ಕೋಲ್ಕತಾ: ದೇಶದ ಜನಸಾಮಾನ್ಯ ರಿಂದ ಹಿಡಿದು ಪ್ರಧಾನಿಯವರೆಗೆ ಎಲ್ಲರನ್ನೂ ಹೊತ್ತು ಸಾಗಿ, ಭಾರತದ ರಸ್ತೆಯ ರಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಖ್ಯಾತ ಕಾರು “ಅಂಬಾಸಿಡರ್’ ಮತ್ತೂಮ್ಮೆ ಭಾರತದಲ್ಲಿ ಮೈದಳೆಯಲಿದೆಯೇ?
ಫ್ರಾನ್ಸ್‌ನ ಕಾರು ಉತ್ಪಾದನಾ ಸಂಸ್ಥೆ ಪ್ಯೂಗಟ್ ಅಂಬಾಸಿಡರ್ ಕಾರು ಬ್ರ್ಯಾಂಡ್ ಅನ್ನು ಖರೀದಿ ಸಿದ್ದು, ಇಂಥದ್ದೊಂದು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಪ್ಯೂಗಟ್ ಕಂಪೆನಿಯು ಭಾರತದ ಕಾರು ಮಾರುಕಟ್ಟೆಗೆ ಪ್ರವೇಶಿಸಲು ಯತ್ನಿಸು ತ್ತಿದ್ದು, ಅಂಬಾಸಿಡರ್ ಬ್ರ್ಯಾಂಡ್‌ನಲ್ಲೇ ಹೊಸ ಶ್ರೇಣಿಯ ಕಾರುಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದಕ್ಕಾಗಿಯೇ ತಮಿಳುನಾಡಿನಲ್ಲಿ ಕಾರು ಉತ್ಪಾದನಾ ಘಟಕ ಶುರು ಮಾಡಲಿದ್ದು, 700 ಕೋಟಿ ರೂ. ವೆಚ್ಚ ಮಾಡಲಿದೆ.
80 ಕೋಟಿ ರೂ.ಗೆ ಅಂಬಾಸಿಡರ್ ಕಾರು ಬ್ರ್ಯಾಂಡ್ ಅನ್ನು ಪ್ಯೂಗಟ್‌ಗೆ ನೀಡಲು ಸಿ.ಕೆ. ಬಿರ್ಲಾ ಗ್ರೂಪ್ ಮಾಲಕತ್ವದ ಹಿಂದೂಸ್ಥಾನ್ ಮೋಟರ್ಸ್ ಒಪ್ಪಂದ ಮಾಡಿಕೊಂಡಿದೆ. 3 ವರ್ಷಗಳ ಹಿಂದಷ್ಟೇ ಭಾರತದಲ್ಲಿ ಅಂಬಾಸಿಡರ್ ಕಾರಿನ ತಯಾರಿಕೆ ಸ್ಥಗಿತಗೊಂಡಿತ್ತು.
“ಟ್ರೇಡ್ ಮಾರ್ಕ್ ಸಹಿತ ಅಂಬಾಸಿಡರ್ ಬ್ರ್ಯಾಂಡ್‌ನ ಮಾರಾಟ ಕುರಿತು ಪ್ಯೂಗಟ್ ಎಸ್.ಎ. ಗ್ರೂಪ್‌ನೊಂದಿಗೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಉದ್ಯೋಗಿಗಳು ಹಾಗೂ ಸಾಲಗಾರರ ಬಾಕಿಯನ್ನು ತೀರಿಸಲು ನಾವು ಈ ಮೊತ್ತವನ್ನು ಬಳಸಿಕೊಳ್ಳಲಿದ್ದೇವೆ’ ಎಂದು ಸಿ.ಕೆ. ಬಿರ್ಲಾ ಗ್ರೂಪ್ ವಕ್ತಾರರು ತಿಳಿಸಿದ್ದಾರೆ.
ಹೇಗಿತ್ತು ಅಂಬಾಸಿಡರ್ ಹವಾ?: 70 ವರ್ಷಗಳ ಹಿಂದೆ ಹಿಂದೂಸ್ಥಾನ್ ಮೋಟರ್ಸ್ ಕಂಪೆನಿಯು ಮೋರಿಸ್ ಆಕ್ಸ್‌ಫರ್ಡ್ ಸೀರೀಸ್ 2 (ಲ್ಯಾಂಡ್‌ಮಾಸ್ಟರ್) ಅನ್ನು ಸಣ್ಣಪುಟ್ಟ ಬದಲಾವಣೆಯೊಂದಿಗೆ ಹೊಸ ಅವತಾರದಲ್ಲಿ ಬಿಡುಗಡೆ ಮಾಡಿ ಅಂಬಾಸಿಡರ್ ಬ್ರ್ಯಾಂಡ್ ಅನ್ನು ಪರಿಚಯಿಸಿತು. ಅನಂತರ ಅದು ಶರವೇಗದಲ್ಲಿ ರಾಷ್ಟ್ರೀಯ ಐಕಾನ್ ಆಗಿ ಬದಲಾಯಿತು. ವರದಿ ಪ್ರಕಾರ, ತಯಾರಾದ ಒಟ್ಟು ಅಂಬಾಸಿಡರ್ ಕಾರುಗಳ ಪೈಕಿ ಶೇ.16ರಷ್ಟನ್ನು ಭಾರತ ಸರಕಾರವೇ ಖರೀದಿಸಿತ್ತು. ಒಂದು ಕಾಲದಲ್ಲಿ ಇದು ರಾಜಕಾರಣಿಗಳು ಹಾಗೂ ಅಧಿಕಾರಿಗಳ ನೆಚ್ಚಿನ ಬ್ರ್ಯಾಂಡ್ ಆಗಿಬಿಟ್ಟಿತ್ತು.
80ರ ದಶಕದವರೆಗೂ ಅಂದರೆ, ಮಾರುತಿ 800 ಪರಿಚಯವಾಗುವವರೆಗೂ ಭಾರತದ ಮೂಲೆ ಮೂಲೆಗಳ ರಸ್ತೆಗಳಲ್ಲೂ ಇದು ತನ್ನ ಹವಾ ಹಬ್ಬಿಸಿತ್ತು. 1980ರ ವೇಳೆ ವರ್ಷಕ್ಕೆ 24 ಸಾವಿರ ಕಾರುಗಳು ತಯಾರಾಗುತ್ತಿದ್ದರೆ, ಅನಂತರದ ವರ್ಷಗಳಲ್ಲಿ ಇದು ಇಳಿಕೆಯಾಗುತ್ತಾ ಸಾಗಿ, ಕೊನೇ ಹಂತದಲ್ಲಿ ಈ ಸಂಖ್ಯೆ 5ಕ್ಕಿಳಿಯಿತು. 2015ರಲ್ಲಿ ಅಂಬಾಸಿಡರ್ ಉತ್ಪಾದನೆ ಸ್ಥಗಿತಗೊಳಿಸುವುದಾಗಿ ಹಿಂದೂಸ್ಥಾನ್ ಮೋಟಾರ್ಸ್ ಘೋಷಿಸಿತ್ತು. ಅಲ್ಲಿಯವರೆಗೆ ಭಾರತದ ರಸ್ತೆಯನ್ನು ಆಳಿದ್ದ ಅಂಬಾಸಿಡರ್ ಏಕಾಏಕಿ ಅಸ್ತಂಗತವಾಯಿತು.