟುವ ವೇಳೆಯೂ ಸಹ ಕಾರ್ಯದರ್ಶಿಯಾಗಿ ತುಂಬಾ ಕೆಲಸ ಮಾಡಿದ್ದರು. ಕಾಳಿಂಗ ನಾವಡರು ಒಬ್ಬ ಉತ್ತಮ ಸ್ನೇಹಜೀವಿ. ಅಲ್ಲದೇ ರಂಗಸ್ಥಳದಲ್ಲಿ ನಿಯಂತ್ರಣ ಸಾಮರ್ಥ್ಯವನ್ನು ಇಟ್ಟುಕೊಂಡಿರುವ ಸಮರ್ಥ ವ್ಯಕ್ತಿ ಅವರಾಗಿದ್ದರು.
ರಾಜಶೇಖರ್ ಹೆಬ್ಬಾರ್
ಸಾಲಿಗ್ರಾಮ ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿ