Advertisement

ಕಾಳಿಹುಂಡಿ ಏತ ನೀರಾವರಿ: 300 ಎಕರೆಗೆ ನೀರು

12:40 PM Feb 15, 2017 | |

ತಿ.ನರಸೀಪುರ: ಮನ್ನೂರು ಎಕರೆಗೆ ಹೆಚ್ಚುವರಿಯಾಗಿ ನೀರಾವರಿ ಸೌಲಭ್ಯ ಕಲ್ಪಿಸಲು 4 ಕೋಟಿ ರೂ. ವೆಚ್ಚದಲ್ಲಿ ಕಾಳಿಹುಂಡಿ ಏತ ನೀರಾವರಿ ಯೋಜನೆ ಆರಂಭಿಸಲಾಗುತ್ತಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು.

Advertisement

ಕಾಳಿಹುಂಡಿ ಏತ ನೀರಾವರಿ ಯೋಜನೆಗೆ ಸರ್ವೆ ಕಾರ್ಯ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಪರಿಣಾಮಿಪುರ ಗ್ರಾಮದ ಬಳಿ ಯೋಜನೆಯ ನಕ್ಷೆ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ನಂತರ ಮಾತನಾಡಿದರು. ಕಾವೇರಿಪುರ, ಪರಿಣಾಮಿಪುರ, ಬಣವೆ ಹಾಗೂ ಮೂಡಲಹುಂಡಿ ಗ್ರಾಮಗಳಲ್ಲಿನ 300 ಎಕರೆ ಭೂ ಪ್ರದೇಶದಲ್ಲಿನ ಕೃಷಿ ಭೂಮಿಗೆ ಕಾವೇರಿ ನದಿಯಿಂದ ನೀರಾವರಿ ಸೌಲಭ್ಯ ಕಲ್ಪಿಸಲು ಕಾಳಿಹುಂಡಿಯಲ್ಲಿ ಏತ ನೀರಾವರಿ ಯೋಜನೆ ಮಂಜೂರು ಮಾಡಲಾಗಿದೆ ಎಂದರು.

ಮುಡುಕುತೊರೆ ಏತ ನೀರಾವರಿ ಯೋಜನೆ ಸೇರಿದಂತೆ ತಲಕಾಡು ಹಾಗೂ ಮೇದನಿ ಏತ ನೀರಾವರಿ ಯೋಜನೆಗಳನ್ನು 12 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿದ್ದರಿಂದ ಸುಮಾರು 2 ಸಾವಿರ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯ ವಿಸ್ತರಣೆ ಮಾಡಲಾಗಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಅಲ್ಲದೆ ಸಣ್ಣ ನೀರಾವರಿ ನಿಗಮದಿಂದ ಗ್ರಾಮೀಣಾಭಿವೃದ್ಧಿಗೆ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆ ಹಣವನ್ನು ಸದ್ಬಳಕೆ ಮಾಡಿಕೊಳ್ಳಲು ಪರಿಶಿಷ್ಟ ಜಾತಿ/ ಪಂಗಡ ಸಮುದಾಯಗಳು ವಾಸವಿರುವ ಕಾಲೋನಿಗಳ ರಸ್ತೆ ಅಭಿವೃದ್ಧಿ ಹಾಗೂ ಕೆರೆಗಳ ಆಧುನೀಕರಣಕ್ಕೆ 11.19 ಕೋಟಿ ರೂ. ಬಜೆಟ್‌ನಲ್ಲಿ ಪ್ರಥಮ ಭಾರಿಗೆ ಅನುಮೋದನೆ ನೀಡಲಾಗಿದೆ ಎಂಬ ಮಾಹಿತಿ ನೀಡಿದರು.

ಬಹುಗ್ರಾಮಗಳಿಗೆ ಕಾವೇರಿ ನೀರು: ನದಿ ಮೂಲದಿಂದಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಟಿ.ಬೆಟ್ಟಹಳ್ಳಿ ಸುತ್ತಮುತ್ತಲಿನ 22 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು, 11.73 ಕೋಟಿ ರೂ. ಮಂಜೂರು ಮಾಡಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಕಾಮಗಾರಿ ಆರಂಭಗೊಳ್ಳಲಿದೆ. ಮೂರನೇ ಹಂತದಲ್ಲಿ ದೊಡ್ಡೇಬ್ಟಾಗಿಲು ವ್ಯಾಪ್ತಿಯ 22 ಹಳ್ಳಿಗಳಿಗೆ, ಮೂಗೂರು ವ್ಯಾಪ್ತಿಯ 22 ಹಳ್ಳಿಗಳು ಮತ್ತು ಕಲಿಯೂರು ವ್ಯಾಪ್ತಿಯ 16 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಮಂಜೂರು ಮಾಡಲು ಉನ್ನತ ಮಟ್ಟದ ಸಮಿತಿ ಮುಂದಿಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ.ಲಕ್ಷ್ಮಣ್‌ರಾವ್‌ ಮಾತನಾಡಿ, ನರಸೀಪುರ ವಿಧಾನಸಭಾ ಕ್ಷೇತ್ರದ 213 ಜನವಸತಿ ಪ್ರದೇಶಗಳಲ್ಲಿ ಈಗಾಗಲೇ 120 ಪ್ರದೇಶಗಳಿಗೆ ನೀರಾವರಿ ಸೌಲಭ್ಯವನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಲ್ಪಿಸಲಾಗಿದೆ ಎಂದು ಸಚಿವರಿಗೆ ತಿಳಿಸಿದರು.

Advertisement

ಜಿಪಂ ಸದಸ್ಯ ಟಿ.ಎಚ್‌. ಮಂಜುನಾಥನ್‌, ಮೃಗಾಲಯ ಪ್ರಾಧಿಕಾರದ ನಿರ್ದೇಶಕಿ ಲತಾ ಜಗದೀಶ್‌, ತಾಪಂ ಸದಸ್ಯರಾದ ಆರ್‌. ಚಲುವರಾಜು, ಕೆ.ಎಸ್‌.ಗಣೇಶ್‌, ಮಾಜಿ ಉಪಾಧ್ಯಕ್ಷ ಪ್ರಸನ್ನ, ಮಾಜಿ ಸದಸ್ಯೆ ಮಲ್ಲಾಜಮ್ಮ, ಟಿ.ಬೆಟ್ಟಹಳ್ಳಿ ಕೋಕಿಲ, ಬ್ಲಾಕ್‌ ಕಾಂಗ್ರೆಸ್‌ ಎಸ್ಟಿ ಅಧ್ಯಕ್ಷ ಹಸ್ತಿಕೇರಿ ನಾಗರಾಜು, ಗ್ರಾಪಂ ಮಾಜಿ ಅಧ್ಯಕ್ಷ ಅಕ್ಕೂರು ಮಹೇಶ, ತಾಲೂಕು ಉಪ್ಪಾರ ಜನಕಲ್ಯಾಣ ಟ್ರಸ್ಟ್‌ ಅಧ್ಯಕ್ಷ ಕಾವೇರಿಪುರ ಮಹದೇವಶೆಟ್ಟಿ, ಮಾಜಿ ಧರ್ಮದರ್ಶಿ ಎಂ.ಮಲ್ಲು, ಗುತ್ತಿಗೆದಾರರಾದ ಹೊಸಪುರ ಕೆ.ಮಲ್ಲು, ಜೆ.ಅನೂಪ್‌ಗೌಡ, ಲೋಕೋಪ ಯೋಗಿ ಅಧೀಕ್ಷಕ ಎಂಜಿನಿಯರ್‌ ಸತ್ಯನಾರಾಯಣ, ಕಾರ್ಯಪಾಲಕ ಎಂಜಿನಿಯರ್‌ ರವಿಕುಮಾರ್‌,

ಸಹಾಯಕ ಕಾರ್ಯಪಾಲಕ ವಿನಯ್‌ಕುಮಾರ್‌, ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತರ ಜಿಪಂ ಕಾರ್ಯಪಾಲಕ ಎಂಜಿನಿಯರ್‌ ರಂಗಯ್ಯ, ಎಇಇ ಪಿ.ಲಕ್ಷ್ಮಣ್‌ರಾವ್‌, ಸೆಸ್ಕ್ ಎಇಇ ಎ.ಎಂ.ಶಂಕರ್‌, ಗ್ರಾಪಂ ಸದಸ್ಯರಾದ ಬಿ.ಕೆ.ಗೋಪಾಲ್‌, ವಿಜಾಪುರ ಶಿವಶಂಕರ್‌, ಮಾಜಿ ಅಧ್ಯಕ್ಷ ಶಾಂತರಾಜು, ಮಾಜಿ ಉಪಾಧ್ಯಕ್ಷ ಕೆಬ್ಬೆ ನಾಗರಾಜು, ಪಿಡಿಒ ಕೆ.ಎಂ.ರವೀಂದ್ರ, ಮುಖಂಡರಾದ ಕುಕ್ಕೂರು ಶಂಭುಲಿಂಗಯ್ಯ, ಸೋಮಣ್ಣ, ಹಿರಿಯೂರು ವಿರೇಂದ್ರ(ನವೀನ್‌), ಕೇತಳ್ಳಿ ಸಿದ್ಧಶೆಟ್ಟಿ, ಯರಗನಹಳ್ಳಿ ರಂಗರಾಮು ಇನ್ನಿತರರು ಹಾಜರಿದ್ದರು.

ಕೊಡಗಹಳ್ಳಿ 29 ಹಳ್ಳಿಗಳಿಗೆ 34.02 ಕೋಟಿ ಹಾಗೂ ಕೇತಳ್ಳಿ 16 ಗ್ರಾಮಗಳಿಗೆ 24.04 ಕೋಟಿ ರೂ. ಹಣ ಮಂಜೂರು ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆ. ಒಟ್ಟಾರೆ ನರಸೀಪುರ ವಿಧಾನಸಭಾ ಕ್ಷೇತ್ರದ ಬಹುತೇಕ ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಾವೇರಿ ನದಿಯ ನೀರನ್ನು ಕಲ್ಪಿಸಲಾಗುತ್ತದೆ.
-ಡಾ.ಎಚ್‌.ಸಿ.ಮಹದೇವಪ್ಪ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next