Advertisement

ಗಾನವೈಭವ -ತಾಳಮದ್ದಲೆಯಲ್ಲಿ ನಾವಡರ ಸ್ಮರಣೆ

06:46 PM Aug 22, 2019 | Team Udayavani |

ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನದಲ್ಲಿ ಗಾನವೈಭವ ಹಾಗೂ ದಿನಪೂರ್ತಿ ತಾಳಮದ್ದಲೆ ಮೂಲಕ ಬಡಗಿನ ಭಾಗವತಿಕೆಗೆ ಹೊಸ ತಿರುವು ನೀಡಿದ ಕಾಳಿಂಗ ನಾವಡರ ಸಂಸ್ಮರಣೆ ನಡೆಯಿತು. ಸರಣಿ ತಾಳಮದ್ದಯಲ್ಲಿ ಮೊದಲ ಪ್ರಸಂಗ ಭೀಷ್ಮ ಸೇನಾಧಿಪತ್ಯ. ಪ್ರಧಾನ ಪಾತ್ರಗಳು ಭೀಷ್ಮ ಹಾಗೂ ಕೌರವ. ಅರ್ಥಪೂರ್ಣವಾದ ಪೀಠಿಕೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು. ಮುಂದಿನ ಗೀತೋಪದೇಶದಲ್ಲಿನ ಕೃಷ್ಣ ಪಾತ್ರದ ಅರ್ಥಗಾರಿಕೆಯಲ್ಲಿ ಮೂಡಿಬಂದ ದೇಹ, ಆತ್ಮ, ಹುಟ್ಟು, ಸಾವುಗಳ ಕುರಿತ ತತ್ವಜ್ಞಾನದ ಹಿನ್ನೆಲೆಯ ವಿವರಣೆ ಗೀತಾಸಕ್ತರನ್ನು ವಿಶೇಷವಾಗಿ ರಂಜಿಸಿತು.

Advertisement

ಮುಂದಿನ ಪ್ರಸಂಗ ಭೀಷ್ಮಾರ್ಜುನ. ಭೀಷ್ಮ ಹಾಗೂ ಅರ್ಜುನರ ಸಂಭಾಷಣೆಯೊಂದಿಗೆ ಇತರ ಸನ್ನಿವೇಶಗಳೂ ಪ್ರೇಕ್ಷಕರನ್ನು ಸೆರೆ ಹಿಡಿಯುವಲ್ಲಿ ಯಶಸ್ಸನ್ನು ಕಂಡವು. ರಾಜಾ ವಿಕ್ರಮಾದಿತ್ಯ ಪ್ರಸಂಗವು ಸರಣಿಯ ಕೊನೆಯ ಹಾಗೂ ಆ ದಿನದ ಕೊನೆಯ ತಾಳಮದ್ದಲೆ. ಬೆಳಗ್ಗೆ 11 ರಿಂದ ಸಂಜೆ ಏಳರ ತನಕ ನಡೆದ ನಿರಂತರ ಸರಣಿ ತಾಳಮದ್ದಲೆ ಹಾಗೂ ನಡುನಡುವೆ ಗಾನವೈಭವ ನಡೆಯಿತು.

ಕಾರ್ಯಕ್ರಮದ ಇನ್ನೊಂದು ವಿಶೇಷ ಭಾಗವತಿಕೆ ರಂಗದಲ್ಲಿ ಭರವಸೆ ಮೂಡಿಸುವ ಬಾಲಕಿಯರಿಂದ ಗಾನವೈಭವ‌. ಶಿರಸಿ ಸಿದ್ದಾಪುರದ ಕು| ಶ್ರೀರಕ್ಷಾ ಬಡಗಿನ ಭಾಗವತಿಕೆಯ ಮೂಲಕ ಜನರನ್ನು ರಂಜಿಸಿದರು. ರಾಗಗಳ ಮೇಲಿನ ಹಿಡಿತ, ಸಮಧುರ ಶಾರೀರ ವಿಶೇಷ ಗಮನ ಸೆಳೆಯಿತು. ಕು| ಪದ್ಮಪ್ರಿಯಾ ಕಲ್ಲೂರಾಯ ತೆಂಕಿನ ಭಾಗವತಿಕೆಯ ಮೂಲಕ ಗಮನ ಸೆಳೆದ ಮತ್ತೋರ್ವ ಬಾಲಕಿ. ಹಿಮ್ಮೇಳದಲ್ಲಿ ಸಾಥ್‌ ನೀಡಿದವರು ದೇವದಾಸ್‌ಕೂಡ್ಗಿ, ಅಕ್ಷಯ ಆಚಾರ್ಯ(ಬಡಗಿನ ಮದ್ದಲೆ ಹಾಗೂ ಚಂಡೆ), ಸುದರ್ಶನ ಕಲ್ಲೂರಾಯ, ಪವನ್‌ ಕಲ್ಲೂರಾಯ(ತೆಂಕು). ಭಾಗವತರಾಗಿ ಹರಿಕೃಷ್ಣ ಹೊಳ್ಳ, ವಾಸುದೇವ ಪಣಿಯೂರು, ಗೋಪಾಲ ಮಯ್ಯ.

ಅರ್ಥಧಾರಿಗಳಾಗಿ ಕಾಣಿಸಿಕೊಂಡವರು ರವಿ ಕಾಮತ್‌, ವಿಶ್ವನಾಥ ಶೆಣೈ, ರಾಮಕೃಷ್ಣ ಭಟ್‌, ಶಿವಕುಮಾರ್‌ ಅಳಗೋಡು, ಮೋಹನ ಕಲ್ಲೂರಾಯ, ಜನಾರ್ದನ ಐತಾಳ್‌, ಶ್ರೀನಿವಾಸ ಐತಾಳ್‌, ಸುರೇಶ್‌ ಕಲ್ಲೂರಾಯ, ಅಚ್ಯುತ ಭಟ್‌, ರಜನೀಶ್‌ ಹೊಳ್ಳ, ಶ್ರೀಪಾದ ಭಟ್‌, ಬಾಲಕೃಷ್ಣ ಮಂಜ, ಕೀರ್ತನ ಮಿತ್ಯಂತ, ಆದಿತ್ಯ ಹೆಗಡೆ ಮೊದಲಾದವರು.

ಕಾಳಿಂಗ ನಾವಡರ ಮೇಲಿನ ಅಭಿಮಾನದಿಂದ ಸಂಘಟಿತರಾದ ಈ ಹವ್ಯಾಸಿಗಳು ನಾವುಡರ ಸಂಸ್ಮರಣೆಯ ನೆಪದಲ್ಲಿ ವೇದಿಕೆಯನ್ನೇರಿ ಅರ್ಥಧಾರಿಗಳಾಗಿ ಕಾಣಿಸಿದ್ದು ನಾವುಡರ ಪ್ರಭಾವ ಇಂದೂ, ಮುಂದೂ ಶಾಶ್ವತವಾಗಿರುವುದಕ್ಕೆ ಸಾಕ್ಷಿ.

– ಡಾ| ಶ್ರೀಕಾಂತ್‌ ಸಿದ್ದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next